ನೀನುಪೇಕ್ಷೆಯ ಮಾಡೆ ಬೇರೆ ಗತಿ ಯಾರೆನಗೆ
(ರಾಗ - ಕಲ್ಯಾಣಿ ಝಂಪೆತಾಳ)
ನೀನುಪೇಕ್ಷೆಯ ಮಾಡೆ ಬೇರೆ ಗತಿ ಯಾರೆನಗೆ ನಿಗಮಗೋಚರ ಮುಕುಂದ
ಗಾನರಸಲೋಲ ಆಗಮಶೀಲ ಭಕ್ತಪರಿಪಾಲ ಗೋಪಾಲ ಬಾಲಲೀಲ ||ಪ||
ಜಪತಪಾನುಷ್ಠಾನ ಜಪಿತನೆಂದೆನಿಸುವರೆ ಜಾಣತನವದರೊಳಗಿಲ್ಲ
ಅಪರಿಮಿತಕರ್ಮವನು ಅನುಸರಿಸಿ ನಡೆವುದಕೆ ನಿಪುಣತ್ವ ಮೊದಲೇ ಇಲ್ಲ
ಗುಪಿತದಲಿ ದಾನಧರ್ಮವ ಮಾಳ್ಪೆನೆಂದರೆ ಘನವಾದ ಧನವು ಇಲ್ಲ
ಚಪಲ ನಿಪುಣತ್ವ ಜಾಣತ್ವವಿಲ್ಲದಿಹ ಸುಪವಿತ್ರ ನೀನೆ ಅಲ್ಲದಿಲ್ಲ ||೧||
ಆನೆ ಮೊಸಳೆಗೆ ಸಿಲ್ಕಿ ಅರೆಬಾಯಿ ಬಿಡುತಿರಲು ಮೌನದಲಿ ಬಂದು ಕಾಯ್ದೆ
ಏ ನಾರಣ ಎಂದಡೆ ಅಜಮಿಳಗೆ ಮುಕ್ತಿಯನು ನೀನೊಲಿದು ಕರುಣಿಸಿತ್ತೆ
ದಾನವೇಂದ್ರನ ಕೈಯ ಕಡುನೊಂದ ಪ್ರಹ್ಲಾದಗೆ ನೀನೊಲಿದು ಪದವನಿತ್ತೆ
ದಾನವಾಂತಕ ದಿವಿಜಮುನಿವಂದಿತನೆ ನೀನು ಎನ್ನನು ಸಲಹದೇ ಬರಿದೆ ||೨||
ಈಷಣತ್ರಯದ ಬಯಲಾಸೆಯಲಿ ಮನಸೋತು ಬೇಸರಿದೆ ಮನದಿ ನೊಂದು
ಹೇಸಿಕೆಯ ಸಂಸಾರಸಾಗರದೊಳಗೆ ಬಿದ್ದು ಘಾಸಿಯಾದೆ ನಾನಿಂದು
ಆಸೆಯನು ಬಿಡದೆ ಕಡುಮೋಸದಲಿ ಸಿಲುಕಿರುವ ವಾಸಿಲ್ಲದವನ ಇಂದು
ದಾಸನೆನಿಸಿಯೆ ಡಂಗುರವ ಹೊಯ್ಯಲು ಆದಿಕೇಶವನು ನೀನೆ ಹರಿಯೆ ದೊರೆಯೆ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments