ಅಲ್ಲಿನೋಡಿ ಶ್ರೀನಿವಾಸನ

ಅಲ್ಲಿನೋಡಿ ಶ್ರೀನಿವಾಸನ ||ಪ||
ಪುಲ್ಲನಾಭನು ಸಿರಿನಲ್ಲೆಯಿಂದೊಪ್ಪಿರುವುದ ನೋಡಿ ||ಅ||

ಶೇಷನ ಫಣೆಯೊಳು ವಾಸವ ಮಾಡುತ  
ದಾಸಜನರ ಮನ ತೋಷಪಡಿಸುವುದ ನೋಡಿ||೧||

ಆದರದಿಂದಲಿ ಸಾಧನಪುರದೊಳು
ಸಾಧುಜನರ ಮನ ಮೋದಪಡಿಸುವುದ ನೋಡಿ||೨||


ಪ್ರಾಣನಾಥವಿಠಲನು ಸಾನುರಾಗದಲಿ ವೇಣು-
ಗಾನವ ಮಾಡುತ ಸಿರಿಮಾನಿನಿಯಿಂದೊಪ್ಪಿರುವುದ ನೋಡಿ ||೩||


-- ಬಾಗೇಪಲ್ಲಿ ಶೇಷದಾಸರು
 

ದಾಸ ಸಾಹಿತ್ಯ ಪ್ರಕಾರ
ಬರೆದವರು

ಆರಿಗೇತರ ಮೊರೆಯನಿಡಲಿ

ಆರಿಗೇತರ ಮೊರೆಯನಿಡಲಿ
ಸಾರಿದವನ ಪೊರೆವ ಶ್ರೀ ರಮಣ ನೀನಿರಲು
ಬೆಳಸಿಗೊಬ್ಬನ ಕೇಳೆ ಮಳೆಗೆ ಮತ್ತೊಬ್ಬನೆ
ಅಳತೆಗೆ ಇನ್ನೊಬ್ಬನೇ ಹಾಗೆ
ಒಳಿತಿಗೊಬ್ಬರು ದೊರೆಗಳೇ ಮೇಲೆನ್ನ
ಪ್ರಳಯಕ್ಕೆ ಮತ್ತೊಬ್ಬನೇ ಪರಿಪರಿ
ಖಳರ ಮಾತುಗಳೇ ಸ್ವಾಮಿ
ಆ ಕಾಲದಲಿ ನೀನೆ ಈ ಕಾಲದಲಿ ನೀನೆ
ಸಾಕುವನು ಸ್ಥಿರವಾಗಿ ಇನ್ನೊಬ್ಬನೆ
ತಾಕು ತಗಲಿಲ್ಲದನೆ ಬೊಮ್ಮನೆ ಮೊದಲಾದ
ಲೋಕಪತಿಗಳ ಒಡೆಯನೆ ಈ ವೇಳೆ
ಲೋಕರನು ಕಾಯಬೇಕೋ ಸ್ವಾಮಿ
ಕಾಸು ಒಬ್ಬರಿಗಿಲ್ಲ ಲೇಸು ತೋರದಲೇ
ದೇಶಕೊಬ್ಬರು ಪೋದರೋ ಪೊಟ್ಟಿಗೆ
ಕೂಸುಗಳ ಮಾರುತ್ತ ಲುಂಡರೋ ಆ ಜನರ
ಕ್ಲೇಶಪಡೆಸದಲೆ  ಪೊರೆಯೊ ಕರುಣದಲಿ
ವಾಸುದೇವ ವಿಠಲ ಸ್ವಾಮಿ

 

ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಲ್ಪಧರ್ಮವು ಜ್ಞಾನದಿಂದ ಮಾಡಲು

ಅಲ್ಪಧರ್ಮವು ಜ್ಞಾನದಿಂದ ಮಾಡಲು
ಬ್ರಹ್ಮಪರಿಯಂತ ಸುಖ ಉಂಟು ನರಗೆ
ಸ್ವಲ್ಪೇತರ ತಿಳಿಯದೆ ಮಾಡಲ್ ಫಲವು ಭುಜಗ-
ತಲ್ಪ ಪ್ರಾಣೇಶವಿಠಲ ಮೆಚ್ಚನೋ

----ಲಿಂಗಸುಗೂರಿನ ಯೋಗೇಂದ್ರರಾಯರು


ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಲ್ಪವೆನಿಸಲಿಬೇಡವನ್ಯರಿಗೆ ಎಲೊ ಹರಿಯೆ

ಅಲ್ಪವೆನಿಸಲಿಬೇಡವನ್ಯರಿಗೆ ಎಲೊ ಹರಿಯೆ
ಕಾಲಿಗೆರಗುವೆನೊ ಕರುಣಾರ್ಣವೇಶ
ಕಾಲದೇಶವ ತೋರಿ ಕಠಿಣಮಾತುಗಳಾಡೆ
ಮೇಲೆ ನಿನ್ನ ಘನತೆಗೆ ಶ್ರೀಧರ
ಮೂಲ ನೀ ಸಕಲ ಕಾರಣಗಳಿಗೆ ಮುಖ್ಯ ತವ
ಆಳಿನಾಳೋ ನಾನು ಅನಿಮಿತ್ತಬಂಧು
ಬಾಲಕರ ಬಳಲಿಸುವ ಬಡಿವಾರವೇನೊ ನಾ
ಕೀಳುಮತಿಯಯ್ಯ ಕಿಂಕರರ ದೊರೆಯೆ
ಸಾಲುಸಾಲಿಗೆ ಶ್ರಮಜಾಲ ತೊಲಗಲು ನಿನ್ನ
ಊಳಿಗಕೆ ಮನವೆರಗುವುದೆ ಕೇಶವ
ಪಾಲಸಾಗರಶಾಯಿ ಪತಿತಪಾವನ ಮಾತ-
ಲಾಲಿಸುವುದುಚಿತ ವಿಶಾಲಚರಿತ
ಬಾಲಗೋಪಾಲ ಶ್ರೀಪತಿವಿಠಲನೆ ನಿನ್ನ
ಪಾಲಿಗೇ ಬಂದ ಪಾಮರದಾಸ ನಾನಯ್ಯ

ದಾಸ ಸಾಹಿತ್ಯ ಪ್ರಕಾರ
ಬರೆದವರು

ಅನಘನೆಂದೊಮ್ಮೆ ನೆನೆದ ಮಾನವ

ಅನಘನೆಂದೊಮ್ಮೆ ನೆನೆದ ಮಾನವ ಪಾಪ-
ವನದಿ ದಾಟುವ ಬಹುವೇಗದಿಂದ
ಜನನ ಮರಣ ಭಯವಿನಿತಿಲ್ಲ ಅವನೇ
ಸಜ್ಜನ ಶಿರೋಮಣಿ ಕಾಣೋ  ಸರ್ವರೊಳು
ಜನಕ  ಜನನಿ ಮೊದಲಾದ ನೂರೊಂದು ಕುಲವ
ಪಾವನ ಮಾಡುವನು ಪ್ರತಿದಿನದಲಿ
ವನಿತಾದಿ ವಿಷಯಂಗಳನುಭವಿಸುತ  ತನ್ನ
ಮನೆಯೊಳಿರಲವ ಜೀವನ್ಮುಕ್ತನೋ
ಸನಕಾದಿಮುನಿಗಳ  ಮನಕೆ ನಿಲುಕದಿಪ್ಪ
ಘನಮಹಿಮನೇ ಬಂದು ಕುಣಿವ ಮುಂದೆ
ಹನುಮವಂದಿತ ಜಗನ್ನಾಥವಿಠಲರೇಯ
ಅನಿಮಿತ್ತ ಬಂಧು ತಾ ಆವಾವ ಕಾಲದಲ್ಲಿ

--ಜಗನ್ನಾಥದಾಸರುದಾಸ ಸಾಹಿತ್ಯ ಪ್ರಕಾರ
ಬರೆದವರು

ಅಬಲೆಯ ಮಾತಿಗೆ ಮನಸು ಕರಗಿತು

ಅಬಲೆಯ ಮಾತಿಗೆ ಮನಸು ಕರಗಿತು, ನಿನ್ನ
ಅಂಬುಜಪಾದಕೆ ಬಿಡದೆ ಬಿನ್ನೈಸಿದೆ
ಪ್ರಬಲ ನೀನಾದಕಾರಣದಿಂದ ಚನ್ನಾಗಿ
ವಿಭುದೇಶ ನಾನಾರೋಗವಿನಾಶನೇ
ಶುಭವೇ ಕೊಡು ಜೀಯ್ಯಾ ನಿನಗಲ್ಲದೆ ಅನ್ಯ
ವಿಭುಗಳಿಗೆ ಶರಣೆನ್ನೆ ಸರ್ವಕಾಲ
ಶಬದಮಾತುರವಲ್ಲ ಅಂತರಂಗದ ಸ್ತೋತ್ರ
ಕುಬುಜೆಯ ತಿದ್ದಿದ ವಿಜಯವಿಠ್ಠಲರೇಯ
ನಿಬಿಡಕರುಣಾಂಬುಧಿ  ಮಹದುರಿತಾರಿ

--ವಿಜಯದಾಸರು

ದಾಸ ಸಾಹಿತ್ಯ ಪ್ರಕಾರ
ಬರೆದವರು

ಅನ್ಯದೇವತೆಗಳು ಕರೆದೊಯ್ದು ಮನ್ನಿಸಿ

ಅನ್ಯದೇವತೆಗಳು ಕರೆದೊಯ್ದು ಮನ್ನಿಸಿ
ರನ್ನದಂದಣವೇರಿ ಮರೆಸಲು
ಗನ್ನಘಾತಕವು ಎಂದಿಗೆ ತಪ್ಪದು
ಸನ್ನೆಯನು ಕೇಳಿ ಸರ್ವೋತ್ತಮ ಹರಿ ಉದಾ-
ಸೀನವನು ಮಾಡಿ ಕೆರಹೊಡಿಸಿದ ಸುಖ-
ವೇನು ಬಾರದು ಕಾಣೊ ಪನ್ನಂಗಾರಿಗಾದರೂ
ಅನ್ಯಥಾ ಬಿಡದಿರು ವಿಜಯವಿಠ್ಠಲನ್ನ
ಅನ್ಯದೇವತೆಗಳು ಕರೆದೊಯ್ದು ಮನ್ನಿಸಿ

--- ವಿಜಯದಾಸರು


ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಳಬ್ಯಾಡೆಲವೋ ರಂಗಮ್ಮ ನಿಮ್ಮ

ಅಳಬ್ಯಾಡೆಲವೋ ರಂಗಮ್ಮ ನಿಮ್ಮ
ಇಳಿಯಾರ ನೋಡುತಿದೆ ಗುಮ್ಮ||ಪ||

ಒದರಿದರೆ ಕೇಳೆಲವೋ ತಮ್ಮಾ, ಅದು
ಅದರುತಿದೆ  ಬೊಮ್ಮಾಂಡ ತಮ್ಮ
ಬೆದರಿ ದಿವಿಜರು ತಮ್ಮತಮ್ಮ , ನಿಜ
ಸದನ ಬಿಡುತಿಹರು ನೋಡಮ್ಮ ||೧||

ಬೆರಳುಗುರು ಗಾಯಗಳಿಂದ ಆ
ದುರುಳರನ್ನ ಜಠರ ತಳದಿಂದ
ಕರುಳು ಮಾಲಿಕೆ ಕಿತ್ತಿ ತಂದ , ತನ್ನ
ಕೊರಳಲಿ ಹಾಕಿಹ ಚಂದ  ||೨||

ಏಸು ದೈತ್ಯರಾಸಿಗಳನು
ತಾನು ಮೋಸಗೊಳಿಸಿ ಕೊಲ್ಲುವನು
ದಾಸನೆಂದರೆ ಕಾಮಧೇನು ಸುಮ್ಮಗಿ-ರುವ
ವಾಸುದೇವ ವಿಟ್ಠಲ ನೀನು ||೩||

 

-- ವ್ಯಾಸತತ್ವಜ್ಞರುದಾಸ ಸಾಹಿತ್ಯ ಪ್ರಕಾರ
ಬರೆದವರು

ಅಂಬಕಾದಲ್ಲಿದ್ದ ಕಂಭರೂಪದಿ ಹರಿಯ

ಅಂಬಕಾದಲ್ಲಿದ್ದ ಕಂಭರೂಪದಿ ಹರಿಯ
ಅಂಭ್ರಮಣಿ ಕಂಭಕ್ಕೆ ಸುತ್ತಲೂ ಗುಣರೂಪ
ಶಂಭುವಂದಿತ ವತ್ಸಸಂಭ್ರಮದಲಿ ಇರಲು
ಅಂಬುಜಸಮನ ಗುರುತಂದೆ ಗೋಪಾಲವಿಠಲನ
ಬೆಂಬಿದದೆ ತೋರೋ ಪ್ರಾಣ
 

--ಗೋಪಾಲದಾಸರು


 

ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಪರಾಧ ಎನ್ನದಯ್ಯ ಅಪರಿಮಿತವೆ ಸರಿ

ಅಪರಾಧ ಎನ್ನದಯ್ಯ ಅಪರಿಮಿತವೆ ಸರಿ ||ಪ||
ಕೃಪಣವತ್ಸಲ ಕೃಷ್ಣ ಕೃಪೆಯ ಮಾಡುವದಿಲ್ಲವೆ ||ಅ||

ಹುಡುಗರು ಮಾಡುವ ತಪ್ಪಿಗೆ ಜನನಿ ತಾ
ಬಿಡುವಳೆ ಅದರಿಂದ ದಯವ ಮಾಡದಲೆ
ನಡೆವ ಕುದರಿ ತಾನು ಮಲಗಿದಡೆ ಇನ್ನು
ಕಡೆಗೆ ಕಟ್ಟುವರೇನೊ ತಿರಗಿ ನೋಡದಲೆ ||೧||

ಮಾಡುಯೆಂದದರನು ಬಿಟ್ಟರೆ ಅಪರಾಧ
ಬ್ಯಾಡವೆಂದರಾನು ಮಾಡುವುದಪರಾಧ
ಈಡಿಲ್ಲ ನಿನ್ನ ದಯೆಯೆಂತೆಂದು ನಾನಿಂದು
ಮಾಡುವೆ ಬಿನ್ನಪ ನಾಚಿಕಿಲ್ಲದಲೆ ||೨||

ಬೇಡಿಕೊಂಬೆನೊ ವಾಸುದೇವವಿಠಲ ನೀನು
ನೋಡದಿದ್ದರೆ ಭಕ್ತ ಜನರು ತಮ್ಮ
ಬೀಡು ಸೇರಲೀಸರೊ ಕೇಡೇನೋ ಇದಕಿಂತ
ನೋಡು ನೀ ಇದರಿಂದ ಕೃಪಣ ವತ್ಸಲ ಕೃಷ್ಣ ||೩||

-- ವ್ಯಾಸತತ್ವಜ್ಞರು 

ದಾಸ ಸಾಹಿತ್ಯ ಪ್ರಕಾರ
ಬರೆದವರು