ನಾರಸಿಂಹನೆಂಬೊ ದೇವನು
(ರಾಗ ಸುರಟಿ ಆದಿತಾಳ )
ನಾರಸಿಂಹನೆಂಬೊ ದೇವನು, ನಂಬಿದಂಥ
ನರರಿಗೆಲ್ಲ ವರವ ಕೊಡುವನು ||ಪ ||
ಓಂ ನಮಃ ಶಿವಾಯ ಎನುತಲಿ, ಅಸುರ ತನ್ನ
ಸುತನ ಬರೆದು ತೋರು ಎಂಬಾಗ
ನರಹರಿಯ ನಾಮವನ್ನು ನಗುನಗುತಲೆ ಬರೆಯುತಿರಲು
ಎಡತೊಡೆಯ ಮೇಲೆ ಶಿಶುವ ಧರೆಗೆ ಬಡೆದು ನೂಕಿದನು ||
ಸುತ್ತು ಜನರ ಕರೆಸಿ ಬೇಗದಿ, ಅಸುರ ತನ್ನ
ಸುತನ ಕೊಲ್ಲಿಸಬೇಕೆಂದಾಗ
ಅಟ್ಟ ಅಡವಿಯೊಳ್( ಅಡುಗೆಯೊಳ್?) ವಿಷವನಿಟ್ಟು ಭೋಜನಂಗಳ್ ಮಾಡಿ
ಹರಿಯ ಸ್ಮರಣೆ ಮಾಡುತಲೆ ಕುಂಜಿ ತಿಳಿದ ಜಟ್ಟಿ ಹಾಂಗೆ ||
ಅಂಬುಧಿಯೊಳ್ ಮಗನ ಮಲಗಿಸಿ, ಮೇಲೆ ದೊಡ್ಡ
ಬೆಟ್ಟವನ್ನು ಇಟ್ಟು ಬನ್ನಿರೊ
ಹರಿಯ ಕೃಪೆಗೆ ವಶನಾದ ತರಳನೆಂದು ವರುಣದೇವ
ಮರಣ ಇಲ್ಲದ ಹಾಗೆ ಮಾಡಿ ಮನೆಯ ತೊಟ್ಟು ಕಳುಹಿದನು ||
ಬೆಟ್ಟದಿಂದ ಕಟ್ಟಿ ಉರುಳಿಸಿ, ಅಸುರ ತನ್ನ
ಪಟ್ಟದಾನೆ ಕಾಲಿಲಿ ಮೆಟ್ಟಿಸಿ
ಹರಲು ಮನೆಯ ಮಾಡಿ ಸುಟ್ಟು ಹುಲಿಯ ಬೋನಿನಲ್ಲಿ ಇಟ್ಟು
ಯತ್ನವಿಲ್ಲದೆ ಸುತನ ಕೊಲ್ಲಲಿಕ್ಕೆ ಶಕ್ತನಲ್ಲದೆ ಪೋದನಂತೆ ||
ನಿನ್ನ ದೇವ ಇದ್ದ ಎಡೆಯನು, ತೋರು ಎನುತ
ಪಿತನು ತನ್ನ ಸುತನ ಕೋರಲು
ಎನ್ನ ದೇವ ಇಲ್ಲದಂಥ ಎಡೆಗಳುಂತೆ ಲೋಕದಲಿ
ಕಂಭದಲ್ಲು ಇರುವನೆಂದು ಕೈಯ ಮುಗಿದು ತೋರ್ದನಾಗ ||
ವರ ಕಂಭವನು ಒದೆಯಲು, ನರಹರಿಯು
ಉಗ್ರ ಕೋಪವನ್ನು ತಾಳಿ
ಕಟಕಟೆಂಬ ಧ್ವನಿಯ ಮಾಡಿ ನಖಗಳಿಂದ ಪಿಡಿದು ಒತ್ತಿ
ಕರುಳ ಬಗಿದು ಮಾಲೆ ಹಾಕಿ ಕಂಡ ಭಕ್ತನಪ್ಪಿಕೊಂಡ ||
ಅಂತರಿಕ್ಷದಲ್ಲಿ ಅಮರರು ನೋಡಿ ಆಗ
ಪುಷ್ಪ ವೃಷ್ಟಿಯನ್ನೆ ಕರೆಯಲು
ಅಜನ ಪಡೆದ ದೇವಿ ಬಂದು ತೊಡೆಯ ಮೇಲೆ ಕುಳಿತುಕೊಂಡು
ಅಮರಪತಿಯರೆಲ್ಲ ನೋಡಿ ಅಂಜಬೇಡೆಂಬಭಯ ಕೊಟ್ಟ ||
ಲಕ್ಷ್ಮೀನಾರಸಿಂಹನ ಚರಿತೆಯ ಉದಯಕಾಲ
ಪಠಿಸುವಂಥ ನರರಿಗೆಲ್ಲ
ಪುತ್ರ ಸಂತಾನಂಗಳಿತ್ತು ಮತ್ತು ಬೇಡಿದ್ಹಾಗೆ ಕೊಟ್ಟು
ಭಕ್ತವತ್ಸಲ ಮುಕ್ತಿ ಕೊಡುವ ಪುರಂದರವಿಠಲರಾಯ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments