ಪದ / ದೇವರನಾಮ

ದಾಸರ ಪದಗಳು

ಸುಮ್ಮನೆ ಬಾಹೋದೆ ಮುಕ್ತಿ

-- ರಾಗ ಧನ್ಯಾಸಿ ಅಷ್ಟತಾಳ ಸುಮ್ಮನೆ ಬಾಹೋದೆ ಮುಕ್ತಿ ||ಪ|| ಮನದಲ್ಲಿ ದೃಢವಿರಬೇಕು , ಕೋಪ ಮನದ ಸಂಸಾರವ ನೀಡಾಡಬೇಕು ಅನುಮಾನವನು ಬಿಡಬೇಕು, ತನ್ನ ತನುವನ್ನು ಧರ್ಮಕೊಪ್ಪಿಸಿ ಕೊಡಬೇಕು ||೧|| ಪಾಪಿ ಕೋಪವ ಬಿಡಬೇಕು , ಅಲ್ಲಿ ಗೋಪಾಲ ಕೃಷ್ಣನ್ನ ಪೂಜಿಸಬೇಕು ತಾಪರಹಿತನಾಗಬೇಕು ತನ್ನ ಪಾಪವನು ಕಳೆವ ಗುರುವ ನಂಬಬೇಕು ||೨|| ಶರೀರದಾಸೆಯ ಬಿಡಬೇಕು ತನ್ನ ಶರೀರ ಅನಿತ್ಯ ಎನಲುಬೇಕು ಪರದ ಇಷ್ಟಾರ್ಥಗಳು ಬೇಕು , ಹರಿ- ಪುರಂದರ ವಿಠ್ಠಲನ್ನ ನಂಬಲು ಬೇಕು ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಎದ್ದಿರ್ಯಾ? ನೀವಿನ್ನೆದ್ದಿರ್ಯಾ? ಎದ್ದೆವು ನಾವಿನ್ನು ಸದ್ಗುರು ಕೃಪೆಯಿಂದ

---- ರಾಗ ಭೂಪಾಲಿ ( ಜೋಗಿಯಾ) ದೀಪಚಂದಿ ತಾಳ ಎದ್ದಿರ್ಯಾ ? ನೀವಿನ್ನೆದ್ದಿರ್ಯಾ ? ಎದ್ದೆವು ನಾವಿನ್ನು ಸದ್ಗುರು ಕೃಪೆಯಿಂದ ||ಧ್ರುವ || ಶುದ್ಧಿ ಮೆರೆದು ಭವನಿದ್ರಿಯಗಳದಿನ್ನೆದ್ದಿರ್ಯಾ ||೧|| ಕಾಯಮಂದಿರದೊಳು ಮಾಯಾಮುಸುಕು ತೆಗೆದಿನ್ನೆದ್ದಿರ್ಯಾ ||೨|| ಚೆನ್ನಾಗಿ ಮಲಗಿದ್ದ ಜನ್ಮಹಾಸಿಗಿ ಬಿಟ್ಟು ಇನ್ನೆದ್ದಿರ್ಯಾ ||೩|| ಮನದಲ್ಲಿ ಇನಕೋಟಿತೇಜನ ಕಾಣ್ವ್ಹಾಂಗೆ ಇನ್ನೆದ್ದಿರ್ಯಾ ||೪|| ಎದ್ದಿದ್ದರೆ ನೀವಿನ್ನು ಶುದ್ಧಬುದ್ಧರಾಗಿ ಇನ್ನೆದ್ದಿರ್ಯಾ ||೫|| ತನ್ನ ತಾ ತಿಳಿವ್ಹಾಂಗೆ ಕಣ್ದೆರೆದಿನ್ನು ಇನ್ನೆದ್ದಿರ್ಯಾ ||೬|| ದೀನ ಮಹಿಪತಿಸ್ವಾಮಿ ಮನೋಹರ ಮಾಡ್ವ್ಹಾಂಗ ||೭|| ---- ರಚನೆ ---ಮಹಿಪತಿದಾಸರು
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಮ್ಮಯ್ಯ ಗುರು ನಾ ನಿಮ್ಮ ಮನಿಯ ಶ್ವಾನ

------ಭೀಮಪಲಾಸ್ ರಾಗ ತೀನ್ ತಾಳ ನಮ್ಮಯ್ಯ ಗುರು ನಾ ನಿಮ್ಮ ಮನಿಯ ಶ್ವಾನ ಹೆಮ್ಮೆಯೆಂಬ ಹಲ್ಲು ಮುರಿದೆ ಪೂರ್ಣ ಸುಮ್ಮನಿರುವೆ ಕಂಡು ಸಂತತ ಚರಣ ಒಮ್ಮನದಿಂದೆ ತೃಪ್ತ್ಯಾಯಿತು ಜೀವನ ||೧|| ಸದ್ಬೋಧವನ್ನ ನೀಡಲು ಓಡಿಬಂದೆ ಸದ್ಗುರುವೆ ಒಡೆಯ ನೀನಹುದೆಂದೆ ಬಿದ್ದುಕೊಂಡಿಹೆ ನಾ ನಿಮ್ಮ ಮನೆಯ ಮುಂದೆ ಬುದ್ಧಿವಂತರ ಬೆನ್ನಟ್ಟಿ ಹೋಗೆ ಹಿಂದೆ ||೨|| ಹಳಿಯೆಂದರೆ ನಾ ಹೋಗೆ ಎಂದೆಂದಿಗೂ ಬಿಟ್ಟು ಕೇಳಿಕೊಂಡಿಹೆ ಗುಹ್ಯವಾಕ್ಯದ ಹೆಜ್ಜಿ ಮೆಟ್ಟು ಸುಳುವುದೋರಲು ನಿಮ್ಮ ಸದ್ಗತಿ ಮುಕ್ತಿಯುಂಟು ತಿಳದ್ಹಾಕಿದೆ ನಾ ನಿಮ್ಮ ಪಾದರಕ್ಷಕೆ ಗಂಟು ||೩|| ಬಾಗಿಲ ಕಾಯಿಕೊಂಡು ಬಿದ್ದಿಹ ನಿಮ್ಮ ಶ್ವಾನ ಹಗಲಿರುಳು ನಾ ಬೊಗಳುವೆ ನಿಜಗುಣ ಜಾಗಿಸುವದೆನ್ನೊಳು ನಮ್ಮಯ್ಯ ನಿಮ್ಮ ಖೂನ ಸುಗಮದಿಂದ ದೊರೆಯಿತು ನಿಜಸ್ಥಾನ ||೪||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಇದೇ ನಿತ್ಯ ನಮಸ್ಕಾರ

(ರಾಗ - ದಾನೀ ದೀಪಚಂದಿ ತಾಳ) ಇದೇ ನಿತ್ಯ ನಮಸ್ಕಾರ ನೋಡಿ ಗುರುಚರಣಕೆ ಮನಗೂಡಿ ||ಪ|| ಬಿಡದಿಹುದೇ ಸತ್ಸಂಗ ನೋಡಿ ಇದುವೇ ಶಿರಸಾಷ್ಟಾಂಗ ಕಡದ್ಹೋಯಿತು ಭವದುಸ್ಸಂಗ ದೃಢಮಾಡಿ ಮನ ಅಂತರಂಗ ||೧|| ನಮ್ರತೆಯಲಿಹುದೇ ನಮನ ಪ್ರೇಮಭಾವವೆಂಬುದು ಪ್ರದಕ್ಷಿಣ ನೇಮದಿಂದ ನಡೆದವನು ದಿನಾ ಬ್ರಹ್ಮಾನಂದದೋರುವ ಸಾಧನ ||೨|| ಗುರ್ವಿನಂಘ್ರಿಗೆ ಎಡೆಮಾಡಿ ಅರ್ವಿನೊಳಾದ ಮಹಿಪತಿ ನೋಡಿ ಗರ್ವ ಪುಣ್ಯೆಂಬುದ ಈಡ್ಯಾಡಿ ಸರ್ವ ಪಾಪ ಹೋಯಿತು ಓಡಿ ||೩|| ------------ರಚನೆ ಮಹಿಪತಿದಾಸರು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸಲಹು ಶ್ರೀ ಗುರುರಾಯ ಸಲಹು ಬುಧಜನಪ್ರಿಯ

ರಾಗ - ಮಾಲಕಂಸ್ ತಾಳ - ಝಪ್ ಸಲಹು ಶ್ರೀ ಗುರುರಾಯ ಸಲಹು ಬುಧಜನಪ್ರಿಯ ಸಲಹೆನ್ನ ಪರಮಗೇಹ್ಯ ||ಪ|| ಚಿಕ್ಕವನು ನಾ ಮೊದಲು ಸೊಕ್ಕಿ ಭವಸುಳಿಯೊಳಗೆ ಸಿಕ್ಕಿ ಬಹು ನೊಂದೆನೆಂದು ಹೊಕ್ಕೆ ಮೊರೆ ನಿನ್ನ ಹಿಂ- ದಿಕ್ಕಿಕೋ ದಯದಿಂದ ಮಕ್ಕಳಂದದಲಿ ಚೆನ್ನಾಗೆನ್ನ ||೧|| ಪಿಂತಿನ ಬವಣೆಗಳು ಎಂತಾದರಾಗಲಿ ಶಾಂತಮೂರುತಿಯೆ ಎನ್ನ ಅಂತರಂಗದಲಿನ್ನು ನಿಂತು ನಿನ್ನಯ ರೂಪ ಸಂತತವಾಗಿ ತೋರೋ ಬೀರೋ ||೨|| ಅನ್ಯಪಥಜಕೆಳಸಿದ ಘನ ತಪ್ಪನು ಕ್ಷಮಿಸಿ ನಿನ್ನ ಪದಯುಗಳ ತೋರಿ ಸನ್ನುತನೆ ಮಹಿಪತಿ ಚಿನ್ನಕೃಷ್ಣನ ಸ್ವಾಮಿ ಇನ್ನಾರೆ ದಯವ ಮಾಡೋ ನೋಡೋ ||೩|| ----------- ರಚನೆ- ಮಹಿಪತಿದಾಸರು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಗುರುಭಕುತಿಯಲಿ ಮನವು ಸ್ಥಿರಗೊಳ್ಳಲಿಬೇಕು

---ರಾಗ ಭೂಪ ತಾಳ -ದೀಪಚಂದಿ ಗುರುಭಕುತಿಯಲಿ ಮನವು ಸ್ಥಿರಗೊಳ್ಳಲಿಬೇಕು | ಅರಿತು ಸದ್ಭಾವದಲಿ ಧೃಡಗೊಳ್ಳಬೇಕು || ಪ|| ನಿಶ್ಚಯವಿಡಬೇಕು ದುಶ್ಚಲವ ಬಿಡಬೇಕು | ನಿಶ್ಚಿಂತದಲಿ ನಿಜಸುಖ ಪಡಿಯಬೇಕು ||೧|| ನಂಬಿ ನಡಿಯಬೇಕು ಡಂಭಕವ ಬಿಡಬೇಕು | ಹಂಬಲಿಸಿ ಅಂಬುಜಾಕ್ಷನ ನೋಡಬೇಕು ||೨|| ವಿಶ್ವಾಸವಿಡಬೇಕು ವಿಷಗುಣವ ಬಿಡಬೇಕು | ವಿಶ್ವವ್ಯಾಪಕನ ವಿಶ್ವದಿ ನೋಡಬೇಕು ||೩|| ರತಿಪ್ರೇಮ ಬಿಡಬೇಕು ಅತಿ ಹರುಷಪಡಬೇಕು | ಸ್ತುತಿಸ್ತವನವನು ಪಾಡಿ ಗತಿ ಪಡಿಯಬೇಕು ||೪|| ಆರು ಜರಿಯಬೇಕು ಮೂರು ಹರಿಯಬೇಕು | ಅರಿತು ಗುರುಪಾದ ಮಹಿಪತಿ ಬೆರಿಯಬೇಕು ||೫|| ----------- ರಚನೆ- ಮಹಿಪತಿದಾಸರು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮಧ್ವಾಂತರ್ಗತ ವೇದವ್ಯಾಸಾ

----ರಾಗ-ಮಧ್ಯಮಾವತಿ (ದರ್ಬಾರಿ ಕಾನಡಾ) ಆದಿತಾಳ ಮಧ್ವಾಂತರ್ಗತ ವೇದವ್ಯಾಸಾ , ಮಮ ಹೃದ್ವನರುಹ ಸನ್ನಿವಾಸ ||ಪ|| ಸದ್ಬುದ್ಧಿಯನೆ ಕೊಡು ಶ್ರೀಕೃಷ್ಣ ದ್ವೈಪಾಯನ ಚಿದಚಿದ್ವಿಲಕ್ಷಣ ತತ್ಪಾದದ್ವಯಾಬ್ಜವ ತೋರೋ ||ಅ.ಪ|| ಹರಿತೋಪಲಾಭ ಶರೀರ ಮುನಿಪರಾಶರವರ ಸುಕುಮಾರ ಪರಮಪುರುಷ ಕರ್ತ ಸ್ವರ್ಣಗರ್ಭ ಪ್ರಮುಖ ನಿರ್ಜರ ಮುನಿಗಣನುತ ಪದಪಂಕಜ ಕುಲಕುಲದಿ ಧೃತರಾಷ್ಟ್ರ ಪಾಂಡುವಿದುರರ ಪಡೆದೈವರಿಗೊಲಿದು ಸಂ- ಹರಿಸಿ ದುರ್ಯೋಧನನ ಭಾರತ ವಿರಚಿಸಿದ ಸುಧೀಂದ್ರ ಕವೀಂದ್ರ ||೧|| ಬಾದರಾಯಣ ಬಹುರೂಪ ಸನಕಾದಿ ಸನ್ನುತ ಧರ್ಮಯೂಪಾ ವೇದೋದ್ಧಾರನಾದ ಅನಾದಿಕರ್ತ ಪೂರ್ಣಬೋಧ ಸದ್ಗುರುವರಾರಾಧಿಪದಯುಗ ಮೇದಿನಿಯೊಳಗೋರ್ವ ಪರಮಾಧಮ ಕೈಪಿಡಿಯೇ ಕರುಣ ಮಹೋ- ದಧಿಯೆ ಕಮನೀಯ ಕಪಿಲಪ್ರಬೋಧ ಮುದ್ರಾ-ಭಯಂಕರಾಂಬುಜ ||೨||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸ್ಮರಿಸು ಸಂತತ ಹರಿಯನು

--ರಾಗ ಮಧ್ಯಮಾವತಿ (ಭೂಪ್) ಝಂಪೆತಾಳ ಸ್ಮರಿಸು ಸಂತತ ಹರಿಯನು ಮನವೆ ||ಪ|| ಸ್ಮರಿಸು ಸಂತತ ಹರಿಯ ಕರುಣಾಳುಗಳ ದೊರೆಯ ಸರಸಿಯೊಳಗಂದು ಕರಿಯ ನರನ ಸಂ- ಗರದೊಳಗೆ ಕಾಯ್ದುದರಿಯ ಜಪ ಮ ವ್ರತ ದಾನ ತಪಕೆ ದೊರೆಯ ಜಗದೀಶ ಶರಣು ಪೊಕ್ಕವರ ತೊರೆಯ ಖರೆಯ ||ಅ.ಪ|| ತಾನೆ ಇಹಪರ ಸೌಖ್ಯ ದಾಸಿಗಳರಸನೆಂದು ಸಾನುರಾಗದಿ ನಂಬಿದ ಜನಕೆ ಸುರ- ಧೇನುವಂದದಲಿ ಮೋದಸಲಿಸುವ ಮ- ಹಾನಂದ ಪೂರ್ಣಬೋಧ ಪ್ರತಿಸಾಮ- ಗಾನಲೋಲ ಪ್ರಸಾದ-ಪಾದ ||೧|| ಎಲ್ಲೆಲ್ಲಿ ನೋಡೆ ಮತ್ತಲ್ಲಲ್ಲೆ ನೆಲೆಸಿಹನು ಬಲ್ಲಿದನು ಭಾಗ್ಯವಂತ ನಂಬಿದರಿ- ಗಲ್ಲದೆ ಒಲಿಯ ಭ್ರಾಂತ-ದುಷ್ಟ ಜನ- ರೊಲ್ಲ ನಿಶ್ಚಯ ಮಹಂತರೊಡೆಯ ಕೈ- ವಲ್ಯದಾಯಕನ ಇಂಥ-ಪಂಥ ||೨|| ನೋಡಿ ನೋಡಿಸುತಿಹನು ಮಾಡಿ ಮಾಡಿಸುತಿಹನು ನೀಡಿ ನೀಡಿಸುವ ಪಿಡಿವ ಪಿಡಿಸುವನು ಬೇಡಿ ಭೇಡಿಸುವ ಬಡವರೊಡೆಯ ಕೊಂ-
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಪರಾಧವೆಣಿಸದಲೆ ಕಾಯಬೇಕು

ರಾಗ - ಕಾಂಬೋಧಿ(ಬಾಗೇಶ್ರೀ) ಝಂಪೆತಾಳ ಅಪರಾಧವೆಣಿಸದಲೆ ಕಾಯಬೇಕು ||ಪ|| ಕೃಪಣವತ್ಸಲನೆ ಶ್ರೀ ಮಧ್ವಮುನಿ ಗುರುರಾಯ ||ಅ.ಪ|| ನೀ ಮಾಡಿದುಪಕಾರ ನಾ ಮರೆವುದೆಂತೊ ಲ- ಕ್ಷ್ಮೀಮನೋಹರನ ನಿಜ ದಾಸಾಗ್ರಣಿ ಪಾಮರ ಲೋಕದೊಳು ಧೀಮಂತನೆನಿಸಿದೆ ಮ- ಹಾಮಹಿಮ ನಿನ್ನ ಕರುಣಾಮೃತದ ಮಳೆಗರೆದು ||೧|| ಅವಿನೀತ ನಾನು ನಿನ್ನವನೆಂದು ತಿಳಿದು ಎ- ನ್ನವಗುಣಗಳೆಣಿಸದಲೆ ನಿತ್ಯದಲ್ಲಿ ಸುವಿವೇಕಿಯನು ಮಾಡು ಕವಿರಾಜ ತವ ಮನೋ- ತ್ಸವಕೆ ಎಣೆಗಾಣೆ ನಾನವನಿಯೊಳಗಾವಲ್ಲಿ ||೨|| ಏನೂ ಅರಿಯದ ಮೂಢ ಮಾನವನು ನಾನು ಸು- ಜ್ಞಾನಿವರ್ಯನು ನೀನೇ ಕಾಯಬೇಕು || ಮಾನನಿಧಿ ಜಗನ್ನಾಥವಿಠಲನ ಪದಯುಗಳ ಧ್ಯಾನ ಮಾಡುವ ಧೀರ ಪ್ರಾಣ ಪಂಚಕರಾಯ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬಂಧನವ ಪರಿಹರಿಸು ಭಯವಿದೂರ

------ರಾಗ -ಕಾಂಬೋಧಿ ಝಂಪೆತಾಳ ಬಂಧನವ ಪರಿಹರಿಸು ಭಯವಿದೂರ ಕಂದರ್ಪಜನಕ ಕಾರುಣ್ಯದಲಿ ಭಕ್ತಜನ ||ಪ|| ದುಷ್ಟಜನರು ಬಲು ಕಷ್ಟಪಡಿಸುವರು ನಿನಗೆಷ್ಟು ಉಸುರಲಿ ಕೇಳು ಜಿಷ್ಣುಸಖನೇ ವೃಷ್ಣೀಶ ನೀ ದಯಾದೃಷ್ಟಿಯಿಂದಲಿ ಈಗ ಹೃಷ್ಟನ್ನ ಮಾಡು ಸಂತುಷ್ಟಿಯಲಿ ಬೇಗ ||೧|| ಹಯಮುಖನೆ ನಿನ್ನವರ ದಯದಿಂದ ಸಲಹುವದು ವಯನಗಮ್ಯನೆ ಜ್ಞಾನತ್ರಯವ ನಿರುತ ಪ್ರಿಯನೆಂದು ನಿನಗೆ ನಾ ದೈನ್ಯದಿಂದಲಿ ಮೊರೆ ಇಡುವೆ ದಯಮಾಡುವದು ನೀನು ಜಯಪ್ರದಾಯಕನಾಗಿ ||೨|| ವೀತಶೋಕನೆ ಎನ್ನ ಮಾತು ಲಾಲಿಸಿ ನಿನ್ನ ದೂತನ್ನ ಸಲಹುವದು ಪ್ರೀತಿಯಿಂದ ದಾತ ಶ್ರೀಗುರು ಜಗನ್ನಾಥವಿಠಲ ನಿನ್ನ ನಾ ತುತಿಸಬಲ್ಲೆನೆ ವಿಧಾತೃಮಖವಂದಿತನೆ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು