ಧನವು ಮನವು ಎರಡುಳ್ಳ ಸತ್ಪುರುಷಗೆ

ಧನವು ಮನವು ಎರಡುಳ್ಳ ಸತ್ಪುರುಷಗೆ

( ರಾಗ ಮುಖಾರಿ ಝಂಪೆತಾಳ) ಧನವು ಮನವು ಎರಡುಳ್ಳ ಸತ್ಪುರುಷಗೆ ಅನುಕೂಲವಾದಂಥ ಸತಿಯು ಇಲ್ಲವಯ್ಯ ||ಪ|| ಬಾಡಿಗೆ ಮನೆಯಂತೆ ಹೋಹ ಜೀವವ ಕಂಡು ಮಾಡುವನು ಸತಿ ಪತಿ ಭೋಗವನು , ಈ ಬೀಡ ಬಿಟ್ಟು ಮತ್ತಾಬೀಡ ಸೇರುವ ನಾಡ ಜೀವವ ನೆಚ್ಚಿ ಕೆಡಬೇಡ ಮನುಜ ||೧|| ನಾಳೆ ಮಾಡುವ ಧರ್ಮ ಇಂದೆ ಗೈಯಲು ಬೇಕು ನಾಳೆ ನೀನ್ಯಾರೋ ಪೇಳೆಲೊ ಮಾನವ ಊಳಿಗದವರು ನೀ ಬಾರೆಂದು ಎಳೆವರು ನಾಳೆ ಮಾಡುವೆನು ಎಂದರೆ ಬಾರದಯ್ಯ ||೨|| ನಿನ್ನ ಕಣ್ಣ ಮುಂದೆ ಹೋಹ ಜೀವವ ಕಂಡು ಇನ್ನು ನಾಚಿಕೆ ಇಲ್ಲವೇನೊ ಮನುಜ ಎನದು ತನದು ಎಂದು ಭೇದವ ಮಾಡುವ ಕುನ್ನಿ ಮನವನು ನೆಚ್ಚಿ ಕೆಡಬೇಡ ಮನುಜ ||೩|| ಒಂದೊಂದು ಪರಿಯಲ್ಲಿ ಬೆಳೆದ ಜೀವವ ಕಂಡು ಮುಂದಾಗೋ ಗತಿಗೆ ಸಾಧನವಿಲ್ಲವು ತಂದೆ ಪುರಂದರವಿಠ್ಠಲನ ಚರಣವ ಕುಂದದೆ ಮನದಲಿಟ್ಟು ನೆನೆ ಕಂಡ್ಯ ಮನುಜ ||೪||
ದಾಸ ಸಾಹಿತ್ಯ ಪ್ರಕಾರ
ಬರೆದವರು