ನಳಿನಜಾಂಡ ತಲೆಯ ತೂಗಿ

ನಳಿನಜಾಂಡ ತಲೆಯ ತೂಗಿ

(ರಾಗ ಶಂಕರಾಭರಣ ಅಟತಾಳ ) ನಳಿನಜಾಂಡ ತಲೆಯ ತೂಗಿ ಮೋಹಿಸುತಿರಲು ಕೊಳಲನೂದಿ ಭ್ರಾಜಿಸುವ ಚೆಲುವ ಕೃಷ್ಣರಾಯನ ನೋಡಿ ||ಪ|| ಹೊಳೆವ ಹೊಂಬಣ್ಣ ದಟ್ಟಿ ಚಲ್ಲಣ ಅಳವಡಿಸಿದ ನೀಲಿಯ ಬಿಗಿದು ಹಲವು ರನ್ನದ ಉಂಗುರನಿಟ್ಟು ಚೆಲುವ ಬೆರಳ ನಟಿಸುತ ಲಲಿತ ವಾಮತೋಳಿನ ಮೇಲೆ ಹೊಳೆವ ವಾರೆ ದೃಷ್ಟಿಯೆಸೆಯೆ ಬಲದ ಪಾದ ಎಡಕೆ ಚಾಚಿರೆ ಜಲಜದಂದದಿ ಹೊಳೆಯಲು ನೋಡಿ || ಗುಲಗುಂಜಿಸರ ಕಲ್ಲಿಯ ಚಿಕ್ಕ ಗಜಗಿನ ಚೀಲ ಶಳೆಗೋಲಾಮಚಿ ಘಲ್ಲುಕೆಂಬಾ ಪೆಂಡೆ ಘಮ್ಮಘಮ್ಮಿಸುವ ಮಲಯಜಾಮಿತ ಲೇಪಿತ ಮಲ್ಲಿಗೆ ಮಾಲತಿ ಬಳ್ಳಿಯ ದಳಿಲು ಹಲವು ಸರಗಳೊಲಿವುತಿರಲು ತಳಿತ ಕಲ್ಪವೃಕ್ಷದ ನೆಳಲೊಳು ಗೆಳೆಯ ಗೋಪರಿಂದಾಡಲು || ಮಾರವ ದೇಶಿ ಗುರ್ಜರಿ ಭೈರವಿ ಗೌಳಿ ನಾಟಿ ಸಾವೇರಿ ಆಹೇರಿ ಪೂರ್ವಿ ಕಾಂಭೋಜ ಪಾಡಿ ದೇಶಾಕ್ಷಿ ಶಂಕರಾಭರಣ ಮಾಳವಿ ವರಾಳಿ ಕಲ್ಯಾಣಿ ತೋಡಿ ಮುಖಾರಿ ಯರಳಿ ವಸಂತ ಬೌಳಿ ಧನಶ್ರೀ ಸೌರಾಷ್ಟ್ರ ಗುಂಡಕ್ರಿಯ ರಾಮಕ್ರಿಯ ಮೇಘ ಕುರಂಜಿಯು ಪಾಡಲು ನೋಡಿ || ಹರುಷದಿಂದ ವನದಿ ಸುವಾರವ ಪುರದ ಸತಿಯರೆಲ್ಲರು ಕೇಳಿ ಮರೆತು ಮನೆಯ, ಮಕ್ಕಳ ಜರೆದು , ನೆರೆದು ಹರಿಯ ಒಲಿಸುತ ಹರಿಣ ಕರಿಯು ಕೇಸರಿವೃಂದ ತುರಗ ಮಹಿಷ ಉರಗ ಮೂಷಕ ಹರಿಯ ಕೊಳಲ ರವಕೆ ಮೋಹಿಸಿ ಮರೆತಿರೆ ಜಾತಿವೈರವ || ಕರಗಿ ಕಲ್ಲು ನೀರಾಗಿ ಹರಿಯೆ ತೆರೆಗಳಿಂದುಕ್ಕಿ ಹರಿಯೆ ಯಮುನೆ ತುರು ಖಗ ಬರ್ಹಿ ಸ್ತ್ರೀಯರು ಚಿತ್ರದಿ ಬರೆದ ಪ್ರತಿಮೆಯಂತಿರೆ ಸುರರು ನಭದಿ ನೋಡಿ ಕುಸುಮಗರೆಯೆ ಭೇರಿ ದುಂದುಭಿ ಮೊರೆಯೆ ಪುರಂದರವಿಠಲಗೋಕುಲದಿ ವೇಣುನಾದ ಮಾಡಲು ನೋಡಿ ||
ದಾಸ ಸಾಹಿತ್ಯ ಪ್ರಕಾರ
ಬರೆದವರು