ಗಳಿಸಿಕೊಳ್ಳಿರೊ ಸಾಧು ಸಜ್ಜನರ ಸಂಗವ
(ಚಾಂದ್ ರಾಗ ತೀನ್ ತಾಳ)
ಗಳಿಸಿಕೊಳ್ಳಿರೊ ಸಾಧು ಸಜ್ಜನರ ಸಂಗವ
ಗಳಿಗೆಯೊಳು ದೋರಿಕೊಡುವರು ಅಂತರಂಗವ ||ಧ್ರುವ||
ಹೊಟ್ಟಿಗೆ ಮೊಟ್ಟಿಗೆ ಕೆಟ್ಟು ಹೋಗಬ್ಯಾಡಿರೊ
ಹುಟ್ಟಿಬಂದಮ್ಯಾಲೆ ಹರಿನಾಮ ಘಟ್ಟಿಗೊಳ್ಳಿರೊ
ಗುಟ್ಟಿಲಿದ್ದ ವಸ್ತು ನೀವು ಮುಟ್ಟಿ ಮನಗಾಣಿರೊ
ಕೆಟ್ಟ ಗುಣಕಾಗಿ ಬಿದ್ದು ಸಿಟ್ಟು ಹಿಡಿಯಬ್ಯಾಡಿರೊ ||೧||
ಹೊನ್ನಿಗೆ ಹೆಣ್ಣಿಗೆ ಬಾಯಿ ತೆರಿಯಬ್ಯಾಡಿರೊ
ಕಣ್ಣುಗೆಟ್ಟು ಹೋಗಿ ದಣ್ಣನೆ ದಣಿಯಬ್ಯಾಡಿರೊ
ಹೆಣ್ಣಿಗಾಗಿ ರಾವಣೇನು ಪಡೆದುಕೊಂಡ ಕಾಣಿರೊ
ಹೊನ್ನಿಗಾಗಿ ವಾಲಿ ಏನು ಸುಖವ ಪಡೆದ ನೋಡಿರೊ ||೨||
ಉರ್ವಿಯೊಳು ಬಂದು ನೀವು ಗರ್ವ ಹಿಡಿಯಬ್ಯಾಡಿರೊ
ಕೌರವೇಶ ಮಣ್ಣಿಗೆ ಗರ್ವಹಿಡಿದು ಕೆಟ್ಟನೋಡಿರೊ
ಅರ್ವಪಥವ ಬಿಟ್ಟು ಮರ್ಮಿಗ್ಹೋಗಬ್ಯಾಡಿರೊ
ಸರ್ವ ಸಾರಾಯ ಸುಖ ಹರಿಯ ಭಕ್ತಿ ಮಾಡಿರೊ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ
- Read more about ಗಳಿಸಿಕೊಳ್ಳಿರೊ ಸಾಧು ಸಜ್ಜನರ ಸಂಗವ
- Log in to post comments