ಅಪರಾಧವೆಣಿಸದಲೆ ಕಾಯಬೇಕು

ಅಪರಾಧವೆಣಿಸದಲೆ ಕಾಯಬೇಕು

ರಾಗ - ಕಾಂಬೋಧಿ(ಬಾಗೇಶ್ರೀ) ಝಂಪೆತಾಳ ಅಪರಾಧವೆಣಿಸದಲೆ ಕಾಯಬೇಕು ||ಪ|| ಕೃಪಣವತ್ಸಲನೆ ಶ್ರೀ ಮಧ್ವಮುನಿ ಗುರುರಾಯ ||ಅ.ಪ|| ನೀ ಮಾಡಿದುಪಕಾರ ನಾ ಮರೆವುದೆಂತೊ ಲ- ಕ್ಷ್ಮೀಮನೋಹರನ ನಿಜ ದಾಸಾಗ್ರಣಿ ಪಾಮರ ಲೋಕದೊಳು ಧೀಮಂತನೆನಿಸಿದೆ ಮ- ಹಾಮಹಿಮ ನಿನ್ನ ಕರುಣಾಮೃತದ ಮಳೆಗರೆದು ||೧|| ಅವಿನೀತ ನಾನು ನಿನ್ನವನೆಂದು ತಿಳಿದು ಎ- ನ್ನವಗುಣಗಳೆಣಿಸದಲೆ ನಿತ್ಯದಲ್ಲಿ ಸುವಿವೇಕಿಯನು ಮಾಡು ಕವಿರಾಜ ತವ ಮನೋ- ತ್ಸವಕೆ ಎಣೆಗಾಣೆ ನಾನವನಿಯೊಳಗಾವಲ್ಲಿ ||೨|| ಏನೂ ಅರಿಯದ ಮೂಢ ಮಾನವನು ನಾನು ಸು- ಜ್ಞಾನಿವರ್ಯನು ನೀನೇ ಕಾಯಬೇಕು || ಮಾನನಿಧಿ ಜಗನ್ನಾಥವಿಠಲನ ಪದಯುಗಳ ಧ್ಯಾನ ಮಾಡುವ ಧೀರ ಪ್ರಾಣ ಪಂಚಕರಾಯ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು