(ಶ್ರೀಮತಿ ಟಿ. ಎಸ್. ವಸಂತಮಾಧವಿ ಅವರು ಸಂಗೀತವಿದುಷಿ ಮಾತ್ರವಷ್ಟೇ ಅಲ್ಲ; ಉತ್ತಮ ಬರಹಗಾರ್ತಿ ಕೂಡಾ. ಅವರು ದಾಸ ಸಾಹಿತ್ಯ ಹಾಗೂ ನಮ್ಮ ಸಮಾಜದ ಮೇಲೆ ಅದರ ಪ್ರಭಾವದ ಬಗ್ಗೆ ಬರೆದ ಲೇಖನವೊಂದು ಹರಿದಾಸ ಸಂಪದದ ಓದುಗರಿಗಾಗಿ ಇಲ್ಲಿದೆ. ಈ ಮೊದಲು ಈ ಬರಹವು ಉತ್ತರ ಕ್ಯಾಲಿಫೋರ್ನಿಯ ಕನ್ನಡ ಕೂಟದ ಸ್ವರ್ಣಸೇತು ಸಂಚಿಕೆಯಲ್ಲಿ ಪ್ರಕಟವಾಗಿತ್ತು. - ಹಂಸಾನಂದಿ)
ಸಂಗೀತವು ನಮ್ಮ ದೇಶದ, ಧರ್ಮದ, ಸಂಸ್ಕೃತಿಯ ಹಾಗೂ ಸಾಮಾಜಿಕ ಜೀವನದ ಅವಿಭಾಜ್ಯ ಅಂಗ. ವೇದಗಳ ಕಾಲದಿಂದಲೂ, ಸಂಗೀತಕ್ಕೆ ಎಲ್ಲ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕ್ರಿಯೆಗಳಲ್ಲಿಯೂ ಪಾತ್ರವಿರುವುದು ಕಂಡುಬಂದಿದೆ. ಯಜ್ಙ ಯಾಗಾದಿಗಳು ನಡೆಯುವಾಗಲೂ, ನಿಶ್ಚಿತ ಸಮಯಗಳಲ್ಲಿ, ಇಂತಿಂತಹ ವೇದಮಂತ್ರಗಳನ್ನು ಸಾಮಕರು ಗಾಯನಮಾಡಬೇಕೆನ್ನುವ ವಿಧಿ ಇತ್ತು. ವೇದಗಳು ಕೇವಲ ಧಾರ್ಮಿಕ ಅಂಶಗಳನ್ನು ಮಾತ್ರ ತಿಳಿಸುವುದಿಲ್ಲ. ಸಾಮಾಜಿಕ ವ್ಯವಸ್ಥೆ ನೇರವಾಗಿರಲು ಬೇಕಾದ ಅನೇಕಾನೇಕ ಸೂತ್ರಗಳನ್ನು ವಿಧಿ - ನಿಷೇಧಗಳ ಮೂಲಕ ಖಚಿತವಾಗಿ ಬೋಧಿಸುತ್ತವೆ. ಇವೆಲ್ಲವೂ ವಿದ್ಯಾವಂತರಾದವರಿಗೆ, ಪಂಡಿತರಿಗೆ ಅರ್ಥವಾಗುವ ಸಂಸ್ಕೃತ ಭಾಷೆಯಲ್ಲಿವೆ.
ಮುಂದೆ ಸುಮಾರು ಎಂಟನೇ ಶತಮಾನದಲ್ಲಿ ಆದಿ ಶಂಕರಾಚಾರ್ಯರು, ದೇವ-ದೇವತೆಗಳ ಪರವಾಗಿ ಸ್ತೋತ್ರಗಳನ್ನು ರಚಿಸುವುದರೊಡನೆ, ಸಂಸಾರದಲ್ಲಿನ ಲೋಪದೋಷಗಳನ್ನೂ ಎತ್ತಿ ಹೇಳುತ್ತ, ಈ ದೋಷಯುಕ್ತ ಜೀವನದಿಂದ ಮುಕ್ತರಾಗಲು ಭಗವಂತನೆಡೆಗೆ ಮನಸ್ಸು ತಿರಿಗಿಸುವುದನ್ನು ಪರಿಹಾರವೆಂದು ಸೂಚಿಸಿದ್ದಾರೆ. ಇದೆಲ್ಲವೂ ಸಹ ಸಂಸ್ಕೃತ ಭಾಷೆಯಲ್ಲಿಯೇ ಇರುವುದು.