ನಾರಾಯಣ ನಿನ್ನ ನಾಮಾಮೃತವನು
(ರಾಗ ಸಾವೇರಿ ಛಾಪುತಾಳ)
ನಾರಾಯಣ ನಿನ್ನ ನಾಮಾಮೃತವನು ನಾಲಿಗೆಯಲಿ ನಿಲಿಸಯ್ಯ ||ಪ||
ಧರಧರಾನಿಭ ಚಾರು ಶೃಂಗಾರಶೇಖರ ತರಳ ನಾರಸಿಂಹ ||ಅ.ಪ||
ನಾರದಸನ್ನುತ ನೀರಜನಾಭ ಸುಹಾರ ಉದಾರ ಅಪಾರ ದಯಾಕರ
ಭೂರಮಣೇಶ ವಿಚಾರವಿದೂರ ಮುರಾರಿ ತ್ರಿವಿಕ್ರಮನೆ
ಸೇರಿದೆ ನಿನ್ನನು ಕೋರಿದ ವರಗಳ ಬೀರುವೆನೆಂದು ವಿಚಾರ ಬಿಡಿಸೊ ಎನ್ನ
ಮಾರಜನಕ ನಿನ್ನಾದರದಲಿ ಎನ್ನ ಸೆರೆ ತೆಗೆಯೋ ಶ್ರೀಶೂರತನಯ ಹರಿ||
ಅಂಡವಾಹನ ಕುಂಡಲಿಶಯನ ಪ್ರಚಂಡವಿಕ್ರಮ ರಿಪುಖಂಡನ ಈ ಕ್ಷಿತಿ-
ಮಂಡಲದೊಳು ಉದ್ದಂಡ ದೈತ್ಯರ ಚೆಂಡಿಪ ನರಹರಿಯೆ
ಪುಂಡರೀಕಾಕ್ಷ ವೇದಾಂತ ರಕ್ಷಣ ಮಣಿಕುಂಡಲಧರ ಅಖಂಡಲನುತ ರವಿ ಮಂಡಲಾಶ್ರಿತ ಬ್ರ-
ಹ್ಮಾಂಡನಾಯಕ ನಿನ್ನ ತೊಂಡನ ರಕ್ಷಿಸೊ ಪಾಂಡವಪ್ರಿಯ ಹರಿ ||
ಮಂದರಧರ ಗೋವಿಂದಜನಾರ್ಧನ ಇಂದುವದನ ಮಕರಂದಭೂಷಣ ಗೋ-
ವೃಂದಗಳಿಗೆ ಆನಂದವ ತೋರುವ ಅಂತರಂಗದಿ ನೀನೆ ಕಂದನ ಲಾಲಿಸು
ಇಂದಿಗೆ ಎನ್ನನು ಸಲಹಬೇಕೆಂದು ಬೇಡುವೆ ಮುಚುಕುಂದವರದ
ತಂದೆ ಎನ್ನ ರಕ್ಷಿಸೊ ದೀನಬಂಧು ಶ್ರೀಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments