Skip to main content

ಜಗನ್ನಾಥದಾಸ

ಅಪರಾಧವೆಣಿಸದಲೆ ಕಾಯಬೇಕು

ರಾಗ - ಕಾಂಬೋಧಿ(ಬಾಗೇಶ್ರೀ) ಝಂಪೆತಾಳ

ಅಪರಾಧವೆಣಿಸದಲೆ ಕಾಯಬೇಕು ||ಪ||
ಕೃಪಣವತ್ಸಲನೆ ಶ್ರೀ ಮಧ್ವಮುನಿ ಗುರುರಾಯ ||ಅ.ಪ||

ನೀ ಮಾಡಿದುಪಕಾರ ನಾ ಮರೆವುದೆಂತೊ ಲ-
ಕ್ಷ್ಮೀಮನೋಹರನ ನಿಜ ದಾಸಾಗ್ರಣಿ
ಪಾಮರ ಲೋಕದೊಳು ಧೀಮಂತನೆನಿಸಿದೆ ಮ-
ಹಾಮಹಿಮ ನಿನ್ನ ಕರುಣಾಮೃತದ ಮಳೆಗರೆದು ||೧||

ಅವಿನೀತ ನಾನು ನಿನ್ನವನೆಂದು ತಿಳಿದು ಎ-
ನ್ನವಗುಣಗಳೆಣಿಸದಲೆ ನಿತ್ಯದಲ್ಲಿ
ಸುವಿವೇಕಿಯನು ಮಾಡು ಕವಿರಾಜ ತವ ಮನೋ-
ತ್ಸವಕೆ ಎಣೆಗಾಣೆ ನಾನವನಿಯೊಳಗಾವಲ್ಲಿ ||೨||

ಏನೂ ಅರಿಯದ ಮೂಢ ಮಾನವನು ನಾನು ಸು-
ಜ್ಞಾನಿವರ್ಯನು ನೀನೇ ಕಾಯಬೇಕು ||
ಮಾನನಿಧಿ ಜಗನ್ನಾಥವಿಠಲನ ಪದಯುಗಳ
ಧ್ಯಾನ ಮಾಡುವ ಧೀರ ಪ್ರಾಣ ಪಂಚಕರಾಯ ||೩||

ದಾಸ ಸಾಹಿತ್ಯ ಪ್ರಕಾರ: 
ಬರೆದವರು: 

ಬಂಧನವ ಪರಿಹರಿಸು ಭಯವಿದೂರ

------ರಾಗ -ಕಾಂಬೋಧಿ ಝಂಪೆತಾಳ

ಬಂಧನವ ಪರಿಹರಿಸು ಭಯವಿದೂರ
ಕಂದರ್ಪಜನಕ ಕಾರುಣ್ಯದಲಿ ಭಕ್ತಜನ ||ಪ||

ದುಷ್ಟಜನರು ಬಲು ಕಷ್ಟಪಡಿಸುವರು
ನಿನಗೆಷ್ಟು ಉಸುರಲಿ ಕೇಳು ಜಿಷ್ಣುಸಖನೇ
ವೃಷ್ಣೀಶ ನೀ ದಯಾದೃಷ್ಟಿಯಿಂದಲಿ ಈಗ
ಹೃಷ್ಟನ್ನ ಮಾಡು ಸಂತುಷ್ಟಿಯಲಿ ಬೇಗ ||೧||

ಹಯಮುಖನೆ ನಿನ್ನವರ ದಯದಿಂದ ಸಲಹುವದು
ವಯನಗಮ್ಯನೆ ಜ್ಞಾನತ್ರಯವ ನಿರುತ
ಪ್ರಿಯನೆಂದು ನಿನಗೆ ನಾ ದೈನ್ಯದಿಂದಲಿ ಮೊರೆ ಇಡುವೆ
ದಯಮಾಡುವದು ನೀನು ಜಯಪ್ರದಾಯಕನಾಗಿ ||೨||

ವೀತಶೋಕನೆ ಎನ್ನ ಮಾತು ಲಾಲಿಸಿ ನಿನ್ನ
ದೂತನ್ನ ಸಲಹುವದು ಪ್ರೀತಿಯಿಂದ
ದಾತ ಶ್ರೀಗುರು ಜಗನ್ನಾಥವಿಠಲ ನಿನ್ನ ನಾ
ತುತಿಸಬಲ್ಲೆನೆ ವಿಧಾತೃಮಖವಂದಿತನೆ ||೩||

ದಾಸ ಸಾಹಿತ್ಯ ಪ್ರಕಾರ: 
ಬರೆದವರು: 

ನಿನ್ನ ದಾಸರ ದಾಸನೆಂತಾಹೆನೋ

--------ರಾಗ -ಕಾಂಬೋಧಿ (ಮಾಲಕಂಸ್) ಝಂಪೆತಾಳ

ನಿನ್ನ ದಾಸರ ದಾಸನೆಂತಾಹೆನೋ ||ಪ||
ಅನಂತ ಅಪರಾಧವನುಗಾಲ ಮಾಡುತಿಹೆ ||ಅ.ಪ||

ಸ್ನಾನ ಸಂಧ್ಯಾನ ಜಪ ಮೌನವೇ ಮೊದಲಾದ
ನಾನಾ ವಿಧದ ವಿಹಿತ ಧರ್ಮ ತೊರೆದು
ನಾನು ನನ್ನದು ಎಂಬ ಹೀನ ಬುದ್ಧಿಗಳಿಂದ
ಹೀನ ಜನರೊಡನಾಡಿ ಜ್ಞಾನಿ ಜನಗಳ ನಿಂದಿಸಿದೆ ||೧||

ಏಕಾದಶಿಯ ಜರೆದು ಲೋಕವಾರ್ತೆಗಳಿಂದ
ಶ್ರೀಕಾಂತ ನಿನ್ನ ಸೇವೆಯನು ಮರೆದು
ಬೇಕಾದ ವೈಷಿಕವ ಸ್ವೀಕರಿಸಿ ಲೋಕದೊಳು
ಸಾಕಿದವರನು ನಾ ನಿರಾಕರಿಸಿ ಬಾಳುವೆನು ||೨||

ಎನಗಧಿಕರಾದವರೊಡನೆ ದ್ವೇಷವನು
ಅನುಗಾಲ ಮಾಡುವೆನು ಅನಿಮಿಷೇಶ
ಎನಗೆ ಸರಿಯಾದವರ ಕಂಡು ಮತ್ಸರಿಸುವೆನು
ಎನಗಿಂತ ನೀಚರನು ನೋಡಿ ನಾ ನಗುತಿಪ್ಪೆ ||೩||

ಕಾಸಿನಾಸೆಗೆ ಪೋಗಿ ದಾಸವೇಷವ ಧರಿಸಿ
ಮೋಸ ಮಾಡುವೆ ಜನರ ಪಾಶ ಬೀರಿ
ವಾಸುದೇವನೆ ಸರ್ವದೇಶಕಲಾದಿಗಳಿ-

ದಾಸ ಸಾಹಿತ್ಯ ಪ್ರಕಾರ: 
ಬರೆದವರು: 

ವಾದಿರಾಜಗುರು ನೀ ದಯಮಾಡದೆ

------ ರಾಗ-ಧನಶ್ರೀ (ಜೀವನಪುರಿ) ಆದಿತಾಳ(ತೀನ್ ತಾಲ್)

ವಾದಿರಾಜಗುರು ನೀ ದಯಮಾಡದೆ ||ಪ||
ಈ ದುರಿತವ ಕಳೆಯದಿರ್ಪರ್ಯಾರೊ ||ಅ.ಪ||

ಕಲಿಯ ಬಾಧೆಯು ತಾ ವೆಗ್ಗಳವಾಗಿದೆ
ಇಳೆಯೊಳು ಯತಿಕುಲತಿಲಕ ಕೃಪಾಳೊ ||೧||

ದೇಶಿಕಾರ್ಯ ವಾಗೀಶ ಕುವರ ತವ
ದಾಸ ಸಮೂಹವ ನೀ ಸಲಹೈ ಸದಾ ||೨||

ಜನ್ಮಾದಿವ್ಯಾದ್ಯುನ್ಮಾದ ಭ್ರಮ
ನಿಮ್ಮೊರೆ ಹೊಕ್ಕರಿಗಿನ್ಮೊದಲುಂಟೆ ||೩||

ನೀ ಗತಿಯೆಂದನುರಾಗದಿ ನಂಬಿದ
ಭೋಗಿಪುರೀಶನ ರೋಗವ ಕಳೆದೆ ||೪||

ಯಲರುಣಿ ಭಯಕಂಜಿ ನಿಮ್ಮಾಸನ
ಕೆಳಗಿರೆ ಕಂಡದನುಳುಹಿದೆ ಕರುಣಿ ||೫||

ಗರಮಿಶ್ರಿತ ನರಹರಿ ನೈವೇದ್ಯವ
ಅರಿತು ಉಂಡು ಅದನರಗಿಸಿಕೊಂಡೆ ||೬||

ಹಯವದನನ ಪದದ್ವಯ ಭಜಕಾಗ್ರಣಿ
ದಯದಿ ವಿಪ್ರನಿಗೆ ನಯನವನಿತ್ತೆ ||೭||

ಮೋದ ಮುನಿಮತ ಮಹೋದಧಿ ಪೂರ್ಣ
ವಿಧೋದಯ ಶರಣರ ಕಾದುಕೊ ದೊರೆಯೆ ||೮||

ದಾಸ ಸಾಹಿತ್ಯ ಪ್ರಕಾರ: 
ಬರೆದವರು: 

Pages