ಕಂಡೆ ಕಂಗಳಲೆನ್ನ ಮಂಗಳಾತ್ಮನ
(ಮಾಂಡ್ ರಾಗ ಕೇರವಾ ತಾಳ)
ಕಂಡೆ ಕಂಗಳಲೆನ್ನ ಮಂಗಳಾತ್ಮನ
ಮಂಗಳಾಂಗ ಶ್ರೀಗುರು ರಂಗನ ಕಂಡೆ ||ಧ್ರುವ||
ಬಾಲಲೀಲೆ ತೋರಿದ ನೀಲವರ್ಣನ ಕಂಡೆ
ಪಾಲಗಡಲಲಿಹ ಗೋಪಾಲನ ಕಂಡೆ
ಮೂಲರೂಪದಲಿ ಫಲ್ಗುಣಗೊಲಿದನ ಕಂಡೆ
ಕುಲಕೋಟಿ ಬಂಧುವಾದ ಬಳಗನ ಕಂಡೆ ||೧||
ಕೊಳಲನೂದುವ ಮೂರ್ತಿ ನಳಿನನಾಭನ ಕಂಡೆ
ಥಳಥಳಿಸುವ ಪದ ಹೊಳೆವನ ಕಂಡೆ
ಕಳಲ ಮೊಸರ ಬೆಣ್ಣೆ ಮೆಲುವ ಚೆಲುವನ ಕಂಡೆ
ಇಳೆಯೊಳು ಗೋಕುಲದಿ ಸುಳಿದನ ಕಂಡೆ ||೨|
ಕಿರೀಟಕುಂಡಲಕರ್ಣ ಕೌಸ್ತುಭಧರನ ಕಂಡೆ
ಪರಿಪರಿಭೂಷಣ ಸರ್ವಾಂಗನ ಕಂಡೆ
ಗರುಡವಾಹನ ಸ್ವಾಮಿ ಉರಗಶಯನನ ಕಂಡೆ
ಸಿರಿಯ ಲೋಲಲಿಹ ಸರ್ವೋತ್ತಮನ ಕಂಡೆ ||೩||
ವಿದುರವಂದಿತ ದೇವ ಮದನಮೋಹನ ಕಂಡೆ
ಸಾಧುಹೃದಯ ಪ್ರಾಣ ಶ್ರೀಮಾಧವನ ಕಂಡೆ
ಯದುಕುಲೋತ್ತಮ ಮಧುಸೂದನನ ಕಂಡೆ
ಆದಿ ಅವಿನಾಶ ಶ್ರೀಧರನ ಕಂಡೆ ||೪||
ತುರುಗಳ ಕಾಯ್ದ ಶ್ರೀಹರಿ ಗಿರಿಧರನ ಕಂಡೆ
ಮುರಹರನೆನಿಸಿದ ಸುರಾಧೀಶನ ಕಂಡೆ
ಕರಿಯ ವರದಾಯಕ ಹರಿ ದಯಾಳುವ ಕಂಡೆ
ನರಹರಿಯು ಶ್ರೀನಾರಾಯಣನ ಕಂಡೆ ||೫||
ದುಷ್ಟಮರ್ದನ ದೂರ ವಿಷ್ಣುದೇವನ ಕಂಡೆ
ಶಿಷ್ಟಜನಪಾಲಕ ಶ್ರೀಸೃಷ್ಟೀಶನ ಕಂಡೆ
ದೃಷ್ಟಿಯೊಳು ಸುಳಿದು ದೃಷ್ಟಾಂತದವನ ಕಂಡೆ
ಕಷ್ಟ ಪರಿಹರಿಪ ಶ್ರೀ ಕೃಷ್ಣನ ಕಂಡೆ ||೬||
ಗುರು ಶಿರೋಮಣಿ ತ್ರೈಲೋಕ್ಯನಾಥನ ಕಂಡೆ
ಪರಮಭಕ್ತರ ಸಂಜೀವನ ಕಂಡೆ
ಶರಣರಕ್ಷಕ ನಮ್ಮ ಕರುಣಸಿಂಧುನ ಕಂಡೆ
ತರಳ ಮಹಿಪತಿ ಪ್ರಾಣಹೊರೆವನ ಕಂಡೆ ||೭||
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ
- Log in to post comments