Skip to main content

ಜಗನ್ನಾಥದಾಸ

ರಥವನೇರಿದ ರಥಿಕನ್ಯಾರೆ

--------ರಾಗ ಮಧ್ಯಮಾವತಿ (ರೇಗುಪ್ತಿ)(ಸಾರಂಗ) ಆದಿತಾಳ(ಧುಮಾಳಿ)

ರಥವನೇರಿದ ರಥಿಕನ್ಯಾರೆ ಪೇಳಮ್ಮಯ್ಯ ||ಪ||

ಕಥಿತದ್ಯಾತ ಸಂಸ್ತುತ ವಿತತಾನತ
ಹಿತಕರದಿ ವಿಷಸೃತಿ ಕಾಣಮ್ಮ||ಅ.ಪ||

ಹಾಟಕರತ್ನ ಸುಪೀಠ ಮಧ್ಯಮಂಟಪದಿ ನೋಡಮ್ಮಯ್ಯ
ತಾಟಂಕಯುತ ವಧೂಟಿಯರಿಕ್ಕೆಲದಿ ನೋಡಮ್ಮಯ್ಯ
ಕೋಟಿಭಾಸ್ಕರ ಪ್ರಭಾಲೋಪದಿ ರಾಜಿಸುವ ನೋಡಮ್ಮಯ್ಯ
ಆಟದಿ ಕುರುಜ ಮಹಾಟವಿ ಸವರಿ ಕಿ-
ರೀಟಿಯ ಸಲಹಿದ ಖೇಟವಾಹನನೆ ||೧||

ಭುಜಗರಾಜ ಫಣಮಂಡಲ ಮಂಡಿತನೆ ನೋಡಮ್ಮಯ್ಯ
ವಿಜಯದರಾರಿಗದಾಂಬುಜ ಕರಭೂಷಿತನೆ ನೋಡಮ್ಮಯ್ಯ
ಗಜಚರ್ಮಧರಾದ್ಯ ನಿಮಿಷಗಣ ಸೇವಿತನೆ ನೋಡಮ್ಮಯ್ಯ
ಅಜನ ನಾಭಿಯಲಿ ಪಡೆದು ಚರಾಚರ
ಸೃಜಿಸ್ಠೆಪೇಳ್ದ ನಿರಜ ಕಾಣಮ್ಮ ||೨||

ದಾಸ ಸಾಹಿತ್ಯ ಪ್ರಕಾರ: 
ಬರೆದವರು: 

ಬಲು ರಮ್ಯವಾಗಿದೆ ಹರಿಯ ಮಂಚ

---ರಾಗ ಕಾಂಬೋಧಿ (ಮಾಲಕಂಸ) ಝಂಪೆತಾಳ

ಬಲು ರಮ್ಯವಾಗಿದೆ ಹರಿಯ ಮಂಚ||ಪ||
ಯಲರುಣಿ ಕುಲರಾಜ ರಾಜೇಶ್ವರನ ಮಂಚ ||ಅ.ಪ||

ಪವನತನಯ ಮಂಚ ಪಾವನತರ ಮಂಚ
ಭುವನತ್ರಯವ ಪೊತ್ತ ಭಾರಿ ಮಂಚ
ಕಿವಿಗಳಿಲ್ಲದ ಮಂಚ ಶ್ರೀನಿಕೇತನ ಮಂಚ
ಶಿವರೂಪದಲಿ ಹಿಂದೆ ಹರಿಯನೊಲಿಸಿದ ಮಂಚ ||೧||

ನೀಲಾಂಬರವನುಟ್ಟು ನಳನಳಿಸುವ ಮಂಚ
ನಾಲಿಗೆ ಎರಡುಳ್ಳ ನೈಜಮಂಚ
ನಾಲ್ವತ್ತು ಕಲ್ಪದಿ ತಪವ ಮಾಡಿದ ಮಂಚ
ತಾಲ ಮುಸಲ ಹಲವ ಹಿಡಿದಿರುವ ಮಂಚ ||೨||

ರಾಮನನುಜನಾಗಿ ರಣವ ಜಯಿಸಿದ ಮಂಚ
ತಾಮಸರುದ್ರನನು ಪಡೆದ ಮಂಚ
ಭೀಮಾವರಜನೊಳು ಆವೇಶಿಸಿದ ಮಂಚ
ಜೀಮೂತ ಮಂಡಲವ ತಡೆಗಟ್ಟಿದ ಮಂಚ ||೩||

ಜೀವನಾಮಕನೆನಿಸಿ ವ್ಯಾಪ್ತನಾದ ಹರಿಯ
ಸೇವಿಸಿ ಸುಖಿಸುವ ದಿವ್ಯ ಮಂಚ
ಸಾವಿರ ಮುಖದಿಂದ ತುತಿಸಿ ಹಿಗ್ಗುವ ಮಂಚ
ದೇವಕೀಜಠರದಲಿ ಜನಿಸಿದ ಮಂಚ ||೪||

ದಾಸ ಸಾಹಿತ್ಯ ಪ್ರಕಾರ: 
ಬರೆದವರು: 

ಹಿಂದಿಲ್ಲ ಇಂದು ಮುಂದಿಲ್ಲ

-- ರಾಗ ಪಂತುವರಾಳಿ (ಬಸಂತ) ಅಟತಾಳ (ಝಪ್)

ಹಿಂದಿಲ್ಲ ಇಂದು ಮುಂದಿಲ್ಲ ಶ್ರೀ ಮು-
ಕುಂದಗೆ ಸಮರೆನಿಸುವರು ಲೋಕದೊಳಗೆ ||ಪ||

ವನಧಿ(?) ಮಥನದಲ್ಲಿ ಅನಿಮಿಷರನ್ನ್ನು ಬಿಟ್ಟು
ಜನನಿ ಲಕುಮಿ ನಾರಾಯಣನೊಲಿಸಿದಳಾಗಿ ||೧||

ಪ್ರಪಿತಾಮಹನು ಲೋಕಾಧಿಪ ಚತುರ್ಮುಖನಿಗೆ
ತಪತಪವೆಂದ್ಹೇಳ್ದನುಪಮರೆನಿಸುವರು ||೨||

ಕಂಧರ ವರವೀಯೆ ಹಿಂದಟ್ಟಿದಸುರನ
ಕೊಂದು ಶಿವನ ಕಾಯ್ದ ಇಂದಿರಾಪತಿಗೆಣೆ ||೩||

ಮಂದರಾದ್ರಿಯನೆತ್ತಿ ಸಿಂಧುಮಥನ ಮಾಡಿ
ವೃಂದಾರಕರಿಗೆ ಆನಂದವಿತ್ತಗೆ ಸರಿ ||೪||

ಭೃಗುಮುನಿಪನು ಬ್ರಹ್ಮಾದಿಗಳ ಪರೀಕ್ಷಿಸಿ
ಜಗನ್ನಾಥವಿಠಲಗೆ ತ್ರಿಗುಣವರ್ಜಿತನೆಂದ ||

ದಾಸ ಸಾಹಿತ್ಯ ಪ್ರಕಾರ: 
ಬರೆದವರು: 

ಏತರವ ನಾನಯ್ಯ ಇಂದಿರೇಶ

--- ರಾಗ - ಮಲಹರಿ ತಾಳ-ಝಂಪೆ

ಏತರವ ನಾನಯ್ಯ ಇಂದಿರೇಶ
ಹೋತಾಹ್ವಯನೆ ನಿನ್ನಧೀನವೀ ಜಗವೆಲ್ಲ ||ಪ||

ಕಾಲಗುಣಕರ್ಮ ಸ್ವಭಾವಗಳ ಮನೆಮಾಡಿ
ಶ್ರೀಲೋಲ ನೀ ಸರ್ವರೊಳಗೆ ಇದ್ದು
ಲೀಲೆಗೈಯುತೆ ಲಿಪ್ತನಾಗದೆ ನಿರಂತರದಿ
ಪಾಲಿಸುವೆ ಸಂಹರಿಪೆ ದಿವಿಜ ದಾನವರ ||೧||

ತಿಳಿಸಿಕೊಂಬುವ ನೀನೆ ಶ್ರುತಿತತಿಗಳೊಳಗಿದ್ದು
ತಿಳಿಸುವವ ನೀನೆ ಉಪದೇಶಕರೊಳಿದ್ದು
ತಿಳಿಯುವವವ ನೀನೆ ಬುದ್ಧ್ಯಾದಿಂದ್ರಿಯದಲಿದ್ದು
ನೆಲೆಗೊಂಡು ನಿಖಿಳ ವ್ಯಾಪಾರ ಮಾಡುತಲಿಪ್ಪೆ ||೨||

ಅಗಣಿತ ಮಹಿಮ ಜಗಜ್ಜನ್ಮಾದಿಕಾರಣನೆ
ತ್ರಿಗುಣವರ್ಜಿತ ತ್ರಿವಿಕ್ರಮನೇತ್ರಿಧಾಮ
ಭೃಗುಮುನಿವಿನುತ ಜಗನ್ನಾಥವಿಠ್ಠಲ ನಿನ್ನ
ಪೊಗಳಿ ಹಿಗ್ಗುವ ಭಾಗ್ಯ ಕೊಡು ಜನುಮ-ಜನುಮದಲಿ ||೩||

ದಾಸ ಸಾಹಿತ್ಯ ಪ್ರಕಾರ: 
ಬರೆದವರು: 

Pages