ತಾಳ - ಸೂಳಾದಿ (ಸುಳಾದಿ) ಸಪ್ತ ತಾಳಗಳು.
ಸಂಗೀತಕ್ಕೆ ರಾಗವು ಸೌಂದರ್ಯವನ್ನು ಕೊಡಬಲ್ಲದಾದರೆ ತಾಳವು ಅಚ್ಚುಕಟ್ಟುತನವನ್ನು ಕಲಿಸುತ್ತದೆ. ಯಾವ ವಸ್ತುವಿಗಾದರೂ ಒಂದು ನಿರ್ದಿಷ್ಟ ಆಕಾರವಿಲ್ಲದಿದ್ದರೆ ಅದು ಚೆನ್ನಾಗಿ ಕಾಣಿಸಲಾರದು. ಅಂತೆಯೇ ಕವಿತೆ ಎಷ್ಟು ಸುಂದರವಾಗಿದ್ದರೂ ಲಯರಹಿತ ಕವಿತೆಯು ತಾಳದ ಚೌಕಟ್ಟಿನೊಳಗಿನ ಕವಿತೆಗೆ ಸಾಟಿಯಾಗಲಾರದು. ಅಡಿಗೋಲಿನಲ್ಲಿರುವ ಹನ್ನೆರಡು ಭಾಗಗಳಲ್ಲಿ ಹೇಗೆ ಸ್ವಲ್ಪವಾದರೂ ವ್ಯತ್ಯಾಸವಿಲ್ಲವೋ ಹಾಗೆಯೇ ತಾಳದ ಭಾಗಗಳಲ್ಲಿ ವ್ಯತ್ಯಾಸವಿರಬಾರದು. ಹೀಗೆ ವ್ಯತ್ಯಾಸವಿರದ ಏಕರೂಪದ ಸಮಯಾವಕಾಶಕ್ಕೆ "ಲಯ" ಎಂದು ಹೆಸರು. ಸಂಗೀತದ ಸಮಯವನ್ನು ಕೆಲವು ನಿರ್ದಿಷ್ಟವಾದ ನಿಯಮಗಳಿಗನುಸರಿಸಿ ಒಂದು ಕ್ರಮಬದ್ಧ ರೀತಿಯಲ್ಲಿ ಅಳವಡಿಸಿಕೊಳ್ಳುವ ವಿಧಾನವೇ "ತಾಳ". ತಾಳದ ಮುಖ್ಯ ಜೀವಾಳ ಲಯ.
ಹಾಡಿನಲ್ಲಿ ಸಾಹಿತ್ಯ ಭಾವಪೋಷಕವಾಗಿರುತ್ತದೆ. ಅದಕ್ಕೆ ಅನುಸಾರವಾಗಿ ರಾಗವು ಹೆಣೆಯಲ್ಪಟ್ಟಿರುತ್ತದೆ. ಅವುಗಳಿಗೆ ಸರಿಯಾಗಬಹುದಾದ "ವೇಗ" ಇರಬೇಕಾದುದು ಅವಶ್ಯ. ನಾವು ಸಂತೋಷದಿಂದಿರುವಾಗ ನಮ್ಮ ಮಾತಿನ ವೇಗ ಸಾಮಾನ್ಯವಾಗಿರುತ್ತದೆ. ಅವಸರದ ಸಮಯದಲ್ಲಿ ಅಥವಾ ಸಿಟ್ಟುಬಂದಾಗ ಮಾತಿನ ವೇಗ ಹೆಚ್ಚುತ್ತದೆ. ದುಃಖ ಬಂದಾಗ ತೀರ ನಿಧಾನವಾಗಿರುತ್ತದೆ. ಇದೇ ತತ್ವವನ್ನು ಸಂಗೀತದಲ್ಲಿ ಕೂಡ ನಾವು ಕಾಣಬಹುದು. ಭಾವಕ್ಕೆ ತಕ್ಕಂತೆ ಹಾಡುಗಳು ನಿಧಾನ, ಮಧ್ಯಮ ಹಾಗೂ ವೇಗ ಗತಿಗಳಲ್ಲಿರುತ್ತದೆ. ನಿಧಾನಗತಿಯಲ್ಲಿ ಹಾಡುವುದಕ್ಕೆ "ವಿಳಂಬಗತಿ" ಎಂದು ಹೆಸರು. ಸಂತೋಷದಿಂದ ಹಾಡುವಾಗ ವೇಗವು ತುಂಬಾ ಹೆಚ್ಚಾಗಿರುತ್ತದೆ. ಇಂತಹ ವೇಗವನ್ನು "ದ್ರುತಗತಿ" ಎನ್ನುವರು. ಇವೆರಡಕ್ಕೂ ಮಧ್ಯದಲ್ಲಿ ಬರುವುದಕ್ಕೆ "ಮಧ್ಯಮಗತಿ" ಎಂದು ಹೆಸರು. ಹಾಡುವ ವೇಗವು ಸಾಹಿತ್ಯ, ಭಾವ, ರಾಗಗಳಿಗೆ ಅನುಗುಣವಾಗಿ ಇರಬೇಕಾದುದು ತೀರಾ ಅವಶ್ಯ. ವೇಗದಲ್ಲಿ ವ್ಯತ್ಯಾಸವಾದರೆ ಹಾಡಿನ ಸೌಂದರ್ಯಕ್ಕೆ ಚ್ಯುತಿಯುಂಟಾಗುವುದು.