Skip to main content

ಜಗನ್ನಾಥದಾಸ

ನೀಚನಲ್ಲವೆ ಇವನು

-------ರಾಗ- ಪಂತುವರಾಳಿ (ಮಾಲಕಂಸ್) ರೂಪಕತಾಳ (ಝಪ್ ತಾಲ್)

ನೀಚನಲ್ಲವೆ ಇವನು ನೀಚನಲ್ಲವೆ ||ಪ||

ಕೀಚಕಾರಿಪ್ರಿಯನ ಗುಣವ
ಯೋಚಿಸದಲಿಪ್ಪ ನರನು ||ಅ.ಪ||

ಜನನಿ ಜನಕರಂತೆ ಜನಾ-
ರ್ದನನು ಸಲಹುತಿರಲು ಬಿಟ್ಟು
ಧನಿಕರ ಮನೆ ಮನೆಗಳರಸಿ
ಶುನಕನಂತೆ ತಿರುಗುತಿಹನು ||೧||

ಜೀವ ತಾನಕರ್ತೃವೆಂದು
ದೇವನೊಬ್ಬ ಕರ್ತೃ ರಮಾ-
ದೇವಿ ಮೊದಲುಗೊಂಡು ಹರಿಯ
ಸೇವಕರೆಂದರಿಯದವನು ||೨||

ಲೋಕವಾರ್ತೆಗಳಲಿ ಏಡ
ಮೂಕನಂತೆ ವಿಷಯಗಳವ-
ಲೋಕಿಸದಲೆ ಶ್ರೀಶಗಿವು ಪ್ರ-
ತೀಕವೆಂದು ತಿಳಿಯದವನು ||೩||

ಬಹಳ ದ್ರವ್ಯದಿಂದ ಗರುಡ
ವಾಹನನಂಘ್ರಿ ಭಜಿಸಿ ಅನು-
ಗ್ರಹವ ಮಾಡುಯೆಂದು ಬರಿದೆ
ಐಹಿಕಸುಖವ ಬಯಸುವವನು ||೪||

ಶ್ರೀಕಳತ್ರನಂಘ್ರಿ ಕಮಲ-
ವೇಕಚಿತ್ತದಲ್ಲಿ ಮನೋ-
ವ್ಯಾಕುಲಗಳ ಬಿಟ್ಟು
ಸುಖೋದ್ರೇಕದಿಂದ ಭಜಿಸುವವನು ||೫||

ದಾಸ ಸಾಹಿತ್ಯ ಪ್ರಕಾರ: 
ಬರೆದವರು: 

ಗತಿಯಾವುದೆನಗೆ ಶ್ರೀಪತಿಯೆ ಪೇಳೊ

----- ರಾಗ ಕಾಂಬೋಧಿ (ಬಾಗೇಶ್ರೀ) ಝಂಪೆತಾಳ

ಗತಿಯಾವುದೆನಗೆ ಶ್ರೀಪತಿಯೆ ಪೇಳೊ ||ಪ||
ಮತಿಗೆಟ್ಟು ಪ್ರತಿದಿನದಿ ಸತಿಯ ಬಯಸುವೆನೊ ||ಅ.ಪ||

ಮರುಳುಬುದ್ಧಿಗಳಿಂದ ಕರಸೂಚನೆಯ ಮಾಡಿ
ತರಳೆಯರ ತಕ್ಕೈಸಿ ಸರಸವಾಡಿ
ಇರುಳು ಹಗಲು ಹೀಗೆ ದುರುಳತನದಲಿ ತಿರುಗಿ
ಧರೆಯೊಳಗೆ ನಾನೊಬ್ಬ ಹರಿದಾಸನೆನಿಸಿದೆನು ||೧||

ನಾಚಿಕೆಯ ತೊರೆದು ಬಲು ನೀಚರಲ್ಲಿಗೆ ಪೋಗಿ
ಯಾಚಿಸುವೆ ಸುವಿಚಾರಹೀನನಾಗಿ
ಆ ಚತುರ್ದಶ ವರುಷದಾರಭ್ಯ ಈ ವಿಧದಿ
ಆಚರಿಪೆನೈ ಸವ್ಯಸಾಚಿಸಖ ಕೃಷ್ಣ ||೨||

ನಾನು ನನ್ನದು ಎಂಬ ಹೀನಬುದ್ಧಿಗಳಿಂದ
ಜ್ಞಾನಶೂನ್ಯನು ಆದೆ ದೀನಬಂಧು
ಸಾನುರಾಗದಿ ಒಲಿದು ನಾನಾಪ್ರಕಾರದಲಿ
ನೀನು ಪಾಲಿಸು ಹರಿಯೆ ಜ್ಞಾನಗುಣಪರಿಪೂರ್ಣ ||೩||

ಅಂಬುಜಾಕ್ಷನೆ ನಿನ್ನ ನಂಬಿ ಭಜಿಸುವರ ಪಾ-
ದಾಂಭುಜಕ್ಕೆರಗದಲೆ ಸಂಭ್ರಮದಲಿ

ದಾಸ ಸಾಹಿತ್ಯ ಪ್ರಕಾರ: 
ಬರೆದವರು: 

ನಿನ್ನ ಸಂಕಲ್ಪಾನುಸಾರ ಮಾಡೋ

--- ರಾಗ ಕಾಂಬೋಧಿ(ಭೂಪ್ ) ಝಂಪೆತಾಳ

ನಿನ್ನ ಸಂಕಲ್ಪಾನುಸಾರ ಮಾಡೋ
ಎನ್ನ ಸಾಕುವ ದೊರೆಯೆ ಮಾನ್ಯ ಮಾನದನೇ ||ಪ||

ಪಾತ್ರನೆಂದೆನಿಸೋ ಪಾಪಾತ್ಮನೆಂದೆನಿಸೋ , ಇವ
ಶ್ರೋತ್ರಿಯನೆಂದೆನಿಸೋ ಬಲುಶುಂಠನೆಂದೆನಿಸೋ
ಪುತ್ರ-ಮಿತ್ರಾದ್ಯರಿಂ ಬೈಸೋ , ಪೂಜೆಯ ಗೈಸೋ
ಕರ್ತು ನೀ ಜಗಕೆ ಸರ್ವತ್ರವ್ಯಾಪಕ ದೇವ ||೧||

ಜನರೊಳಗೆ ನೀನಿದ್ದು ಜನ್ಮಜನ್ಮಗಳಲಿ
ಗುಣಕಾಲ ಕರ್ಮ ಸ್ವಭಾವಂಗಳ
ಅನುಸರಿಸಿ ಪುಣ್ಯ-ಪಾಪಂಗಳ ಮಾಡಿಸಿ ಫಲಗಳ
ಉಣಿಸಿ ಮುಕ್ತರ ಮಾಡಿ ಪೊರೆವ ಕರುಣಾಳೋ ||೨||

ಯಾತಕೆಮ್ಮನು ಇನಿತು ದೂರಕನ ಮಾಡುವಿ
ಧರಾತಳದೊಳನುದಿನದಿ ಮಾಯಾಪತೇ
ಭೀತಿಗೊಂಬುವನಲ್ಲ ಭಯನಿವಾರಣ ಜಗ-
ನ್ನಾಥವಿಠಲ ಜಯಪ್ರದನೇ ಜಗದೀಶಾ ||೩||

ದಾಸ ಸಾಹಿತ್ಯ ಪ್ರಕಾರ: 
ಬರೆದವರು: 

ಪತಿತಪಾವನ ಪೂರ್ಣಕಾಮ ನೀನೇ

---- ರಾಗ -ಪಂತುವರಾಳಿ(ಯಮನ್) ಆದಿತಾಳ(ಝಪ್)

ಪತಿತಪಾವನ ಪೂರ್ಣಕಾಮ ನೀನೇ ||ಪ||
ಗತಿ ಎನಗೆ ಸಂತತ ಪರಂಧಾಮ ||ಅ.ಪ||

ಕೃಪಣ ವತ್ಸಲನೆ ಎಮ್ಮಪರಾಧಗಳ ನೋಡಿ
ಕುಪಿತನಾಗುವರೇನೋ ಸುಫಲದಾಯಿ
ನೃಪಗನಿರುದ್ಧ ಬಿನ್ನಪವ ಮಾಡುವೆ ನಿನಗೆ
ಚಪಲರಾಗಿಹರೊ ಕಾಶ್ಯಪಿ ಸುರರನು ಕಾಯೊ ||೧||

ಮಾನ್ಯಮಾನದ ಬ್ರಹ್ಮಣ್ಯದೇವ ನೀನೆಂದು
ಉನ್ನತ ಶ್ರುತಿಗಳು ಬಣ್ಣಿಸುತಿಹವು
ಸನ್ನುತ ಮಹಿಮನೆ ನಿನ್ನ ಪೊಂದಿದವರ
ಬನ್ನಬಡಿಪುದು ನಿನಗಿನ್ನು ಧರ್ಮವಲ್ಲ ||೨||

ಹಲವು ಮಾತುಗಳಾಡಿ ಫಲವೇನು
ಬ್ರಾಹ್ಮಣಕುಲಕೆ ಮಂಗಳವೀಯೊ ಕಲುಷದೂರ
ಸುಲಭದೇವೇಶ ನಿನ್ನುಳಿದು ಕಾಯ್ವರಕಾಣೆ
ಬಲಿಯ ಬಾಗಿಲ ಕಾಯ್ದ ಜಗನ್ನಾಥವಿಠಲ ||೩||

ದಾಸ ಸಾಹಿತ್ಯ ಪ್ರಕಾರ: 
ಬರೆದವರು: 

Pages