ವೇಂಕಟೇಶ ಬೇಡಿಕೊಂಬೆ

ವೇಂಕಟೇಶ ಬೇಡಿಕೊಂಬೆ

ರಾಗ ಆರಭಿ/ಆದಿ ತಾಳ ವೇಂಕಟೇಶ ಬೇಡಿಕೊಂಬೆ ಕೃಪೆಯ ಪಾಲಿಸೋ, ಬ್ರಹ್ಮ || ಪಲ್ಲವಿ || ಶಂಕರಾದಿ ವಂದ್ಯ ಎನಗೆ ಮುಕ್ತಿ ತೋರಿಸೊ || ಅನು ಪಲ್ಲವಿ || ನಷ್ಟ ಮೊದಲಾದಂಥ ಕಷ್ಟ ಬಿಡಿಸೋ, ನಿನ್ನ ಪಟ್ಟದ ರಾಣಿಗೆ ಹೇಳಿ ಪದವಿ ಕೊಡಿಸೊ ಇಷ್ಟ ಭಕ್ತ ಜನರೊಳು ಎನ್ನ ಸೇರಿಸೊ ಈ ಸೃಷ್ಟಿಯೊಳು ನಿನ್ನ ದಾಸರ ದಾಸನೆನಿಸೊ || ೧ || ಉಟ್ಟು ಉಂಡು ಮಿಕ್ಕಿದ್ದೆಲ್ಲ ಎನಗೆ ಹಾಕಿಸೊ ಪೊಂ ಬಟ್ಟಲೊಳಗಿನ ಹಾಲು ಉಚ್ಛಿಷ್ಟ ಹಾಕಿಸೊ ಘಟ್ಯಾಗಿ ಸಕ್ಕರೆ ತುಪ್ಪ ರೊಟ್ಟಿ ಉಣಿಸೋ ಮುಂದೆ ಹುಟ್ಟಿ ಬಹ ಜನ್ಮಂಗಳ ಎನಗೆ ಬಿಡಿಸೊ || ೨ || ಕಿಟ್ಟಗಟ್ಟಿದ ಕಬ್ಬಿಣಕ್ಕೆ ಪುಟವ ಹಾಕಿಸೊ ಉ ತ್ಕೃಷ್ಟ ಬಂಗಾರದೊಳು ಎನ್ನ ಸೇರಿಸೊ ಬೆಟ್ಟಿಗೆ ಉಂಗುರ ಮಾಡಿ ಎನ್ನ ಧರಿಸೊ, ಸ್ವಾಮಿ ದಿಟ್ಟ ಪುರಂದರವಿಠಲನೆ ದಯದಿ ಪಾಲಿಸೊ || ೩ || ~~~ * ~~~ ಪಟ್ಟದ ರಾಣಿಗೆ - ಲಕ್ಷ್ಮಿಗೆ. ಉಚ್ಛಿಷ್ಟ - ಎಂಜಲು, ದೇವರ ಪ್ರಸಾದ. ಪೊಂಬಟ್ಟಲು - ದೇವರಿಗೆ ಎಡೆ ಇಡಲು ಬಳಸುವ ಬಂಗಾರದ ಪಾತ್ರೆ. ಹುಟ್ಟಿ ಬಹ - ಹುಟ್ಟಿ ಬರುವ, ಮುಂದೆ ಬರಬಹುದಾದ. ಕಿಟ್ಟಗಟ್ಟಿದ - ಕಿಲುಬು ಕಟ್ಟಿದ. [ಪುರಂದರ ಸಾಹಿತ್ಯ ದರ್ಶನ - ಭಾಗ ೧]
ದಾಸ ಸಾಹಿತ್ಯ ಪ್ರಕಾರ