ವೈಷ್ಣವನಾರೆಂದು ದೃಷ್ಟಿಸಿ ಸೃಷ್ಟಿಯೊಳು
(ಮಾಂಡ್ ರಾಗ ಕೇರವಾ ತಾಳ)
ವೈಷ್ಣವನಾರೆಂದು ದೃಷ್ಟಿಸಿ ಸೃಷ್ಟಿಯೊಳು
ವಿಷ್ಣುನರಿತವನೆ ವೈಷ್ಣವರು ||ಧ್ರುವ||
ಭಕ್ತಿರಸದೊಳು ಮುಣುಗಿ ಭಕ್ತಿಗೈದುವ ಗತಿಯ
ಯುಕ್ತಿ ತಿಳಿದವನೆ ವೈಷ್ಣವನು ||೧||
ಹರಿ ಪರಂದೈವೆಂದು ಹರಿಯ ಕೊಂಡಾಡುತಲಿ
ಹರಿಯ ನೆನೆಯುವವನೆ ವೈಷ್ಣವನು ||೨||
ಹರಿ ಓಂ ತತ್ಸದಿತಿಯೆಂಬ ಹರಿವಾಕ್ಯವನು
ಅರಿತವನೆ ಪರಮ ವೈಷ್ಣವನು ||೩||
ಹರಿಧ್ಯಾನ ನೆಲೆಗೊಂಡು ಹರಿನಾಮ ಬಲಗೊಂಡು
ಹರಿಯ ಸ್ಮರಿಸುವನೇ ವೈಷ್ಣವನು ||೪||
ಪರದೆ ಇಲ್ಲದಪಾರಬ್ರಹ್ಮಸ್ವರೂಪವನು
ಗುರುತ ಕಂಡವನೇ ಪರಮ ವೈಷ್ಣವನು ||೫||
ಗುರುಕೃಪೆಯಿಂದ ಪರಗತಿ ಸಾಧನವು ಮುಟ್ಟೆ
ಅರಿತು ಬೆರೆದವನೆ ಪರಮ ವೈಷ್ಣವನು ||೬||
ಮೂಲಮೂರುತಿಗಾಗಿ ಮೇಲ್ಗಿರಿಯನೇರುವ
ಕೀಲ ತಿಳಿದವನೆ ವೈಷ್ಣವನು ||೭||
ಉಂಟಾಗಿ ಇರುಳ್ಹಗಲೆ ಗಂಟ್ಹಾಕಿ ಹರಿಪಾದ
ಬಂಟನಾದವನೆ ವೈಷ್ಣವನು ||೮||
ಆರು ಕಂಟಕ ನೀಗಿ ಮೂರು ಬಲೆಯನು ದಾಟಿ
ಮೀರಿ ನಿಂದವನೆ ವೈಷ್ಣವನು ||೯||
ಆಶೆಯನೆ ಜರಿದು ನಿರಾಶೆಯನೆ ಬಲಿದು
ಹರಿದಾಸನಾದವನೆ ವೈಷ್ಣವನು ||೧೦||
ದ್ವಾದಶನಾದವನು ಸಾಧಿಸಿ ಕೇಳುತಲಿ
ಭೇದಿಸಿದವನೆ ವೈಷ್ಣವನು ||೧೧||
ಅನಿಮಿಷನೇತ್ರದಲಿ ಅನುದಿನ ಘನಸುಖವ
ಅನುಭವಿಸುವವನೇ ವೈಷ್ಣವನು ||೧೨||
ವಿಷ್ಣುಭಕ್ತಿಯ ಸುಖವು ಮುಟ್ಟಿ ಮುದ್ರಿಸಿ
ಪುಷ್ಟವಾಗಿ ದೋರುವನೆ ವೈಷ್ಣವನು ||೧೩||
ವಿಷ್ಣುಮೂರ್ತಿಯ ಧ್ಯಾನ ದೃಷ್ಟಾಂತ ಮಹಿಪತಿಗೆ
ಕೊಟ್ಟ ಆ ಗುರು ಪರಮ ವೈಷ್ಣವನು ||೧೪||
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ
- Log in to post comments