ಪದ / ದೇವರನಾಮ

ದಾಸರ ಪದಗಳು

ಸರಸಿಜಾಕ್ಷ ಸರಸದಿಂದ ಸರಸಿಜೋದ್ಭವಗೊಲಿದು ಬಂದ

(ಮೋಹನ ರಾಗ , ಛಾಪುತಾಳ) ಸರಸಿಜಾಕ್ಷ ಸರಸದಿಂದ ಸರಸಿಜೋದ್ಭವಗೊಲಿದು ಬಂದ ||ಪ|| ಉರಸಿನ ಮ್ಯಾಲೆ ಸರಸಿಜಾಕ್ಷಿಯನಿರಿಸಿ ಬಂದ ||ಅ.ಪ|| ಧೀರ ಶರಧಿಗಂಭೀರ ವರಘನಸಾರ ಕಸ್ತೂರಿತಿಲಕಧರ ಹೀರ ಮೌಕ್ತಿಕ ಕೇಯೂರ ಧರಿಸಿದ ನವನೀತ ಚೋರ ಬಂದ ||೧|| ನಂದ ಗೋಪಿಗಾನಂದವೂಡಿದ ಕಂದ ಗೋಕುಲದಿ ಬಂದ ಅಂದದಿಂದ ಸೌಂದರಿಯರ ಗೋವಿಂದ ಮುಕುಂದ ||೨|| ಅಂಗನೆಯರ ಕುಚಗಳಾಲಿಂಗನವ ಮಾಡಿ ನವಮೋಹನಾಂಗ ರಂಗವಿಠಲನು ನಮ್ಮಂತರಂಗದೊಳಗಿಹ ಕಲ್ಮಷಭಂಗ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸದ್ದು ಮಾಡಲು ಬ್ಯಾಡವೋ

(ಕಲ್ಯಾಣಿ ರಾಗ ಅಟ್ಟತಾಳ) ಸದ್ದು ಮಾಡಲು ಬ್ಯಾಡವೋ , ನಿನ್ನ ಕಾಲಿಗೆ ಬಿದ್ದು ನಾ ಬೇಡಿಕೊಂಬೆ ||ಪ|| ನಿದ್ದೆಗೆಯ್ಯುವರೆಲ್ಲ ಎದ್ದರೆ ನೀನು ಬಂ- ದಿದ್ದದ್ದು ಕಂಡರೇನೆಂಬುವರೊ ರಂಗ ||ಅ.ಪ|| ಬಳೆ ಘಲ್ಲುಕೆನ್ನದೇನೊ , ಕೈಯ ಪಿಡಿದು ಎಳೆಯದಿರೊ ಸುಮ್ಮನೆ ಮೊಲೆಗಳ ಮೇಲಿನ ಸೆರಗನೆಳೆಯಲು ಕೊ- ರಳ ಪದಕಂಗಳು ಧ್ವನಿಗೆಯ್ಯುವುವೊ ರಂಗ ||೧|| ನಿರುಗೆಯ ಪಿಡಿಯದಿರೊ , ಕಾಂಚಿಯ ದಾಮ ಕಿರುಗಂಟೆ ಧ್ವನಿಗೆಯ್ಯದೆ ಕಿರುದುಟಿಗಳ ನೀನು ಸವಿದು ಚಪ್ಪರಿಸಲು ತರವಲ್ಲ ಗಂಡ ಮತ್ಸರವ ತಾಳುವನಲ್ಲ ||೨|| ನಾಡಮಾತುಗಳೇತಕೊ-ಸಂಗೀತವ ಪಾಡುವ ಸಮಯವೇನೊ ಗಾಡಿಕಾರ ಶ್ರೀರಂಗವಿಠಲನೆ ಪಾಡುಪಂಥಗಳೊಡಗೂಡುವ ಸಮಯದಿ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ವ್ಯರ್ಥವಲ್ಲವೆ ಜನ್ಮ ವ್ಯರ್ಥವಲ್ಲವೆ

(ರಾಗ ಧನ್ಯಾಸಿ , ರೂಪಕ ತಾಳ) ವ್ಯರ್ಥವಲ್ಲವೆ ಜನ್ಮ ವ್ಯರ್ಥವಲ್ಲವೆ ||ಪ|| ತೀರ್ಥಪಾದರ ಭಜಿಸಿ ಕೃತಾರ್ಥನಾಗದವನ ಜನ್ಮ ||ಅ.ಪ|| ಅರುಣ ಉದಯದಲ್ಲಿ ಎದ್ದು ಸರಿತದಲಿ ಸ್ನಾನವ ಮಾಡಿ ಅರಳುಮಲ್ಲಿಗೆ ಮಾಲೆ ಹರಿಯ ಚರಣಕರ್ಪಿಸದವನ ಜನ್ಮ ||೧|| ಒಂದು ಶಂಖ ಉದಕ ತಂದು ಚಂದದಿಂದ ಹರಿಗೆ ಎರೆದು ಗಂಧ ಪುಷ್ಪದಿಂದ ಹರಿಯ ವಂದನೆ ಮಾಡದವನ ಜನ್ಮ ||೨|| ಮುಗುಳು ತೆನೆಯಲೆಸೆವ ತುಳಸಿದಳವ ತಂದು ಪ್ರೇಮದಿಂದ ಜಗನ್ಮಯಗೆ ಅರ್ಪಿಸಿ ಕರವ ಮುಗಿದು ಸ್ತುತಿಸದವನ ಜನ್ಮ ||೩|| ಭೋಗಿಶಯನನ ದಿನದಿ ಸಕಲ ಭೋಗಗಳನು ತಾನು ತೊರೆದು ಭಾಗವತರ ಮ್ಯಾಳದಿಂದ ಜಾಗರಣೆ ಮಾಡದವನ ಜನ್ಮ ||೪|| ಜಂಗಮರೊಳಗಧಿಕವನಿಪ ಭಂಗುರ ಮನುಷ್ಯದೇಹ ಪಡೆದು ರಂಗವಿಠಲನೆನಿಪ ಪಶ್ಚಿಮರಂಗಗರ್ಪಿಸದವನ ಜನ್ಮ ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು

ವಿಧಿಗೆ ದಯವಿಲ್ಲವಕ್ಕ ಎಮ್ಮ ಮ್ಯಾಲೆ

(ತೋಡಿ ರಾಗ ಛಾಪುತಾಳ) ವಿಧಿಗೆ ದಯವಿಲ್ಲವಕ್ಕ ಎಮ್ಮ ಮ್ಯಾಲೆ ||ಪ|| ಯದುಪತಿಯನಗಲಿಸಿದ ಒಮ್ಮಿಂದಲೊಮ್ಮೆ ||ಅ.ಪ|| ಎವೆಯ ಮರೆಯ ಮಾಡಿ ಪೋದ ಯಾಕೋ ವಿಧಿಯೇ ಸುಳಿಗುರುಳು ಕಡೆಗಣ್ಣ ನೋಟದಿಂದಲಿ ಕವಕವಿಸಿ ನಗುವ ಮುದ್ದು ಮುಖವನು ತವಕದಿಂದಲಿ ಮರಳಿ ಮರಳಿ ನೋಡಿದ್ಹೋದೆವೆ ||೧|| ಹಕ್ಕಿಯ ಮ್ಯಾಲುಳ್ಳ ದಯ ನಮ್ಮ ಮ್ಯಾಲೆ ಇಕ್ಕದೇಕೆ ಹೋದ್ಯೋ ವಿಧಿಯೇ ರೆಕ್ಕೆ ಎರಡುಳ್ಳರೆ ಮಧುರೆಗೆ ಪೋಗಿ ಘಕ್ಕನೆ ಶ್ರೀ ಹರಿಯೊಡನೆ ಕೂಡುತಿದ್ದೆವಲ್ಲ ||೨|| ತಂಗೀ ನಮ್ಮೆದೆಯು ಕಲ್ಲಾಗಿ ಇದ್ದೇವೆ ಹಿಂಗುವರೆ ಸಖಿಯರು ಒಮ್ಮಿಂದಲೊಮ್ಮೆ ರಂಗವಿಠಲನ್ನ ಅಂಗಸಂಗವ ಬಿಟ್ಟು ಇಂಥ ಭಂಗಜೀವ ಸುಡಸುಡಲ್ಯಾತಕೋ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ವಂದನೆ ಮಾಡಿರೈ ಯತಿಕುಲಚಂದ್ರನ ಪಾಡಿರೈ

(ಭೈರವಿ ರಾಗ ರೂಪಕ ತಾಳ) ವಂದನೆ ಮಾಡಿರೈ ಯತಿಕುಲಚಂದ್ರನ ಪಾಡಿರೈ ||ಪ|| ಬಂದ ದುರಿತಗಳ ಕಳೆದು ಆ- ನಂದಪಡುವ ವಿಭುದೇಂದ್ರ ಕರೋದ್ಭವರ ||ಅ.ಪ|| ರಘುಕುಲ ವರಪುತ್ರ ರಾಮನ ಚರಣ ಕರುಣಾಪಾತ್ರ ನಿಗಮೋಕ್ತಿಯ ಸೂತ್ರಫಾರ ಪ್ರವಚನರತ ಸುಗುಣಜಿತಾಮಿತ್ರ ನಗಧರ ಶ್ರೀ ಪನ್ನಗಶಯನನ ಗುಣ ಪೊಗಳುವ ಅಪಾರ ಅಗಣಿತ ಮಹಿಮರ ||೧|| ವರಮಹಾತ್ಮೆ ತಿಳಿಸಿ ಮೊದಲಿಂ ಧರೆ ಆನಂದದಿ ಚರಿಸಿ ನಿರುತ ಮನವ ನಿಲಿಸಿ ಶ್ರೀಹರಿ ಕರಿವರದನ ಒಲಿಸಿ ಧರೆಜನರಿಗೆ ಅರಿಯದೆ ಮರೆಯಾಗುತ ಹರುಷದಿ ಗೋನದತರುವಲ್ಲಿರುವವರ ||೨|| ಮುದದಿ ಕೃಷ್ಣಾತಟಿಯ ಮಧ್ಯದಿ ಸದನದ ಪರಿಯ ಸದಮಲ ಯತಿವರ್ಯ ತಪಮೌನದಲಿದ್ದುದನರಿಯ ಒದಗಿ ನದಿಯು ಸೂಸುತ ಬರಲೇಳುದಿನ ಕುದಯಾದವರ ಸುಪದಕಮಲಂಗಳ ||೩|| ಮಾಸಮಾರ್ಗಶೀರ್ಷಾರಾಧನೆಗಶೇಷ ದಿನ ಅಮಾ-
ದಾಸ ಸಾಹಿತ್ಯ ಪ್ರಕಾರ
ಬರೆದವರು

ರಂಗಾ ಮನೆಗೆ ಬಾರೊ ಕೃಪಾಂಗ

(ಗುರ್ಜರ ರಾಗ ಆದಿತಾಳ) ರಂಗಾ ಮನೆಗೆ ಬಾರೊ ಕೃಪಾಂಗ ಶ್ರೀರಂಗ ||ಪ|| ರಂಗ ಕಲುಷವಿಭಂಗ ಗರುಡ ತು- ರಂಗ ನವಮೋಹನಾಂಗ ಶ್ರೀರಂಗ ||ಅ.ಪ|| ಪಚ್ಚೆ ಬಾವುಲಿಗಳನು ನಿನ್ನ ಕಿವಿಯೊಳಗಿಟ್ಟು ಮೆಚ್ಚಿ ಮುದ್ದಾಡುವೆನು ಹೆಚ್ಚಿದ ವಾಲಿಯನು ಬಾಣದಿ ಚುಚ್ಚಿದ ಸಪ್ತ ತಾಳಂಗಳನು ಬಿಚ್ಚಿದ ಸಮುದ್ರವ ಸುತ್ತ ಮುಚ್ಚಿದ ಎಚ್ಚರಿಕೆಯಲಿ ಲಂಕೆಯನು ಪೊಕ್ಕು ಕಿಚ್ಚುಗಳ ಹಚ್ಚಿಸಿದ ಹನುಮನ ಮೆಚ್ಚಿದ, ಖರದೂಷಣರ ಶಿರಗಳ ಕೊಚ್ಚಿದ ಅಚ್ಯುತಾನಂತ ||೧|| ಮುತ್ತಿನ ಹಾರವನು ಕಂಠದೊಳಿಟ್ಟು ಎತ್ತಿ ಮುದ್ದಾಡುವೆನು ಹತ್ತಿದ ರಥವನು ಮುಂದೊತ್ತಿದ ಕೌರವರ ಸೇನೆಗೆ ಮುತ್ತಿದ
ದಾಸ ಸಾಹಿತ್ಯ ಪ್ರಕಾರ
ಬರೆದವರು

ರಂಗನಾಥನ ನೋಡುವ ಬನ್ನಿ

(ನಾಟಿ ರಾಗ ಛಾಪುತಾಳ) ರಂಗನಾಥನ ನೋಡುವ ಬನ್ನಿ ಶ್ರೀ- ||ಪ|| ರಂಗನ ದಿವ್ಯ ವಿಮಾನದಲ್ಲಿಹನ ||ಅ.ಪ|| ಕಮನೀಯಗಾತ್ರನ ಕರುಣಾಂತರಂಗನ ಕಾಮಿತಾರ್ಥವೀವ ಕಲ್ಪವೃಕ್ಷನ ಕಮಲದಳ ನೇತ್ರನ ಕಸ್ತೂರಿರಂಗನ ಕಾಮಧೇನು ಕಾವೇರಿರಂಗನ ||೧|| ವಾಸುಕಿಶಯನನ ವಾರಿಧಿನಿಲಯನ ವಾಸುದೇವ ವಾರಿಜನಾಭನ ವಾಸವಾದಿ ಭಕ್ತ ಹೃದಯಾಂಬುಜದಲ್ಲಿ ವಾಸವಾಗಿರುತಿಹ ವಸುದೇವಸುತನ ||೨|| ಮಂಗಳಗಾತ್ರನ ಮಂಜುಳಭಾಷನ ಗಂಗಾಜನ ಅಜಜನಕನ ಸಂಗೀತಲೋಲನ ಸಾಧುಸಮ್ಮತನ ರಂಗವಿಠಲ ರಾಜೀವನೇತ್ರನ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಯಾಕೆ ಇಂಥ ದುಡುಕು ಕೃಷ್ಣಯ್ಯ

(ವರಾಳಿ ರಾಗ ಆದಿತಾಳ) ಯಾಕೆ ಇಂಥ ದುಡುಕು ಕೃಷ್ಣಯ್ಯ ನಿನ- ಗೇಕೆ ಇಂಥ ದುಡುಕು ಪಾಕಶಾಸನ ವಂದ್ಯ ಪೋಕತನಗಳಿನ್ನು ಸಾಕುಸಾಕಯ್ಯ ಕೃಷ್ಣ ||ಪ|| ಗೊಲ್ಲ ಬಾಲಕರು ನೀವೆಲ್ಲರು ಕೂಡಿಕೊಂಡು ಗುಲ್ಲು ಮಾಡದೆ ಮೊಸರೆಲ್ಲ ಸವಿದೆಯಂತೆ ಕೃಷ್ಣ ||೧|| ಪೂತನಿ ಮೊಲೆಯನ್ನು ಭೀತಿಯಿಲ್ಲದೆ ಉಂಡು ಘಾತವ ಮಾಡಿದೆ ಮಾತನಾಡಯ್ಯ ಕೃಷ್ಣ ||೨|| ದುಷ್ಟ ಕಂಸನ ನೀನು ಕಷ್ಟವಿಲ್ಲದೆ ಮಡುಹಿ ಮುಷ್ಟಿಕನ ಕೊಂದೆ ದೃಷ್ಟಿ ತಾಕೀತೆಂದು ||೩|| ನಿರ್ಜನ ಸ್ಥಳದಿ ಯಮಳಾರ್ಜುನರನ್ನು ಮಡುಹಿ ದುರ್ಜನರ ಕೊಂದೆ ಅರ್ಜುನ ಸಾರಥಿ ||೪|| ಅಂಗಿ ಟೊಪ್ಪಿಗೆ ಉಂಗುರ ಉಡಿದಾರ ಶೃಂಗರಿಸಿಕೊಂಡು ರಂಗವಿಠಲ ಬಾರೋ ||೫|||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮಾಯ ಮತ ಒಳಿತಲ್ಲ ನಿನಗೆ

(ಪಾಡಿ ರಾಗ ಆದಿತಾಳ) ಮಾಯ ಮತ ಒಳಿತಲ್ಲ ನಿನಗೆ ನಾಯಿ ಜನ್ಮ ಬಾರದೆ ಬಿಡದಲ್ಲ ||ಪ|| ಜಗಕೆ ಕಾರಣ ದೇವ ತಾನಿರಲು ಬೊಗಳಿಕೊಂಬೆ ಭೇದವಿಲ್ಲೆಂದು ತೆಗೆವನು ಯಮ ಬೆನ್ನ ಚರ್ಮ ಇದು ನಗೆಯಲ್ಲ ಕೇಳೊ ತಿಳಿಯೊ ದುಷ್ಕರ್ಮ ||೧|| ಭೇದವಿಲ್ಲೆಂದು ತಿಳಿದು ನೀ ಮಾದಿಗರ ಮನೆಯಲ್ಲಿ ಉಣಲೊಲ್ಲೆ ಯಾಕೊ ಸಾಧಿಸಿ ನೋಡಲು ನಿನಗೆ ಇಷ್ಟು ಬದುಕುಂಟಾದರು ಉಸುರಲಿನ್ಯಾಕೊ ||೨|| ಅಕ್ಕತಂಗಿಯರಿರಲು ನೀನು ರೊಕ್ಕವಿಕ್ಕಿ ಮದುವೆ ಆಗುದ್ಯಾಕೊ ಚಿಕ್ಕ ತಂಗಿ ತಾಯಿ ಮೊದಲು ನಿನ್ನ ಲೆಕ್ಕದಲಿ ನೋಡಲು ಒಂದಲ್ಲವೇನೋ ||೩|| ಶಂಕರಮತಕೆ ನೀ ಹೊಂದಿ ಪಂಕದೊಳು ಬೀಳಬೇಕಲ್ಲೊ ಸಂಕಟಗೊಳಗಾದಿಯಲ್ಲ ನಿನ್ನ ಬಿಂಕವ ಮುರಿವರು ಯಮನವರಲ್ಲೊ ||೪|| ಇನ್ನಾದರು ಭೇದಮತವನು ನೀನು ಚೆನ್ನಾಗಿ ತಿಳಿಯೊ ರಂಗವಿಠಲನು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮರುದಂಶರ ಮತ ಪಿಡಿಯದೆ

(ನಾದನಾಮ ಕ್ರಿಯೆ ರಾಗ ಅಟ್ಟತಾಳ) ಮರುದಂಶರ ಮತ ಪಿಡಿಯದೆ ಇಹ- ಪರದಲ್ಲಿ ಸುಖವಿಲ್ಲವಂತೆ ||ಪ|| ಅರಿತು ವಿವೇಕದಿ ಮರೆಯದೆ ನಮ್ಮ ಗುರುರಾಯರ ನಂಬಿ ಬದುಕಿರೋ ||ಅ.ಪ|| ಕ್ಷೀರವ ಕರೆದಿಟ್ಟ ಮಾತ್ರದಿ ಸಂ- ಸ್ಕಾರವಿಲ್ಲದೆ ಘೃತವಾಗದಂತೆ ಸೂರಿಜನರ ಸಂಗವಿಲ್ಲದೆ ಸಾರ ವೈರಾಗ್ಯ ಭಾಗ್ಯ ಪುಟ್ಟದಂತೆ ||೧|| ಉಪದೇಶವಿಲ್ಲದ ಮಂತ್ರ ಏಸು ಜಪಿಸಲು ಫಲಗಳ ಕೊಡದಂತೆ ಉಪವಾಸ ವ್ರತಗಳಿಲ್ಲದೆ ಜೀವ ತಪಸಿಯೆನಿಸಿಕೊಳ್ಳಲರಿನಯದಂತೆ ||೨|| ಸಾರ ಮಧ್ವಶಾಸ್ತ್ರವೋದದೆ ಗುರು ತಾರತಮ್ಯ ಜ್ಞಾನ ಪುಟ್ಟದಂತೆ ಶ್ರೀ ರಂಗವಿಠಲನ ಭಜಿಸದೆ ಮುಂದೆ ಪರಮಗತಿ ದೊರಕೊಳ್ಳದಂತೆ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು