ಹೇಳಬಾರದೆ ಬುದ್ಧಿಯ ನಿನ್ನ

ಹೇಳಬಾರದೆ ಬುದ್ಧಿಯ ನಿನ್ನ

( ರಾಗ ಕಲ್ಯಾಣಿ ಅಟತಾಳ) ಹೇಳಬಾರದೆ ಬುದ್ಧಿಯ, ನಿನ್ನ ಮಗನ ಊರುಗೂಳಿಯ ಮಾಡಿದೇವೆ ||ಪ|| ಓಣೋಣಿಗುಂಟೆ ವಾರಿಗೆಯರ ಕೂಡಿ ಗೋವಳೇರ ಕೇರಿ ಹಾಳು ಮಾಡುತಿದ್ದಾನೆ ||ಅ|| ಅಟ್ಟದ ಮೇಲಿಟ್ಟ ಚಿಟ್ಟೆಗೆ ಹಾಲಲಿ ಬೊಟ್ಟನಿಕ್ಕಿ ಚೀಪುವ ದುಷ್ಟತನ ಮಾಡಬೇಡವಯ್ಯ ಎನ್ನೆ ಕಷ್ಟವೇನೆನುತಲಿ ಮುದ್ದಿಟ್ಟು ಓಡಿದ || ಮೊಸರ ಶೋಧಿಸುತಿರಲು ಬಂದು ಕುಳಿತ ಹಸುಗೂಸು ಎನುತಿದ್ದೇನೆ ಕುಸುಮನಾಭ ತನ್ನ ವಶವಾಗು ಎನುತಲಿ ಮುಸುಕು ತೆಗೆದು ಕುಚ ಹಿಚಿಕಿ ಪೋದನಲ್ಲೆ || ಬೆಣ್ಣೆಯ ಕಂಡರಂತು ಅದರ ರೂಪ ಕಣ್ಣಿಗೆ ತೋರನಲ್ಲ ಸಣ್ಣವನೆಂದು ನಾ ಬಾರೆಂದು ಕರೆದರೆ ಬಣ್ಣಿಸಿ ಮಾತಾಡಿ ಬಾರೆಂದು ಕರೆದನೆ || ಉಡುವ ಸೀರೆಯ ಕಳೆದು ತಡಿಯಲ್ಲಿಟ್ಟು ಮಡುವಿನೊಳು ಮೈ ತೊಳೆಯ ಧಡಧಡ ಬಂದೊಯ್ದು ಕಡಹದ ಮರವೇರಿ ಕೊಡು ಕೃಷ್ಣ ಎನುತಿರೆ ಪಿಡಿ ಜೋಡು ಕೈಯೆಂಬ || ಎಷ್ಟು ಹೇಳಲಿ ಯಶೋದೆ ನಿನಗೆ ಒಂ- ದಿಷ್ಟು ಕರುಣವಿಲ್ಲವೇನೆ ಸೃಷ್ಟಿಗೊಡೆಯ ನಮ್ಮ ಪುರಂದರವಿಠಲನ್ನ ಎಷ್ಟು ಹೇಳಲಿ ಇನ್ನು ಆದ್ದಷ್ಟು ನಿನ್ನ ಮುಂದೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು