ಮನವೆ ಮರೆವರೇನೊ ಹರಿಯ
---- ರಾಗ ಯರಕಲ ಕಾಂಬೋಧಿ (ಕಾಫಿ) ಅಟತಾಳ(ತೀನ್ ತಾಲ್)
ಮನವೆ ಮರೆವರೇನೊ ಹರಿಯ ಬಹು ||ಪ||
ಜನುಮಗಳಲಿ ಪಟ್ಟ ಬವಣೆಗಳರಿಯ ||ಅ.ಪ||
ವಿಷಯ ಚಿಂತನೆ ಮಾಡೆ ಸಲ್ಲ ಮೇಷ
ವೃಷಣನಾದನು ಪೌಲೋಮಿಯ ನಲ್ಲ
ಝಷಕೇತುವಿನ ಮೇಳಹೊಲ್ಲ ನಿ-
ರಶನನಾಗೊ ಯಮರಾಯ ಎಂದೆಂದು ಕೊಲ್ಲ ||೧||
ಧನವೆ ಜೀವನವೆಂಬೆ ನೀನು, ಸುಯೋ-
ಧನನ ನೋಡು, ಧನದಿಂದ ಏನಾದ ಕೊನೆಗೆ
ಅನಿರುದ್ಧದೇವನ ಮನೆಗೆ ಪೋಪ
ಘನವಿಜ್ಞಾನ ಸಂಪಾದಿಸೊ ಕೊನೆಗೆ ||೨||
ಹರಿದಾಸನಾಗಿ ನೀ ಬಾಳೋ , ಗುರು-
ಹಿರಿಯರ ಪಾದಕಮಲಕೆ ನೀ ಬೀಳೊ
ನರರ ನಿಂದಾಸ್ತುತಿ ತಾಳೋ, ದೇಹ
ಸ್ಥಿರವಲ್ಲ ಸಂಸಾರ ಬಲು ಹೇಯ ಕೇಳೊ ||೩||
ಜಿತನಾಗಿ ಪೇಳುವೆ ಸೊಲ್ಲ, ಹರಿ-
ಕಥೆಯಲ್ಲಿ ನಿರತನಾಗಿರು, ಲೋಹಕಲ್ಲ
ಪ್ರತಿಮೆ ಪೂಜಿಸಲಲ್ಲೇನಿಲ್ಲ , ಪರೀ-
ಕ್ಷಿತನೆಂಬ ರಾಯ ಈ ಮಹಿಮೆಯ ಬಲ್ಲ ||
ಹಲವು ತೀರ್ಥಗಳಲ್ಲಿ ಸ್ನಾನ ಮಾಡೆ
ಮಲ ಪೋಪುದಲ್ಲದೆ ನಿರ್ಮಲ ಜ್ಞಾನ
ಫಲಿಸದೆಂದೆಂದಿಗು ಹೀನ ಬುದ್ಧಿ
ಕಳೆದು ಸೇವಿಸು ಸಾಧುಗಳನನುದಿನ ||೫||
ಜ್ಞಾನೇಚ್ಛಾಕ್ರಿಯಾಶಕ್ತಿ ತ್ರಯವ ತಿಳಿ-
ದಾನಂದಪಡು, ಬಯಸದಿರು ಉಭಯವ
ಸಾನುರಾಗದಿ ಬೇಡು ದಯವ ನೀ ಮ-
ದ್ದಾನೆಯಂದದಿ ಸಂಚರಿಸು ಬಿಟ್ಟು ಭಯವ ||೬||
ಭಾವಕ್ರಿಯೆ ದ್ರವ್ಯಾದ್ವೈತ ನೀ-
ನಾವಾಗ ಚಿಂತಿಸೊ , ಭೌಮಾದಿಭೂತ
ಜೀವಗಳು ಜಗನ್ನಾಥವಿಠಲ-
ಗಾವಾಸಯೋಗ್ಯವೆಂದರಿಯೊ ಸಂತತ ||೭||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments