ಗೋಕುಲದೊಳಗೋರ್ವ ರಾಕೇಂದುಮುಖಿ
( ರಾಗ ಸೌರಾಷ್ಟ್ರ ಅಟತಾಳ)
ಗೋಕುಲದೊಳಗೋರ್ವ ರಾಕೇಂದುಮುಖಿ ತಾನು, ಜೋಕೆಲಿ ಕೊಡನ ಪೊತ್ತು
ಬೇಕಾದವರಿಗೆ ನಾ ಕೊಡುವೆನು ಹಾಲು, ಆಕೆ ಸಾರುತ ಬಂದಳು ||೧||
ಕಣ್ಣಡಿಕದಪಿನ ಎಣ್ಣೆಗೆಂಪಿನ ಜಾಣೆ, ಕಣ್ಣಿಗೆ ಕಪ್ಪನ್ಹಚ್ಚಿ
ಚಿನ್ನಾಬಣ್ಣವನಿಟ್ಟು ಬಿನ್ನಬಿಳಿದನುಟ್ಟು, ಬೆಣ್ಣೆ ಮಾರುತ ಬಂದಳು ||೨||
ನು(ಅ?)ಡಿ ಗಿಳಿ ಸುಳಿ ಪಲ್ಲು ನಡೆ ಹಂಸಗಮನದಿ, ಬೆಡಗಿನಿಂದಡಿಯಿಡುತ
ಸಡಗರದಿಂದಲಿ ನಡುಬೀದಿಯೊಳಗೆಲ್ಲ, ಮಡದಿ ಸಾರುತ ಬಂದಳು ||೩||
ಪನ್ನಗಶಯನನು ಸಣ್ಣ ನಾಮವನಿಟ್ಟು, ರನ್ನದ ಕೊಳಲ ಪಿಡಿದು
ಕನ್ನೆ ಹೆಣ್ಣುಗಳ ಕೈ ಸನ್ನೆಯ ಮಾಡುತ, ಚೆನ್ನಕೇಶವ ಬಂದನು ||೪||
ಪಟ್ಟಣದೊಳು ನಿನ್ನ ಬಿಟ್ಟವನ್ಯಾರೆಲೆ, ಕೊಟ್ಟು ಪೋಗೆಲೆ ಸುಂಕವ
ಸಿಟ್ಟು ಬಂದರೆ ನಿನ್ನ ಬಟ್ಟ ಕುಚದ ಮೇಲೆ, ಪೆಟ್ಟು ಹಾಕುವೆನೆಂದನು ||೫||
ಪೆಟ್ಟು ಹಾಕುವುದಕ್ಕೆ ಬಿಟ್ಟಿಗೆ ಬಿದ್ದಿಲ್ಲ, ಇಷ್ಟು ಮಾತುಗಳೇತಕೋ
ಪಟ್ಟದರಸಿಗ್ಹೇಳಿ ಕಟ್ಟಿಸುವೆನು ಕೈಯ, ಗುಟ್ಟಿಲಿ ಸುಮ್ಮನಿರು ||೬||
ತಡೆಯದೆ ಕೊಡು ಬೇಗ ಬಿಡುವವ ನಾನಲ್ಲ, ಕುಡುತೆ ಕಣ್ಣವಳೆ ಕೇಳೆ
ಬಡನಡುವಿನೊಳುಟ್ಟ ಉಡುಗೆಯ ಸೆಳೆದು ನಿ-ನ್ನೊಡ ಗೂಡಿ ಬಿಡುವೆನೆಂದ ||೭||
ಕಾಯಾತುರದೊಳು ಆಯಾಸಗೊಳಿಸದೆ, ಗಾಯಕತನವೇತಕೋ
ಛಾಯಮಾಯವ ತಾಳಿ ಅಯಾಸಕೊಳಗಾಗಿ, ನೋಯದೆ ತೊಲಗೊ ನೀನು ||೮||
ತೊಲಗುವ ನಾನಲ್ಲ ಚೆಲುವ ಚಂದನಗಂಧಿ, ಲಲನೆ ಒಲಿದು ಬಂದಎನೆ
ಹಲವು ಹಂಬಲಿಸದೆ ಬಳಿಯೆ ಕುಳ್ಳಿರು ಎಂದು, ಸೆಳೆದು ಸೆರಗ ಪಿಡಿದ ||೯||
ದುಡುಕಿನಲಿ ಎನ್ನ ಪಿಡಿದು ನಿಲ್ಲಿಸಲಿಕ್ಕೆ, ಒಡೆಯನುಳ್ಳವಳು ನಾನು
ಕಡುಕೋಪವೇತಕೆ ಪಿಡಿವುದೆನ್ನನು ಕೈಯ, ಬಿಡು ಭಾವ ಎನುತಿದ್ದಳು ||೧೦||
ಭಾವ ಎಂತೆಂದಿಹ ವಾವೆ ಅರಿಯದ ಹೆಣ್ಣೆ, ಕಾವರು ಎಷ್ಟೆ ನಿನಗೆ
ಮಾವ ಕಂಸನ ಕೊಂದ ಕೋವಿದರರಸನು, ಜೀವದೊಲ್ಲಭ ನಿನಗೆ ||೧೧||
ಹೊಂದಿಕೆ ಮಾತಾಡಿ ಬಂದು ನೀ ನಿಲ್ಲದೆ, ಕಂದಯ್ಯ ಸೆರಗ ಬಿಡೊ
ಮಂದರಧರ ಗೋವಿಂದ ಮಾಧವ ನಿನ್ನ, ಕಂದನ ತಂದೆ ಕಾಣೆ ||೧೨||
ಒಪ್ಪದೊಂದೂರೊಳು ತುಪ್ಪ ಮಾರುತ ಬಂದೆ, ಅಪ್ಪಯ್ಯ ಸೆರಗ ಬಿಡೊ
ಪುಷ್ಪಶರನ ಕಂದರ್ಪಜನಕ ನಿನ್ನ, ಅಪ್ಪನ ಅಳಿಯ ಕಾಣೆ ||೧೩||
ಬಿನ್ನಾಣ ಮಾತಾಡಿ ಕಣ್ಣ ಮೀಟುತಲಿಪ್ಪ, ಅಣ್ಣಯ್ಯ ಸೆರಗ ಬಿಡೊ
ಹುಣ್ಣಿಮೆ ಚಂದ್ರನ ಪೋಲ್ವ ಪುಣ್ಯಸ್ತ್ರೀ ನಿ-ನ್ನಣ್ಣನ ಭಾವ ಕಾಣೆ ||೧೪||
ಎಷ್ಟು ಹೇಳಿದರು ನೀ ಬಿಟ್ಟು ಹೋಗುವನಲ್ಲ, ಇಷ್ಟು ಮಾತುಗಳೇತಕೋ
ಭ್ರಷ್ಟತನದಿಂದ ದುಷ್ಟ ಬುದ್ಧಿಯ ಮಾಳ್ಪೆ, ದಿಟ್ಟ ನೀನ್ಯಾರು ಪೇಳೊ ||೧೫ ||
ಗಾದೆಯ ಮಾತಲ್ಲ ಆದಿ ಬ್ರಹ್ಮನ ಕೈಯ, ವೇದವನೊಯ್ದವನ
ಮೇದಿನಿ ಪಿಡಿದು ಛೇದಿಸಿ ವೇದವ ತಂದ, ಆದಿಮತ್ಸ್ಯವತಾರನೆ ||೧೬||
ಬಡಿವಾರ ಹೇಳಿ ನೀ ಬೆಡಗಿ ನೀರೊಳು ಮುಳುಗಿ, ಅಡಗಿಕೊಂಡಿಹುದೇತಕೋ
ಕಡಲ ಕಡೆದು ಮಹಾಗಿರಿಯ ಬೆನ್ನಲಿ ಪೊತ್ತು, ಅಡರಿ ಎತ್ತಿದ ಕೂರ್ಮನೆ ||೧೭||
ಮೋರೆಯ ಬಗ್ಗಿಸಿ ದಾರಿಯ ನಡೆವಾಗ, ಕೂರಿಕೊಂಡಿಹುದೇತಕೋ
ಘೋರ ರಾಕ್ಷಸರ ಸಂಹಾರ ಮಾಡಿದ ಮಹಾ-ಧೀರ ವರಾಹವತಾರನೆ ||೧೮||
ಹಿರಿದು ಕೂಗುತ ರಕ್ತ ಸುರಿದು ನಾಲಿಗೆ ಬಾಯ, ತೆರೆದುಕೊಂಡಿಹುದೇತಕೋ
ತರಳನಿಗೊಲಿದು ಹಿರಣ್ಯನ ಸೀಳಿದ, ನರಸಿಂಹ ಅವತಾರನೆ ||೧೯||
ಬಲು ದರಿದ್ರನೆಂದು ಚೆಲುವ ಬ್ರಾಹ್ಮಣನಾಗಿ, ಇಳೆಯ ದಾನವ ಬೇಡಲು
ಬಲಿ ಚಕ್ರವರ್ತಿಯ ಛಲದಿ ಪಾತಾಳಕೆ, ತುಳಿದ ವಾಮನವತಾರನೆ ||೨೦||
ಕರದಿಂದ ಕೊಡಲಿಯ ಪಿಡಿದುಕೊಂಡಿಹ ನೀನು, ಯಾರು ಪೇಳೆಲೊ ಎನಗೆ
ಧುರದೆ ಕ್ಷತ್ರಿಯರ ಶಿರವ ತರಿದು ಕೊಂದ, ಶೂರ ಭಾರ್ಗವವತಾರನೆ ||೨೧||
ದಶರಥರಾಯನ ಸುತನಾಗಿ ವನವಾಸ, ಜಿತದಿ ನೀ ತಿರುಗಲೇಕೋ
ದಶಶಿರದ ರಾವಣನ ಶಿರವ ತರಿದು ಕೊಂದ, ಸೀತಾಪತಿ ರಾಮನೆ ||೨೨||
ಭೂಗೋಲಸಮರೂಪ ನಾಗವೇಣಿಯರ ಅನು-ರಾಗದಿಂ ಸೆಳೆವೆ ಪೇಳೊ
ಸೋಗೆಗಂಗಳೆ ಕೇಳೆ ಬೇಗ ಅಸುರರ ಗೆಲಿದು, ಛೇದಿಸಿದ ಶ್ರೀ ಕೃಷ್ಣನೆ ||೨೩||
ಪಟ್ಟೆ ಪೀತಾಂಬರ ಉಟ್ಟುಕೊಳ್ಳದೆ ನೀನು, ಬತ್ತಲೆ ತಿರುಗಲೇತಕೋ
ಶ್ರೇಷ್ಠ ತ್ರಿಪುರ ಸ್ತ್ರೀಯರ ವ್ರತವ ಕೆಡಿಸಿದ, ಚೆಲುವ ಬುದ್ಧವತಾರನೆ ||೨೪||
ಹರಿಯು ರಾವುತನೆಂದು ತುರಗವೇರಿ ಹೊಟ್ಟೆ, ಹೊರೆದು ಕೊಂದಿಹುದೇತಕೋ
ಸರಿಯಿಲ್ಲ ನಮಗಾರು ತರುಣಿ ಕೇಳೆಲೆ ನಾನು, ಧೀರ ಕಲ್ಕ್ಯಾವತಾರನೆ ||೨೫||
ಹತ್ತವತಾರದ ವಿಸ್ತಾರ ಪೇಳಿದ, ಮತ್ತೆ ನಾನಾರು ಕೇಳೆ
ಕತ್ತಲೆ ಕವಿದಂತೆ ಎತ್ತ ತಿಳಿಯಲಿಲ್ಲ, ಸ್ವಚ್ಛದಿ ತಿಳಿಯಪೇಳೋ ||೨೬||
ಗೋಪಿಯ ತನಯನೆ ರಾಪು ಮಾಡಲು ಬೇಡ, ಗೋಪ್ಯದಿ ಸುಮ್ಮನಿರು
ಭಾಪುರೆ ಗೋವರ್ಧನ ಗಿರಿಯನೆತ್ತಿದ, ಗೋಪಾಲಕೃಷ್ಣ ಕಾಣೆ ||೨೭||
ಹೃದಯದಿ ತಲ್ಲಣಿಸಿ ಗಡಗಡ ನಡುಗುತ, ಪದುಮನಾಭನ ಮುದದಿ
ವಿಧವಿಧ ಸ್ತುತಿಸುತ್ತ ಮುಖವೆತ್ತಿ ಮುದ್ದಾಡಿ, ಚದುರೆ ಸಂತವಿಸಿದಳು ||೨೮||
ತೆರೆದಿದ್ದ ಕುಚ ತೆಗೆದು ಗಮ್ಮನೆ ಎದೆಗೊತ್ತು-ತಧರಾಮೃತವನೆ ಸವಿದು
ಸದಮಲದಿಂದಲಿ ಮದನಕೇಳಿಯೊಳು ಸುಗುಣನೊಳಿರುತಿದ್ದಳು ||೨೯||
ಸೃಷ್ಟಿಗಧಿಕವಾದ ಶೇಷಗಿರಿಯ ವಾಸ, ದಿಟ್ಟ ವೆಂಕಟಮೂರುತಿ
ಸೃಷ್ಟಿಸಿಹ ನಿನ್ನನು ಎನಗಾಗಿ ಪುರಂದರ-ವಿಠಲರಾಯ ಕಾಣೆ ||೩೦||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments