ಈತನೀಗ ಕೃಷ್ಣನಾಥನು ಶ್ರೀನಾಥನಮ್ಮಾ

(ಬಿಹಾಗ್ ರಾಗ ದಾದರಾ ತಾಳ) ಈತನೀಗ ಕೃಷ್ಣನಾಥನು ಶ್ರೀನಾಥನಮ್ಮಾ ||ಧ್ರುವ|| ನಂದಕುಮಾರನೀತ ನಂದಮಹಿಮನೀತ ಕಂದರ್ಪಜನಕನೀತ ಸುಂದರವದನನೀತ ||೧|| ಇಂದಿರೇಶನು ಈತ ವಂದಿತ ತ್ರೈಲೋಕನಾಥ ಚಂದವಾಗಿ ಸುಳಿದ ಬಾಲಮುಕುಂದನೀತ ||೨|| ಗಿರಿಯ ಬೆರಳಲೆತ್ತಿದಾತ ಕರಿಯ ಸೆರೆಯ ಬಿಡಿಸಿದಾತ ಮೊರೆಯ ಕೇಳಿ ದ್ರೌಪದಿಯ ಕರುಣಿಸಿದಾತ ||೩|| ಅಸುವ ಪೂತನಿ ಹೀರಿದಾತ ಕಂಸನ ಮಡುಹಿದಾತ ವಂಶ ಕೌರವರ ತಾನು ಸಂಹರಿಸಿದಾತ ||೪|| ಬಾಲಕನಹುದೀತ ಮೂಲೋಕ ಪಾಲಕನೀತ ಸಲಹುತಿಹ ಮಹಿಪತಿ ಮೂಲಾಗ್ರಜನೀತ ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಶ್ರೀರಂಗನಾಟದ ಪರಿಯಾ

(ಕಾಫೀ ರಾಗ ತಾಳ-ತ್ರಿತಾಳ) ಶ್ರೀರಂಗನಾಟದ ಪರಿಯಾ ತೋರುದು ನೋಡಚ್ಚರಿಯಾ ||ಪ|| ದೇವಕಿ ಕಂದಾ ದೇವ ಮುಕುಂದಾ ಮಾವ ಕಂಸನ ಕೊಂದಾ ಹಾವಿನ ಫಣಿ ಮೆಟ್ಯಾಡಿದ ಛಂದಾ ಕಾವನಯ್ಯ ಶ್ರೀ ಗೋವಿಂದಾ ||೧|| ಪೊಸ ಪರಿ ಆದವು ಕುಲಶಿಖಮಣಿಯಾ ಅಸು ಹೀರಿದಾ ಪೂತನಿಯಾ ಶಿಶುವಾಗಿ ನಂದಯಶೋದೆಯಾ ಮನಿಯಾ ಮೊಸರು ಹಾಲು ಬೆಣ್ಣಿಗೇ ದಣಿಯಾ ||೨|| ವಸುದೇವಾತ್ಮಜ ಪಶುಪತಿಪ್ರೀಯಾ ಕುಸುಮನಾಭನೇ ಶೇಷಶಯ್ಯಾ ಭಾಸ್ಕರ ಕೋಟಿಪ್ರಕಾಶ ನಮ್ಮಯ್ಯಾ ಲೇಸಾಗಿ ಹೊರೆವಾ ಮಹಿಪತಿಯಾ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಮ್ಮಪ್ಪನ ಕಂಡೆ ಅಪಾರ ಮಹಿಮೆಯುಳ್ಳನ

( ಪೀಲೂ ರಾಗ ದಾದರಾ ತಾಳ) ನಮ್ಮಪ್ಪನ ಕಂಡೆ ಅಪಾರ ಮಹಿಮೆಯುಳ್ಳನ ||ಧ್ರುವ|| ಅಪ್ಪನ ಕಂಡೆನಗೆ ತಾ ಅಪಾರ ಸಂತೋಷವಾಯಿತು ಅಪ್ಪಿಕೊಂಬ್ಹಾಗೆ ಎನಗೆ ಅರ್ಪಿಸಿ ಪ್ರಾಣವ ||೧|| ತುಂಬಿ ತುಳುಕಿತಾನಂದ ಗುಂಭ ಗುರುತ ಕಂಡಿನ್ನು ಕುಂಭಿನಿಯೊಳಗೆ ಪೂರ್ಣ ಅಂಬುಜಾಕ್ಷನ ||೨|| ಗುಪ್ತಲಿದ್ದ ಧನವು ತಾ ಪ್ರಾಪ್ತವ್ಯಾನಂತವಾಯಿತು ತಪ್ಪದೆ ಮಹಿಪತಿಗೆ ತೃಪ್ತಿಹೊಂದಿತು ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸಿಕ್ಕಿದ್ಯೆಲ್ಲೋ ಕೃಷ್ಣಾ ನೀನು

(ಮಿಶ್ರಪೀಲೂ ರಾಗ ಕೇರವಾ ತಾಳ) ಸಿಕ್ಕಿದ್ಯೆಲ್ಲೋ ಕೃಷ್ಣಾ ನೀನು ||ಪ|| ಸಿಕ್ಕಿದ್ಯೆಲ್ಲೋ ನಮ್ಮ ಕೈಯಾ ಹೊಕ್ಕು ಮನಿಯಾ ಹಕ್ಕಿಯೊಲಾದ್ಯೋ ತೆಕ್ಕಿಯಾ ಪುಕ್ಕಸಾಟಿಯಾ ||೧|| ಬಿಟ್ಟರ ಗೊಲ್ಲತೇರಲ್ಲೋ ಕಟ್ಟಿದಾ ಸೊಲ್ಲೋ ಮುಟ್ಟಿ ಬಿಡುವರಲ್ಲೋ ಘಟ್ಟ್ಯಾಗಿ ನಿಲ್ಲೋ ||೨|| ನಾವು ಬಲ್ಲೆವು ನಿನ್ನಾಟಾ ಎವಿ ಹಾಕು ನೋಟಾ ಹವಣಿಸಿ ಹಿಡಿದೇವೋ ನೀಟಾ ಭಾವಿಸಿ ಈ ಮಾಟಾ ||೩|| ಬಲ್ಲತನವ ದೋರಿದ್ಯೋ ಇಲ್ಲೆ ಮರುಳಾದ್ಯೋ ನಿಲ್ಲೆ ನಮ್ಮೊಳು ನೀನಾದ್ಯೋ ಎಲ್ಲಿಗೆ ಹೋದ್ಯೋ ||೪|| ವಶವಾಗಲಿಕ್ಕೆ ನಮಗ ವಸುಧಿಯೊಳಗ ಯಶೋದೆ ಹಡೆದಳು ಈಗ ಲೇಸಾಗಿ ನಿನಗ ||೫|| ನಾವು ಹಿಡಿದೇವೆಂಬು ಮಾತಾ ಪೂರ್ವಾರ್ಜಿತಾ ನೆವನ ಮಾಡಿತೋ ನವನೀತಾ ಸವಿದೋರಿ ಹಿತಾ ||೬|| ಭಾನುಕೋಟಿ ಸುವುದಯಾ ಮುನಿಜನಾಶ್ರಯಾ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಉಂಬುವ ಬನ್ನಿರೋ ನೀಟ ಅನುಭವದೂಟ

(ಮಾಂಡ್ ರಾಗ ಕೇರವಾ ತಾಳ) ಉಂಬುವ ಬನ್ನಿರೋ ನೀಟ ಅನುಭವದೂಟ ||ಧ್ರುವ|| ಎಡಿಯು ಬಡಿಸಿ ಪೂರ್ಣ ಗೂಡಿನೊಳಿಟ್ಟಿದೆ ಖೂನ ನೋಡಿ ನಿಮ್ಮೊಳು ನಿಧಾನ ಮಾಡಿ ಭೋಜನ ||೧|| ತುತ್ತು ಕೊಂಬುದು ಬ್ಯಾಗ ಸತ್ಸಂಗದಲಿ ನೀವೀಗ ಅತಿಶಯಾನಂದ ಭೋಗ ಉತ್ತಮ ಯೋಗ ||೨|| ಕಲ್ಪನೆಂಬುದು ನೊಣ ಬೀಳಗೊಡದೆ ಜತನ ಬಳೆದುಕೊಂಡುಂಬುವ ಜಾಣ ಕಳೆದನು ಮಾನ ||೩|| ಸವಿಸವಿ ಮಾಡಿಕೊಂಡು ಸೇವಿಸುವದು ಮನಗಂಡು ಪಾವನಾಗಬೇಕು ಉಂಡು ಸವಿಸೂರೆಗೊಂಡು ||೪|| ಉಂಡು ಮಹಿಪತಿ ನೋಡಿ ಕೊಂಡಾಡಿದಾನಂದಗೂಡಿ ಮಂಡಲದೊಳಿದೇ ಮಾಡಿ ಬಿಡದೆ ಸೂರ್ಯಾಡಿ ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸ್ಮರಿಸು ಮನವೆ ನೀ ದೇವಕಿಕಂದನ

( ಯಮನ್ ರಾಗ ಕೇರವಾ ತಾಳ) ಸ್ಮರಿಸು ಮನವೆ ನೀ ದೇವಕಿಕಂದನ ||ಧ್ರುವ|| ಶರಣರ ಪಾಲನ ದುರುಳರ ನಾಶನ ||೧|| ಉರಗಶಯನ ಗರುಡವಾಹನನ ||೨|| ಸಿರಿಯಲೋಲನ ಪರಮಪಾವನನ ||೩|| ಸುರರಾಜವಂದ್ಯನ ಕರಿರಾಜಪ್ರಿಯನ ||೪|| ಗಿರಿಯನೆತ್ತಿದನ ತುರುಗಳಗಾಯ್ದವನ ||೫|| ಹರಿನಾಮಧ್ಯೇಯನ ಸಾರಸಂಜೀವನ ||೬|| ದಾರಿದ್ರ್ಯಭಂಜನ ದುರಿತನಿವಾರಣ ||೭|| ಸರ್ವಾರ್ಥಕಾರಣ ಹರುಷದ ಜೀವನ ||೮|| ಪರಿಪೂರ್ಣವಿಹನ ಪೂರಿತಕಾಮನ ||೯|| ಗುರುಶಿರೋರತ್ನನ ಕರುಣಲೋಚನನ ||೧೦|| ಸ್ಮರಿಸು ಮನವೆ ನೀ ಮಹಿಪತಿ ಈಶನ ||೧೧||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕೃಷ್ಣ ಎಂಥಾದೋ ನಿನ್ನ ಕರುಣಿ

( ಭೈರವಿ ರಾಗ ಧುಮಾಳಿ) ಕೃಷ್ಣ ಎಂಥಾದೋ ನಿನ್ನ ಕರುಣಿ ಶಿಷ್ಟ ಜನರುದ್ದೇಶ ಬಂದ್ಯೊ ನೀ ಕರುಣಿ ದುಷ್ಟಜನರ ಮಾಡಿದ್ಯೊ ನೀ ಮರ್ದನಿ ದೃಷ್ಟಿಸಿ ಮಾಡುವೆ ಸಾಧು ಸಂರಕ್ಷಣಿ ||೧|| ಹುಟ್ಟಿ ವಸುದೇವನಲ್ಲಿ ಬಂದು ಹೊಳೆದ್ಯೊ ದಿಟ್ಟತನದಲಿ ನಂದಗೋಕುಲದಲಿ ಬೆಳೆದ್ಯೊ ಮೆಟ್ಟಿ ವಿಷದ ಹಾವಿನ ಹೆಡೆಯ ತುಳಿದ್ಯೊ ಕುಟ್ಟಿ ಕಂಸಾಸುರನ ಪ್ರಾಣವಳಿದ್ಯೊ ||೨|| ಮೊಲಿಯನುಂಡು ಕೊಂದಿ ಪೂತನಿ ಪ್ರಾಣ ಕಾಲಿಲೊದ್ದು ಕೊಂದಿ ಶಕಟಾಸುರನ ಬಾಲತನದಲಿ ಕೆಡಹಿದ್ಯೊ ಮಾವನ ನೆಲೆಯು ತಿಳಿಯದು ಇನ್ನೊಬ್ಬರಿಗೆ ಪೂರ್ಣ ||೩|| ತುರುಗಳ ಕಾಯ್ದ್ಯೊ ನೀ ಗೋವಿಂದ ಬೆರಳಲೆತ್ತಿದ್ಯೊ ಗಿರಿಯ ಮುಕುಂದ ಮರುಳು ಮಾಡಿದ್ಯೊ ಗೋಪಿಕೆಯರ ವೃಂದ ಹರುಷಗೈಸಿದೆ ಅನೇಕ ಪರಿಯಿಂದ ||೪|| ಹಾಲುಬೆಣ್ಣೆ ಕದ್ದು ತಿಂಬುವ ನಿನ್ನಾಟ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಎಂಥಾ ಮಗನೇ ನಿಮ್ಮ ಗೋಪೆಮ್ಮಾ

(ಪಹಾಡಿ (ಮಿಶ್ರ) ರಾಗ ಕೇರವಾ ತಾಳ) ಎಂಥಾ ಮಗನೇ ನಿಮ್ಮ ಗೋಪೆಮ್ಮಾ ||ಪ|| ಸವಿಸುಖ ಬಲ್ಲಿವ ನವನೀತ ಚೋರಾ ಎವಿ ಹಾಕುತ ಬಾಹ ಪರನಾರೀ ಜಾರಾ ||೧|| ಎಳೆವನು ಹಾದಿಯೊಳಗ ಸೆರಗಾ ಸುಳುಹು ಕಂಡಾರೆಂದರ ತಾ ತಿರಗಾ ||೨|| ಹಿಡಿದೇನಂದರ ಕೈಯೊಳು ಸಿಲುಕಾ ಮಾಡಿ ಮಾಡರಿಧಾಂಗ ಇವ ಬಲು ಠಕ್ಕಾ ||೩|| ಹೇಳಬೇಕಿನ್ನಾರಿಗೆ ಈ ದೂರಾ ತಿಳಿದುಕೊಳ್ಳಮ್ಮಾ ಮಗನ ವಿಚಾರಾ ||೪|| ಬಿಡ ಇವನೆಂದೂ ಪಿಡಿದವರ ಕೈಯ್ಯಾ ಬಿಡದೆ ಸಲಹುತಿಹ ಮೂಢ ಮಹಿಪತಿಯಾ ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಂಡೆ ಕಂಗಳಲೆನ್ನ ಮಂಗಳಾತ್ಮನ

(ಮಾಂಡ್ ರಾಗ ಕೇರವಾ ತಾಳ) ಕಂಡೆ ಕಂಗಳಲೆನ್ನ ಮಂಗಳಾತ್ಮನ ಮಂಗಳಾಂಗ ಶ್ರೀಗುರು ರಂಗನ ಕಂಡೆ ||ಧ್ರುವ|| ಬಾಲಲೀಲೆ ತೋರಿದ ನೀಲವರ್ಣನ ಕಂಡೆ ಪಾಲಗಡಲಲಿಹ ಗೋಪಾಲನ ಕಂಡೆ ಮೂಲರೂಪದಲಿ ಫಲ್ಗುಣಗೊಲಿದನ ಕಂಡೆ ಕುಲಕೋಟಿ ಬಂಧುವಾದ ಬಳಗನ ಕಂಡೆ ||೧|| ಕೊಳಲನೂದುವ ಮೂರ್ತಿ ನಳಿನನಾಭನ ಕಂಡೆ ಥಳಥಳಿಸುವ ಪದ ಹೊಳೆವನ ಕಂಡೆ ಕಳಲ ಮೊಸರ ಬೆಣ್ಣೆ ಮೆಲುವ ಚೆಲುವನ ಕಂಡೆ ಇಳೆಯೊಳು ಗೋಕುಲದಿ ಸುಳಿದನ ಕಂಡೆ ||೨| ಕಿರೀಟಕುಂಡಲಕರ್ಣ ಕೌಸ್ತುಭಧರನ ಕಂಡೆ ಪರಿಪರಿಭೂಷಣ ಸರ್ವಾಂಗನ ಕಂಡೆ ಗರುಡವಾಹನ ಸ್ವಾಮಿ ಉರಗಶಯನನ ಕಂಡೆ ಸಿರಿಯ ಲೋಲಲಿಹ ಸರ್ವೋತ್ತಮನ ಕಂಡೆ ||೩|| ವಿದುರವಂದಿತ ದೇವ ಮದನಮೋಹನ ಕಂಡೆ ಸಾಧುಹೃದಯ ಪ್ರಾಣ ಶ್ರೀಮಾಧವನ ಕಂಡೆ ಯದುಕುಲೋತ್ತಮ ಮಧುಸೂದನನ ಕಂಡೆ ಆದಿ ಅವಿನಾಶ ಶ್ರೀಧರನ ಕಂಡೆ ||೪||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಇವನೋಡಮ್ಮಾ ನವನೀತ ಚೋರಾ

(ಬಹಾರ್ ರಾಗ ತ್ರಿತಾಳ)

 

ಇವನೋಡಮ್ಮಾ ನವನೀತ ಚೋರಾ

ದೇವ ದೇವ ಮಾಮನೋಹರಾ ||ಪ||

 

ಗೋವನಿವ ಗೋಪಾಲ ಶ್ರೀಧರಾ

ಗೋವಿಸುವ ಈವ ದಾಮೋದರಾ

ಸಾವಿರ ನಾಮದೊಡೆಯಾ ಸಹಕಾರಾ

ಹಾವಿನ ಫಣಿ ಮೆಟ್ಟಿದ ವೀರಾ ||೧||

 

ಸಿರಿಯ ಲೋಲನಿವ ನಂದಕುಮಾರಾ

ಉರಗಶಯನ ಕೌಸ್ತುಭಧರಾ

ಪರಮಪುರುಷ ಹರಿಯೆ ಸುರವರಾ

ಮರುಳು ಮಾಡಿದವ ಗೊಲ್ಲತೇರಾ ||೨||

 

ಬೆಣ್ಣಿಮೊಸರು ಕದ್ದು ಒಯ್ವನಾ

ಕಣ್ಣಿಲೆ ಕಟ್ಟಬೇಕು ಇವನಾ

ಪುಣ್ಯ ಉಳ್ಳ ಯಶೋದೆ ಕಂದನಾ

ಬಣ್ಣಿಸೋ ಮಹಿಪತಿಯನುದಿನಾ ||೩||

ದಾಸ ಸಾಹಿತ್ಯ ಪ್ರಕಾರ
ಬರೆದವರು