ಮರುದಂಶರ ಮತ ಪಿಡಿಯದೆ

ಮರುದಂಶರ ಮತ ಪಿಡಿಯದೆ

(ನಾದನಾಮ ಕ್ರಿಯೆ ರಾಗ ಅಟ್ಟತಾಳ) ಮರುದಂಶರ ಮತ ಪಿಡಿಯದೆ ಇಹ- ಪರದಲ್ಲಿ ಸುಖವಿಲ್ಲವಂತೆ ||ಪ|| ಅರಿತು ವಿವೇಕದಿ ಮರೆಯದೆ ನಮ್ಮ ಗುರುರಾಯರ ನಂಬಿ ಬದುಕಿರೋ ||ಅ.ಪ|| ಕ್ಷೀರವ ಕರೆದಿಟ್ಟ ಮಾತ್ರದಿ ಸಂ- ಸ್ಕಾರವಿಲ್ಲದೆ ಘೃತವಾಗದಂತೆ ಸೂರಿಜನರ ಸಂಗವಿಲ್ಲದೆ ಸಾರ ವೈರಾಗ್ಯ ಭಾಗ್ಯ ಪುಟ್ಟದಂತೆ ||೧|| ಉಪದೇಶವಿಲ್ಲದ ಮಂತ್ರ ಏಸು ಜಪಿಸಲು ಫಲಗಳ ಕೊಡದಂತೆ ಉಪವಾಸ ವ್ರತಗಳಿಲ್ಲದೆ ಜೀವ ತಪಸಿಯೆನಿಸಿಕೊಳ್ಳಲರಿನಯದಂತೆ ||೨|| ಸಾರ ಮಧ್ವಶಾಸ್ತ್ರವೋದದೆ ಗುರು ತಾರತಮ್ಯ ಜ್ಞಾನ ಪುಟ್ಟದಂತೆ ಶ್ರೀ ರಂಗವಿಠಲನ ಭಜಿಸದೆ ಮುಂದೆ ಪರಮಗತಿ ದೊರಕೊಳ್ಳದಂತೆ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು