ಆರಿಗಾದರೂ ಪೂರ್ವ ಕರ್ಮ ಬಿಡದು
( ರಾಗ ಮುಖಾರಿ ಝಂಪೆತಾಳ)
ಆರಿಗಾದರೂ ಪೂರ್ವ ಕರ್ಮ ಬಿಡದು, ಅಜ
ಹರ ಸುರ ಮುನಿಗಳ ಕಾಡುತಿಹುದು ||ಪ||
ವೀರ ಭೈರವನಂತೆ ತಾನು ಬತ್ತಲೆಯಂತೆ
ಮಾರಿ ಮಸಣಿಗಳಂತೆ ಕೂಳನ್ನು ತಿಂಬರಂತೆ
ಸೂರ್ಯ ಚಂದ್ರಮರಂತೆ ರಾಹುವಟ್ಟುಳಿಯಂತೆ
ಮೂರೆರಡು ತಲೆ ಹರಗೆ ಕೈಯೊಳು ಕರ್ಪರವಂತೆ ||೧||
ಶಿಷ್ಟ ಹರಿಶ್ಚಂದ್ರಗೆ ಮಸಣದಡಿಗೆಯು ಅಂತೆ
ಸೃಷ್ಟಿಸುವ ಬೊಮ್ಮನಿಗೆ ಶಿರವು ತಾ ಹೋಯಿತಂತೆ
ಅಷ್ಟ ದಿಕ್ಪಾಲಕರು ಸೆರೆಯಾಗಿರುವರಂತೆ
ಕಟ್ಟುಗ್ರದಿಂದ ಇಂದ್ರನಿಗೆ ಮೈಯೆಲ್ಲ ಕಣ್ಣಂತೆ ||೨||
ಹನ್ನೊಂದಕ್ಷೋಹಿಣಿ ಬಲವುಳ್ಳ ಕೌರವನು
ರಣದೊಳಗೆ ತೊಡೆ ಮುರಿದು ಬಿದ್ದು ತಾನಿಹನಂತೆ
ವನಜಾಕ್ಷ ಸಿರಿಯರಸ ಬಲಿಯ ಬೇಡಿದನಂತೆ
ವನಿತೆ ಆ ಧರ್ಮಜನ ತಾಯಿ ತಿರಿದುಂಬಳಂತೆ ||೩||
ಧರೆಗೆ ಧರ್ಮಜನಂತೆ ಕಂಕ ಭಟ್ಟನು ಅಂತೆ
ಶೂರ ಭೀಮನು ತಾನು ಬಾಣಸಿಗನಾದಂತೆ
ವೀರ ಫಲುಗುಣನಂತೆ ಕೈಯೊಳಗೆ ಬಳೆಯಂತೆ
ಕಿರಿ ನಕುಲ ಸಹದೇವ ತುರುಗಳನು ಕಾಯ್ದರಂತೆ ||೪||
ಹರನ ವಾಹನವಂತೆ ಹುಲ್ಲು ಹೊರುವನಂತೆ
ವಿರಿಂಚಿ ವಾಹನವಂತೆ ಕಮಲ ಭಕ್ಷಿಪನಂತೆ
ಹರಿಯ ಹೊತ್ತಿಹನಂತೆ ಹಾವು ಭಕ್ಷಿಪನಂತೆ
ನೆರೆಯಾದಿಕೇಶವನು ತಾ ಬೆಣ್ಣೆಗಳ್ಳನಂತೆ ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments