ಸ್ಮರಿಸು ಸಂತತ ಹರಿಯನು

ಸ್ಮರಿಸು ಸಂತತ ಹರಿಯನು

--ರಾಗ ಮಧ್ಯಮಾವತಿ (ಭೂಪ್) ಝಂಪೆತಾಳ ಸ್ಮರಿಸು ಸಂತತ ಹರಿಯನು ಮನವೆ ||ಪ|| ಸ್ಮರಿಸು ಸಂತತ ಹರಿಯ ಕರುಣಾಳುಗಳ ದೊರೆಯ ಸರಸಿಯೊಳಗಂದು ಕರಿಯ ನರನ ಸಂ- ಗರದೊಳಗೆ ಕಾಯ್ದುದರಿಯ ಜಪ ಮ ವ್ರತ ದಾನ ತಪಕೆ ದೊರೆಯ ಜಗದೀಶ ಶರಣು ಪೊಕ್ಕವರ ತೊರೆಯ ಖರೆಯ ||ಅ.ಪ|| ತಾನೆ ಇಹಪರ ಸೌಖ್ಯ ದಾಸಿಗಳರಸನೆಂದು ಸಾನುರಾಗದಿ ನಂಬಿದ ಜನಕೆ ಸುರ- ಧೇನುವಂದದಲಿ ಮೋದಸಲಿಸುವ ಮ- ಹಾನಂದ ಪೂರ್ಣಬೋಧ ಪ್ರತಿಸಾಮ- ಗಾನಲೋಲ ಪ್ರಸಾದ-ಪಾದ ||೧|| ಎಲ್ಲೆಲ್ಲಿ ನೋಡೆ ಮತ್ತಲ್ಲಲ್ಲೆ ನೆಲೆಸಿಹನು ಬಲ್ಲಿದನು ಭಾಗ್ಯವಂತ ನಂಬಿದರಿ- ಗಲ್ಲದೆ ಒಲಿಯ ಭ್ರಾಂತ-ದುಷ್ಟ ಜನ- ರೊಲ್ಲ ನಿಶ್ಚಯ ಮಹಂತರೊಡೆಯ ಕೈ- ವಲ್ಯದಾಯಕನ ಇಂಥ-ಪಂಥ ||೨|| ನೋಡಿ ನೋಡಿಸುತಿಹನು ಮಾಡಿ ಮಾಡಿಸುತಿಹನು ನೀಡಿ ನೀಡಿಸುವ ಪಿಡಿವ ಪಿಡಿಸುವನು ಬೇಡಿ ಭೇಡಿಸುವ ಬಡವರೊಡೆಯ ಕೊಂ- ಡಾಡುವರ ಒಡನಾಡುವ ಈ ಮಹಿಮೆ- ಗೀಡೆಂದು ಆವ ನುಡಿವ-ಕೆಡುವ ||೩|| ಅಣುವಿನೊಳಗಣುವಹನು ಘನಕೆ ಘನತರನಹನು ಅಣುಮಹದ್ವಿಲಕ್ಷಣ ಕಲ್ಯಾಣ ಗುಣಜ್ಞಾನ ಘನ ಲಕ್ಷಣ-ಸಂಪೂರ್ಣ ಮನಮುಟ್ಟಿ ಕರೆದಾಕ್ಷಣ ಬಂದೊದಗಿ ಕುಣಿವ ಲಕ್ಷ್ಮೀವಕ್ಷನ-ಅನಪೇಕ್ಷಣ ||೪|| ಚೆಲುವರೊಳಗತಿಚೆಲುವ ಸುಲಭರೊಳಗತಿಸುಲಭ ಒಲಿವ ಮನಬಂದ ತೆರದಿ , ಗುಣಕರ್ಮ ಕುಲಶೀಲಗಳನೆಣಿಸನರಿದೀ ಭಕುತಿ ಫಲವ ಕೊಡೆ ತಾ ತವಕದಿ ಶಬರಿ ಎಂ- ಜಲನುಂಡ ಕರುಣಶರಧೀ-ಮರೆದೀ ||೫|| ಪ್ರಾದೇಶ ಮಾತ್ರ ಸ್ಥಿತ ಶ್ರೀದೇವಿಯರಸ ಕನ- ಕೋದರಾದ್ಯಮರ ವ್ರಾತ ಸಹಿತ ಮಹ- ದಾದಿ ಪೃಥ್ವ್ಯಂತ ಭೂತದೊಳು ನೆಲೆಸಿ ಕಾದುಕೊಂಡಿಹ ವಿಧಾತ ಅಂಡತ್ರಿದ- ಶಾಧಿಪನ ಸುತನ ಸೂತ-ಸ್ವರತ ||೬|| ಸ್ವಗತಭೇದ ವಿಶೂನ್ಯ ನಿಗಮ ಸಂಚಾರ ಶ್ರೀ ಜಗನ್ನಾಥವಿಠಲರೇಯ ತನ್ನ ಪಾ- ದಗಳ ಧ್ಯಾನಿಪರ ನೋಯಗೊಡದಂತೆ ಹಗಲಿರುಳು ಕಾವ ಮಾಯಾರಮಣ ನಮ್ಮ - ನಗಲಿ ಸೈರಿಸನು ಪ್ರಿಯ-ಧ್ಯೇಯ ||೭||
ದಾಸ ಸಾಹಿತ್ಯ ಪ್ರಕಾರ
ಬರೆದವರು