ಪದ / ದೇವರನಾಮ

ದಾಸರ ಪದಗಳು

ಭಂಡನಾದೆನು ನಾನು ಸಂಸಾರದಿ

(ರಾಗ ಮುಖಾರಿ ಝಂಪೆತಾಳ) ಭಂಡನಾದೆನು ನಾನು ಸಂಸಾರದಿ ಕಂಡು ಕಾಣದ ಹಾಗೆ ಇರಬಹುದೆ ನರಹರಿಯೆ ||ಪ|| ಕಂಡಕಲ್ಲುಗಳಿಗೆ ಕೈಮುಗಿದು ಸಾಕಾದೆ ದಿಂಡೆಕಾರರ ಮನೆಗೆ ಬಲು ತಿರುಗಿದೆ ಶುಂಡಾಲನಂತೆನ್ನ ಮತಿ ಮಂದವಾಯಿತೈ ಪುಂಡರೀಕಾಕ್ಷ ನೀ ಕರುಣಿಸೈ ಬೇಗ ||೧|| ನಾನಾ ವ್ರತಂಗಳನು ನಾ ಮಾಡಿ ಬಳಲಿದೆನು ಏನಾದರೂ ಎನಗೆ ಫಲವಿಲ್ಲವು ಆ ನಾಡು ಈ ನಾಡು ಸುತ್ತಿ ನಾ ಮರುಳಾದೆ ನೀನಾದರೂ ಕೃಪೆಯ ಇಡು ಬೇಗ ಹರಿಯೆ ||೨|| ಬುದ್ಧಿಹೀನರ ಮಾತು ಕೇಳಿ ನಾ ಮರುಳಾದೆ ಶುದ್ಧಿಯಿಲ್ಲದೆ ಮನವು ಕೆಟ್ಟು ಹೋಯ್ತು ಸಿದ್ಧನುತ ಸಿರಿಪುರಂದರವಿಠ್ಠಲ ತತ್ಪದ- ಸಿದ್ಧಿಯನು ದಯಗೈದು ಉಳುಹು ನೀ ಎನ್ನ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಯಾಕೆ ಈ ದೇಹವನು ದಂಡಿಸುವೆ ವ್ಯರ್ಥ

( ರಾಗ ಮುಖಾರಿ ಝಂಪೆ ತಾಳ) ಯಾಕೆ ಈ ದೇಹವನು ದಂಡಿಸುವೆ ವ್ಯರ್ಥ, ಬಿಡ- ದೇಕಚಿತ್ತದಲಿ ಲಕ್ಷ್ಮೀಪತಿ ಎನ್ನದೆ ||ಪ|| ಸ್ನಾನವನು ಮಾಡಿ ನೀ ಧ್ಯಾನಿಸುವೆನೆಂದೆನುತ ಮೌನದಲಿ ಕುಳಿತು ಬಕಪಕ್ಷಿಯಂತೆ ಹೀನ ಬುದ್ಧಿಗಳ ಯೋಚಿಸಿ ಕುಳಿತು ಫಲವೇನು ದಾನವಾಂತಕನ ಧ್ಯಾನಕೆ ಮೌನವುಂಟೆ ||೧|| ಜಪವ ಮಾಡುವೆನೆನುತ ಕಪಟ ಬುದ್ಧಿಯ ಗುಣಿಸಿ ಗುಪಿತದಿಂದಲಿ ಕುಳಿತು ಫಲವು ಏನೊ ಅಪರಿಮಿತ ಮಹಿಮ ನಾರಾಯಣಾ ಎಂದೆನಲು ಸಫಲವಲ್ಲದೆ ಬೇರೆ ಜಪವು ತಾನುಂಟೆ ||೨|| ಹಿಂದಜಾಮಿಳಗೆ ನಾಮಮಾತ್ರದಿ ಮುಕುತಿಯನು ಚಂದದಿಂ ಕರುಣಿಸಿದುದಿಲ್ಲವೇನೊ ಸಂದೇಹವನು ಬಿಟ್ಟು ನೀನೊಂದು ಕ್ಷಣ ಬಿಡದೆ ತಂದೆ ಪುರಂದರ ವಿಠ್ಠಲ ಎನು ಕಂಡ್ಯ ಮನವೆ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ರಕ್ಷಿಸು ಲೋಕನಾಯಕನೇ ಎನ್ನನು

(ರಾಗ ನೀಲಾಂಬರಿ ಅಷ್ಟ ತಾಳ) ರಕ್ಷಿಸು ಲೋಕನಾಯಕನೇ ಎನ್ನನು ರಕ್ಷಿಸು ಲೋಕನಾಯಕನೇ ||ಪ|| ಎಷ್ಟೆಷ್ಟು ಜನ್ಮವ ಕಳೆದೆನೊ, ಇ- ನ್ನೆಷ್ಟೆಷ್ಟು ಜನ್ಮವ ಪಡೆವೆನೊ ಕಷ್ಟಪಡಲಾರೆ ಕೃಷ್ಣ ಕೃಪೆಯಿಟ್ಟು ಇಷ್ಟವ ಪಾಲಿಸೊ ಇಭರಾಜವರದನೆ ||೧|| ಬಾಲತನದಲಿ ಬಹು ಬೆಂದೆನೈ, ನಾ ಲೀಲೆಯಿಂದಲಿ ಕಾಲ ಕಳೆದೆನು ಲೋಲಲೋಚನ ಎನ್ನ್ ಮೊರೆ ಕೇಳುತಾ ಬೇಗ ಜಾಲವ ಮಾಡದೆ ಪಾಲಿಸೈ ನರಹರಿ ||೨|| ಮುದುಕನಾಗಿ ಚಿಂತೆ ಪಡುವೆನು, ನಾ ಕದಡು ದುಃಖವ ಪಡಲಾರೆನು ಸದರವಲ್ಲವು ಶ್ರೀ ಪುರಂದರವಿಠ್ಠಲ ಮುದದಿಂದ ರಕ್ಷಿಸು ಖಗರಾಜಗಮನ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮಾತಿಗೆ (/ತನಗೆ) ಬಾರದ ವಸ್ತು ಎಷ್ಟಿದ್ದರೇನು

( ರಾಗ ಮುಖಾರಿ ಝಂಪೆ ತಾಳ) ಮಾತಿಗೆ (/ ತನಗೆ) ಬಾರದ ವಸ್ತು ಎಷ್ಟಿದ್ದರೇನು, ಹೋ- ತಿನ ಕೊರಳಲ್ಲಿ ಮೊಲೆಯಿದ್ದರೇನು ||ಪ|| ತಾನು ಉಣ್ಣದ ವಸ್ತು ತಾಳದುದ್ದ ಇದ್ದರೇನು ದಾನವಿಲ್ಲದ ಮನೆಯು ಹಿರಿದಾದರೇನು ಹೀನ ಗುಣದವನಿಗೆ ಹಿರಿಯತನ ಬಂದರೇನು ಶ್ವಾನನಾ ಮೊಲೆಯೊಳಗೆ ಹಾಲಿದ್ದರೇನು ||೧|| ವಾದಿಸುವ ಮಗನು ತಾ ವಯ್ಯಾರದಲಿದ್ದರೇನು ಕಾಡುವ ಸ್ತ್ರೀಯು ಸುಂದರಿಯಾದರೇನು ? ಕ್ರೋಧವನು ಮಾಡುವವ ಸಹೋದರನಾದರೇನು ಮಾದಿಗನ ಮನೆಯಲ್ಲಿ ಮದುವ್ಯಾದರೇನು ||೨|| ಹೋಗದೂರಿಗೆ ಹಾದಿಯನು ಕೇಳಿ ಮಾಡುವುದೇನು ಯೋಗಿಯಾದವನೊಡನೆ ಪರಿಹಾಸ್ಯವೇನು ಭೋಗಿ ಶ್ರೀ ಪುರಂದರವಿಠ್ಠಲನ್ನ ನೆನೆಯದವ ಯೋಗಿಯಾದರೂ ಭೋಗಿಯಾದರೂ ಏನಯ್ಯಾ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಆರಿಗಾದರೂ ಪೂರ್ವ ಕರ್ಮ ಬಿಡದು

( ರಾಗ ಮುಖಾರಿ ಝಂಪೆತಾಳ) ಆರಿಗಾದರೂ ಪೂರ್ವ ಕರ್ಮ ಬಿಡದು, ಅಜ ಹರ ಸುರ ಮುನಿಗಳ ಕಾಡುತಿಹುದು ||ಪ|| ವೀರ ಭೈರವನಂತೆ ತಾನು ಬತ್ತಲೆಯಂತೆ ಮಾರಿ ಮಸಣಿಗಳಂತೆ ಕೂಳನ್ನು ತಿಂಬರಂತೆ ಸೂರ್ಯ ಚಂದ್ರಮರಂತೆ ರಾಹುವಟ್ಟುಳಿಯಂತೆ ಮೂರೆರಡು ತಲೆ ಹರಗೆ ಕೈಯೊಳು ಕರ್ಪರವಂತೆ ||೧|| ಶಿಷ್ಟ ಹರಿಶ್ಚಂದ್ರಗೆ ಮಸಣದಡಿಗೆಯು ಅಂತೆ ಸೃಷ್ಟಿಸುವ ಬೊಮ್ಮನಿಗೆ ಶಿರವು ತಾ ಹೋಯಿತಂತೆ ಅಷ್ಟ ದಿಕ್ಪಾಲಕರು ಸೆರೆಯಾಗಿರುವರಂತೆ ಕಟ್ಟುಗ್ರದಿಂದ ಇಂದ್ರನಿಗೆ ಮೈಯೆಲ್ಲ ಕಣ್ಣಂತೆ ||೨|| ಹನ್ನೊಂದಕ್ಷೋಹಿಣಿ ಬಲವುಳ್ಳ ಕೌರವನು ರಣದೊಳಗೆ ತೊಡೆ ಮುರಿದು ಬಿದ್ದು ತಾನಿಹನಂತೆ ವನಜಾಕ್ಷ ಸಿರಿಯರಸ ಬಲಿಯ ಬೇಡಿದನಂತೆ ವನಿತೆ ಆ ಧರ್ಮಜನ ತಾಯಿ ತಿರಿದುಂಬಳಂತೆ ||೩|| ಧರೆಗೆ ಧರ್ಮಜನಂತೆ ಕಂಕ ಭಟ್ಟನು ಅಂತೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸಾರಿ ದೂರಿ ಹೇಳುತೇನೆ ಕೆಟ್ಟಿ ಕಂಡ್ಯ ಬುದ್ಧಿ ಮನವೆ

(ರಾಗ ರೇಗುಪ್ತಿ ಆದಿತಾಳ) ಸಾರಿ ದೂರಿ ಹೇಳುತೇನೆ ಕೆಟ್ಟಿ ಕಂಡ್ಯ ಬುದ್ಧಿ ಮನವೆ ದೂರೋ ಬುದ್ಧಿ ಮಾಡಬೇಡ ಕೈಯಲಿ ಕೋ ಕಡ್ಡಿ , ನಿನ್ನ ಕೈಯಲಿ ||ಪ|| ಕೋಪವನ್ನೆ ಮಾಡದಿರು , ಪಾಪಕೆ ಗುರಿಯಾಗದಿರು ಶ್ರೀಪತಿಯ ಧ್ಯಾನವನ್ನು ನೀ ಪಠಿಸುತಿರು ಮನವೆ ||೧|| ಅಷ್ಟಮದದಿ ಬೆರೆಯದಿರು , ನಷ್ಟಕೆ ಗುರಿಯಾಗದಿರು ದುಷ್ಟಸಂಗವನ್ನು ಮಾಡಿ ಭ್ರಷ್ಟನಾಗಬೇಡ ಮನವೆ ||೨|| ಸಿರಿಯ ಮೆಚ್ಚಿ ಮೆರೆಯದಿರು , ಬರಿದೆ ಹೊತ್ತು ಕಳೆಯದಿರು ಪರರ ನಿಂದೆಯನ್ನು ಮಾಡಿ ನರಕಿಯಾಗಬೇಡ ಮನವೆ ||೩|| ಕಾಯವನ್ನು ನಂಬದಿರು , ಮಾಯಕೆ ಮರುಳಾಗದಿರು ಸ್ತ್ರೀಯರನ್ನು ಕಂಡು ನೀನು ಬಯಸದಿರು ಮರುಳು ಮನವೆ ||೪|| ನಿನ್ನ ನಿಜವ ನಂಬದಿರು , ಉನ್ನತಾಸೆ ಮಾಡದಿರು ಚನ್ನಕೇಶವನ್ನ ಪಾದವನ್ನು ನೀನು ನಂಬು ಮನವೆ ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನೀನುಪೇಕ್ಷೆಯ ಮಾಡೆ ಬೇರೆ ಗತಿ ಯಾರೆನಗೆ

(ರಾಗ - ಕಲ್ಯಾಣಿ ಝಂಪೆತಾಳ) ನೀನುಪೇಕ್ಷೆಯ ಮಾಡೆ ಬೇರೆ ಗತಿ ಯಾರೆನಗೆ ನಿಗಮಗೋಚರ ಮುಕುಂದ ಗಾನರಸಲೋಲ ಆಗಮಶೀಲ ಭಕ್ತಪರಿಪಾಲ ಗೋಪಾಲ ಬಾಲಲೀಲ ||ಪ|| ಜಪತಪಾನುಷ್ಠಾನ ಜಪಿತನೆಂದೆನಿಸುವರೆ ಜಾಣತನವದರೊಳಗಿಲ್ಲ ಅಪರಿಮಿತಕರ್ಮವನು ಅನುಸರಿಸಿ ನಡೆವುದಕೆ ನಿಪುಣತ್ವ ಮೊದಲೇ ಇಲ್ಲ ಗುಪಿತದಲಿ ದಾನಧರ್ಮವ ಮಾಳ್ಪೆನೆಂದರೆ ಘನವಾದ ಧನವು ಇಲ್ಲ ಚಪಲ ನಿಪುಣತ್ವ ಜಾಣತ್ವವಿಲ್ಲದಿಹ ಸುಪವಿತ್ರ ನೀನೆ ಅಲ್ಲದಿಲ್ಲ ||೧|| ಆನೆ ಮೊಸಳೆಗೆ ಸಿಲ್ಕಿ ಅರೆಬಾಯಿ ಬಿಡುತಿರಲು ಮೌನದಲಿ ಬಂದು ಕಾಯ್ದೆ ಏ ನಾರಣ ಎಂದಡೆ ಅಜಮಿಳಗೆ ಮುಕ್ತಿಯನು ನೀನೊಲಿದು ಕರುಣಿಸಿತ್ತೆ ದಾನವೇಂದ್ರನ ಕೈಯ ಕಡುನೊಂದ ಪ್ರಹ್ಲಾದಗೆ ನೀನೊಲಿದು ಪದವನಿತ್ತೆ ದಾನವಾಂತಕ ದಿವಿಜಮುನಿವಂದಿತನೆ ನೀನು ಎನ್ನನು ಸಲಹದೇ ಬರಿದೆ ||೨||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಧನವು ಮನವು ಎರಡುಳ್ಳ ಸತ್ಪುರುಷಗೆ

( ರಾಗ ಮುಖಾರಿ ಝಂಪೆತಾಳ) ಧನವು ಮನವು ಎರಡುಳ್ಳ ಸತ್ಪುರುಷಗೆ ಅನುಕೂಲವಾದಂಥ ಸತಿಯು ಇಲ್ಲವಯ್ಯ ||ಪ|| ಬಾಡಿಗೆ ಮನೆಯಂತೆ ಹೋಹ ಜೀವವ ಕಂಡು ಮಾಡುವನು ಸತಿ ಪತಿ ಭೋಗವನು , ಈ ಬೀಡ ಬಿಟ್ಟು ಮತ್ತಾಬೀಡ ಸೇರುವ ನಾಡ ಜೀವವ ನೆಚ್ಚಿ ಕೆಡಬೇಡ ಮನುಜ ||೧|| ನಾಳೆ ಮಾಡುವ ಧರ್ಮ ಇಂದೆ ಗೈಯಲು ಬೇಕು ನಾಳೆ ನೀನ್ಯಾರೋ ಪೇಳೆಲೊ ಮಾನವ ಊಳಿಗದವರು ನೀ ಬಾರೆಂದು ಎಳೆವರು ನಾಳೆ ಮಾಡುವೆನು ಎಂದರೆ ಬಾರದಯ್ಯ ||೨|| ನಿನ್ನ ಕಣ್ಣ ಮುಂದೆ ಹೋಹ ಜೀವವ ಕಂಡು ಇನ್ನು ನಾಚಿಕೆ ಇಲ್ಲವೇನೊ ಮನುಜ ಎನದು ತನದು ಎಂದು ಭೇದವ ಮಾಡುವ ಕುನ್ನಿ ಮನವನು ನೆಚ್ಚಿ ಕೆಡಬೇಡ ಮನುಜ ||೩|| ಒಂದೊಂದು ಪರಿಯಲ್ಲಿ ಬೆಳೆದ ಜೀವವ ಕಂಡು ಮುಂದಾಗೋ ಗತಿಗೆ ಸಾಧನವಿಲ್ಲವು ತಂದೆ ಪುರಂದರವಿಠ್ಠಲನ ಚರಣವ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಏನು ಇಲ್ಲದ(/ಇಲ್ಲವೋ) ಎರಡು ದಿನದ ಸಂಸಾರ

---------ರಾಗ ಮುಖಾರಿ ಮತ್ತು ರೇಗುಪ್ತಿ ಝಂಪೆತಾಳ ಏನು ಇಲ್ಲದ(/ಇಲ್ಲವೋ) ಎರಡು ದಿನದ ಸಂಸಾರ ಜ್ಞಾನದಲಿ ದಾನಧರ್ಮವ ಮಾಡಿರಯ್ಯ ||ಪ|| ಹಸಿದು ಬಂದವರಿಂಗೆ ಅಶನವೀಯಲುಬೇಕು ಶಿಶುವಿಂಗೆ ಪಾಲ್ಬೆಣ್ಣೆಯನು ನಡೆಸಬೇಕು ಹಸನಾದ ಭೂಮಿಯನು ಧಾರೆಯೆರೆಯಲುಬೇಕು ಭಾಷೆ ಕೊಟ್ಟ್ ಬಳಿಕ ನಿಜವಿರಲು ಬೇಕು ||೧|| ಕಳ್ಳತನಗಳ ಮಾಡಿ ಒಡಲು ಹೊರೆಯಲು ಬೇಡ ಠೌಳಿಗಾರನು ಆಗಿ ತಿರುಗಬೇಡ ಕುಳ್ಳಿರ್ದ ಸಭೆಯೊಳಗೆ ತಿತ್ಯವ ನಡೆಸಬೇಡ ಒಳ್ಳೆಯವನೆಂಬ ಉಬ್ಬಲು ಬೇಡ ಮನುಜ ||೨|| ದೊರೆತನವು ಬಂದಾಗ ಕೆಟ್ಟು ನುಡಿಯಲು ಬೇಡ ಸಿರಿ ಬಂದ ಕಾಲಕ್ಕೆ ಮೆರೆಯಬೇಡ ಸಿರಿವಂತನಾದರೇ ನೆಲೆಯಾದಿಕೇಶವನ ಚರಣ ಕಮಲವ ಸೇರಿ ಸುಖಿಯಾಗು ಮನುಜ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕೇಶವನೊಲುಮೆಯು ಆಗುವ ತನಕ

---ರಾಗ ಶಂಕರಾಭರಣ ಆದಿತಾಳ ಕೇಶವನೊಲುಮೆಯು ಆಗುವ ತನಕ ಹರಿದಾಸರೊಳಿರು ಮನವೆ ಕ್ಲೇಶಪಾಶಗಳ ಹರಿದು ವಿಲಾಸದಿ ದಾಸರ ನುತಿಗಳ ಪೊಗಳುತ ಮನದೊಳು ||ಪ|| ಮೋಸದಿ ಜೀವಿಯ ಘಾಸಿ ಮಾಡಿದ ಫಲ ಕಾಶಿಗೆ ಹೋದರೆ ಹೋದೀತೆ ದಾಸರ ಕರೆತಂದು ಕಾಸು ಕೊಟ್ಟ ಫಲ ಲೇಸಾಗದೆ ಸಸಿನಿದ್ದೀತೆ ಭಾಷೆಯ ಕೊಟ್ಟು ನಿರಾಸೆಯ ಮಾಡಿದ ಫಲ ಮೋಸವು ಮಾಡದೆ ಬಿಟ್ಟೀತೆ ಶಶಿವದನೆಯ ಅಧರಾಮೃತ ಸೇವಿಸಿ ಸುಧೆಯಿಂದೆಡೆ ನಿಜವಾದೀತೆ ||೧|| ಕನಕದ ಪಾತ್ರದ ಘನತೆಯ ಪ್ರಭೆಗಳು ಶುನಕನ ಮನಸಿಗೆ ಸೊಗಸೀತೆ ಹೀನ ಮನುಜನಿಗೆ ಜ್ಞಾನವ ಬೋಧಿಸೆ ಹೀನ ವಿಷಯಗಳು ಹೋದೀತೆ ಮಾನಿನಿ ಮನಸು ನಿಧಾನವು ಇಲ್ಲದಿರೆ ಮನಾಭಿಮಾನ ಉಳಿದೀತೆ ಭಾನುವಿಕಾಸನ ಭಜನೆಯ ಮಾಡದ ದೀನಗೆ ಮುಕುತಿಯು ದೊರಕೀತೆ ||೨|| ಸತ್ಯದ ಧರ್ಮದ ನಿತ್ಯವು ಬೋಧಿಸೆ ತೊತ್ತಿನ ಮನಸಿಗೆ ಸೊಗಸೀತೆ
ದಾಸ ಸಾಹಿತ್ಯ ಪ್ರಕಾರ
ಬರೆದವರು