ಹಬ್ಬ ಹರಿದಿನಗಳಿದ್ದಾಗ ನಮ್ಮೂರಲ್ಲಿ ಭಜನೆ-ಕೀರ್ತನೆಗಳ ಮಹಾಪೂರವೇ ಹರಿಯುತ್ತದೆ. ಊರಿನ ಜನ ಧರ್ಮ-ತತ್ವ-ನೀತಿಗಳನ್ನೊಳಗೊಂಡ ಭಜನೆ-ಕೀರ್ತನೆಗಳನ್ನು ಮನದಣಿಯುವತನಕ ಹಾಡಿ ಮೈಮರೆಯುತ್ತಾರೆ.ಕೆಲವೊಮ್ಮೆ ನಾನು ಸಹ ಆ ಕೀರ್ತನೆಗಳನ್ನು ಕೇಳಿದ್ದುಂಟು. "ಅಂಬಿಗ ನಾ ನಿನ್ನ ನಂಬಿದೆ", "ಎನ್ನ ಮನದ ಡೊಂಕು ತಿದ್ದೇಯಾ...", "ಗಿಳಿಯು ಪಂಜರದೊಳಿಲ್ಲ..", "ಮಾನವ ಜನ್ಮ ದೊಡ್ಡದೊ.." ಹಾಗು ಅನೇಕ ಹಾಡುಗಳು ಪದೇ ಪದೇ ಕಿವಿಯ ಮೇಲೆ ಬೀಳುತ್ತಲೇ ಇರುತ್ತವೆ. ಬಹಳ ದಿನಗಳಿಂದ ಕನ್ನಡ ಸಾಹಿತ್ಯದಲ್ಲಿ ಹಚ್ಚ ಹಸುರಾಗುಳಿದ ಕೀರ್ತನಕಾರರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬೇಕೆಂಬ ಆಸೆ ಇದ್ದರೂ ಸೋಮಾರಿತನದಿಂದ ಅದರ ಗೊಡವೆಗೆ ಹೋಗಿರಲಿಲ್ಲ. ಕೊನೆಗೂ ಆ ಸಾಹಸ ಮಾಡಿದೆ.
ಇಡೀ ದಾಸ ಸಾಹಿತ್ಯವನ್ನು ಅವಲೋಕಿಸಿದರೆ, ದಾಸರೆಲ್ಲಾ ಹಾಡಿದ್ದನ್ನೆ ಹಾಡಿದ್ದಾರಲ್ಲ ಎನಿಸಿಬಿಡುತ್ತದೆ. ಯಾವುದೇ ಕೀರ್ತನೆಯನ್ನು ತೆಗೆದುಕೊಳ್ಳಿ ಅದರ ಉದ್ದೇಶ ಇಷ್ಟೆ, "ಆತ್ಮವಿಮರ್ಶೆ, ಆತ್ಮನಿಂದನೆ, ಮೋಕ್ಷ, ಮುಕ್ತಿ, ತತ್ವ ಮತ್ತು ನೀತಿ." ಆಧುನಿಕ ಕನ್ನಡ ಸಾಹಿತ್ಯವನ್ನು ಹೊರತುಪಡಿಸಿದರೆ, ಇಡೀ ಕನ್ನಡ ಸಾಹಿತ್ಯದಲ್ಲಿ ಕಾಣುವ ಸಾಹಿತ್ತಿಕ ವಸ್ತು ಬರೀ "ಧರ್ಮ-ತತ್ವ-ನೀತಿ" ಮಾತ್ರ. ೧೨ನೇ ಶತಮಾನದ ವಚನಕಾರರಿಗಿಂತ ಮುಂಚೆ ಪಂಪನ ಕಾಲದಲ್ಲಿ (ಪಂಪಯುಗದಲ್ಲಿ) ಕವಿಗಳು ಹೇಳಿದ್ದಿಷ್ಟೆ, "ಸಾಹಿತ್ಯ ಇರುವುದು ಜನರ ಶ್ರೇಯಸ್ಸನ್ನು ಸಾಧಿಸಲು. ಇದು ಪಾಪ, ಇದು ಪುಣ್ಯ, ಇದು ಹಿತ, ಇದು ಅಹಿತ, - ಎನ್ನುವುದನ್ನು ತಿಳಿಯ ಹೇಳಲು. ಒಟ್ಟಿನಲ್ಲಿ ಪುರುಷಾರ್ಥ ಪ್ರಾಪ್ತಿಗೋಸ್ಕರ [ಜಿ. ಎಸ್. ಶಿವರುದ್ರಪ್ಪ, ಸಾಮಾನ್ಯನಿಗೆ ಸಾಹಿತ್ಯ ಚರಿತ್ರೆ]." ಕೆಲವೊಮ್ಮೆ ಧರ್ಮದ ಉದ್ದೇಶವೇ ಕಾವ್ಯದ ಉದ್ದೇಶವಾಗಿದ್ದುಂಟು. ಪಂಪನ ನಂತರ ೧೨ನೇ ಶತಮಾನದಲ್ಲಿ ಬಂದ ವಚನಕಾರರು ಸಾಮಾಜಿಕ ಕ್ರಾಂತಿಯನ್ನೇ ಮಾಡಿದ್ದರು. ಆದರೆ ಅವರ ಸಾಹಿತ್ಯದ ವಸ್ತು ಮಾತ್ರ ಮತ್ತೆ ಅದೇ, "ಧರ್ಮ-ತತ್ವ-ನೀತಿ". ೧೫ನೇ ಶತಮಾನದಲ್ಲಿ ಬಂದ ಕುಮಾರವ್ಯಾಸನು ಕೂಡ ಸಾಹಿತ್ಯದ ವಸ್ತುವಿನ ಆಯ್ಕೆಯಲ್ಲಿ ಪಂಪನ ಹಾದಿಯನ್ನೇ ಹಿಡಿದನು. ವಚನಕಾರರ ನಂತರ ಬಂದ ವ್ಯಾಸರಾಯರು, ಪುರಂದರದಾಸರು, ಕನಕದಾಸರು ಕೂಡ ತಮ್ಮ ಕೀರ್ತನೆಗಳ ವಸ್ತುವಿನ ಆಯ್ಕೆಯಲ್ಲಿ ಹೆಚ್ಚು ಕಮ್ಮಿ ವಚನಕಾರರ ಹಾದಿಯನ್ನೇ ಹಿಡಿದರು. ’ಪಂಪ-ಕುಮಾರವ್ಯಾಸರು’ ಮತ್ತು ’ವಚನಕಾರರು-ದಾಸರಲ್ಲಿರುವ’ ವ್ಯತ್ಯಾಸ ಇಷ್ಟೆ, "ಪಂಪ-ಕುಮಾರವ್ಯಾಸರು ಸಂಸಾರಿಕ ಜೀವನದ ನಶ್ವರತೆಯನ್ನು ಎತ್ತಿಹಿಡಿದು, ಮೋಕ್ಷವೇ ಜೀವನದ ಅಂತಿಮ ಗುರಿ ಎಂದರು. ಆದರೆ ವಚನಕಾರರು-ದಾಸರು ಸಂಸಾರಿಕ ಜೀವನವನ್ನು ಅತ್ಯಂತ ಸಹಾನುಭೂತಿಯಿಂದ ನೋಡಿ, ಸಂಸಾರದಲ್ಲಿದ್ದುಕೊಂಡೇ ಭಗವಂತನ ಸಹಾಯದಿಂದ ಮುಕ್ತಿಯನ್ನು ಪಡೆಯಬಹುದೆಂದರು." ನಂತರ ಬಂದ ಹರಿಹರ ಕೂಡ ರಗಳೆಗಳ ರೂಪದಲ್ಲಿ ಭಕ್ತಿಯ ಮಾರ್ಗವನ್ನೇ ಹಿಡಿದ, ರಾಘವಾಂಕ ಮತ್ತೆ ಪಂಪ-ಕುಮಾರವ್ಯಾಸರ ಹಾದಿಯನ್ನು ತುಳಿದ. ಇಡೀ ಕನ್ನಡ ಸಾಹಿತ್ಯದಲ್ಲಿ ಆಧುನಿಕ ಕನ್ನಡ ಸಾಹಿತ್ಯ ಮಾತ್ರ ವೈವಿಧ್ಯತೆಯಿಂದ ಕೂಡಿದೆ ಅನಿಸುತ್ತದೆ. ಸಾಹಿತ್ತಿಕ ವಸ್ತುವಿನ ದೃಷ್ಟಿಯಿಂದ ಅದೇನೆ ಇದ್ದರೂ, ಸಾಮಾಜಿಕ ಮತ್ತು ಸಂಗೀತದ ದೃಷ್ಟಿಯಿಂದ ವಚನಕಾರರ ಮತ್ತು ದಾಸರ ಕೊಡುಗೆ ಅಪೂರ್ವವಾದುದು. ಬಸವಾದಿ ಶರಣರು ಕನ್ನಡ ಸಾಹಿತ್ಯಕ್ಕೆ ವಚನಗಳೆಂಬ ಅಪೂರ್ವ ಕಾಣಿಕೆ ಕೊಟ್ಟಂತೆ ಪುರಂದರಾದಿ ದಾಸರು ಕೀರ್ತನೆಳಿಂದ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು.