ರಂಗಾ ಮನೆಗೆ ಬಾರೊ ಕೃಪಾಂಗ

ರಂಗಾ ಮನೆಗೆ ಬಾರೊ ಕೃಪಾಂಗ

(ಗುರ್ಜರ ರಾಗ ಆದಿತಾಳ) ರಂಗಾ ಮನೆಗೆ ಬಾರೊ ಕೃಪಾಂಗ ಶ್ರೀರಂಗ ||ಪ|| ರಂಗ ಕಲುಷವಿಭಂಗ ಗರುಡ ತು- ರಂಗ ನವಮೋಹನಾಂಗ ಶ್ರೀರಂಗ ||ಅ.ಪ|| ಪಚ್ಚೆ ಬಾವುಲಿಗಳನು ನಿನ್ನ ಕಿವಿಯೊಳಗಿಟ್ಟು ಮೆಚ್ಚಿ ಮುದ್ದಾಡುವೆನು ಹೆಚ್ಚಿದ ವಾಲಿಯನು ಬಾಣದಿ ಚುಚ್ಚಿದ ಸಪ್ತ ತಾಳಂಗಳನು ಬಿಚ್ಚಿದ ಸಮುದ್ರವ ಸುತ್ತ ಮುಚ್ಚಿದ ಎಚ್ಚರಿಕೆಯಲಿ ಲಂಕೆಯನು ಪೊಕ್ಕು ಕಿಚ್ಚುಗಳ ಹಚ್ಚಿಸಿದ ಹನುಮನ ಮೆಚ್ಚಿದ, ಖರದೂಷಣರ ಶಿರಗಳ ಕೊಚ್ಚಿದ ಅಚ್ಯುತಾನಂತ ||೧|| ಮುತ್ತಿನ ಹಾರವನು ಕಂಠದೊಳಿಟ್ಟು ಎತ್ತಿ ಮುದ್ದಾಡುವೆನು ಹತ್ತಿದ ರಥವನು ಮುಂದೊತ್ತಿದ ಕೌರವರ ಸೇನೆಗೆ ಮುತ್ತಿದ ಉಭಯರಿಗೆ ಜಗಳವ ಬಿತ್ತಿದ ಮತ್ತ ಮಾತಂಗಗಲನೆಲ್ಲ ಒತ್ತರಿಸಿ ಮುಂದೊತ್ತಿ ನಡೆಯುತ ಇತ್ತರದಿ ನಿಂತ ವರರಥಿಕರ ಕತ್ತರಿಸಿ ಕಾಳಗವ ಮಾಡಿದ ||೨|| ಉಂಗುರಗಳನು ನಿನ್ನ ಅಂಗುಳಿಗಿಟ್ಟು ಕಂಗಳಿಂದಲಿ ನೋಡುವೆ ಹೆಂಗಳ ಉತ್ತುಂಗದ ಕುಚಂಗಳ ಆಲಂಗಿಸಿದ ಭುಜಂಗಳ ಕಮಲಸಮ ಪಾದಂಗಳ ಹಿಂಗದೆ ಸ್ಮರಿಸಿದ ಮಾತಂಗನ ಭಂಗವ ಪರಿಹರಿಸಿ ಬ್ಯಾಗದಿ ಮಂಗಳ ಸ್ವರ್ಗವನಿತ್ತ ಉ- ತ್ತುಂಗ ವಿಕ್ರಮ ರಂಗವಿಠಲನೆ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು