ನಿನ್ನ ನಂಬಿದೆ ನೀರಜನಯನ

ನಿನ್ನ ನಂಬಿದೆ ನೀರಜನಯನ

(ರಾಗ ಮೋಹನ ತ್ರಿಪುಟತಾಳ ) ನಿನ್ನ ನಂಬಿದೆ ನೀರಜನಯನ ಎನ್ನ ಪಾಲಿಸೊ ಇಂದಿರಾರಮಣ ||ಪ|| ಮುನ್ನ ಪಾಂಚಾಲಿಯ ಮೊರೆಯ ಲಾಲಿಸಿ ಕಾಯ್ದ ಪನ್ನಗಶಯನ ನೀ ಪರಮ ಪುರುಷನೆಂದು ||ಅ|| ಹರಿ ಸರ್ವೋತ್ತಮನಹುದೆಂಬೊ ಬಾಲಕನ ಹಿರಣ್ಯಕಶಿಪು ಪಿಡಿದು ಬಾಧಿಸಲು ನರಹರಿ ರೂಪದಿಂದವನ ವಕ್ಷವ ಸೀಳ್ದ ವರ ವಿಶ್ವಾತ್ಮಕನಹುದೆಂದು ನಾ ಧೃಢವಾಗಿ || ಪಾದವ ಪಿಡಿದು ನೀರೊಳಗೆಳೆವ ನಕ್ರನ ಬಾಧೆ ತಾಳದೆ ಕರಿ ಮೊರೆಯಿಡಲು ಆದಿಮೂರುತಿ ಚಕ್ರದಿ ನಕ್ರನ ಕೊಂದ ವೇದಾಂತವೇದ್ಯ ಅನಾಥ ರಕ್ಷಕನೆಂದು || ಇಳೆಯೊಡೆಯನ ತೊಡೆಗೆ ನೀನರ್ಹನಲ್ಲೆಂದು ಲಲನೆ ಕೈ ಪಿಡಿದೆಳೆಯಲು ಕಂದನ ನಳಿನಾಕ್ಷ ನಿನ್ನ ಮೊರೆಯ ಹೊಕ್ಕು ತಪಿಸಲು ಒಲಿದು ಧ್ರುವಗೆ ನಿಜಲೋಕವಿತ್ತವನೆಂದು || ಸುದತಿ ಗೌತಮ ಸತಿ ಮುನಿ ಶಾಪದಿಂದಲಿ ಒದಗಿ ಪಾಷಾಣರೂಪದಲಿರಲು ಪದರಜದಿಂದಲಿ ಸತಿಯ ಮಾಡಿದ ಯೋಗಿ ಹೃದಯಭೂಷಣ ನಿನ್ನ ಪಾದಮಹಿಮೆಯ ಕಂಡು || ಪರಮ ಪಾವನೆ ಜಗದೇಕ ಮಾತೆಯನು ದುರುಳ ರಾವಣನು ಕದ್ದೊಯ್ದಿರಲು ಶರಣೆಂದು ವಿಭೀಷಣ ಚರಣಕೆರಗಲಾಗಿ ಸ್ಥಿರಪಟ್ಟವನು ಕೊಟ್ಟ ಪರಮಾತ್ಮನಹುದೆಂದು || ಅಂಬರೀಷನೆಂಬ ನೃಪ ದ್ವಾದಶಿ ವ್ರತ ಸಂಭ್ರಮದಿ ಹರಿಗರ್ಪಿಸಲು ದೊಂಬಿ ಮಾಡಿ ದೂರ್ವಾಸ ಶಪಿಸಲಾಗಿ ಬೆಂಬಿಡದಲೆ ಚಕ್ರದಿಂದ ಕಾಯ್ದವನೆಂದು || ಧರೆಯೊಳು ನಿನ್ನ ಮಹಿಮೆಯ ಪೊಗಳುವರೆ ಸರಸಿಜೋದ್ಭವ ಶೇಷರಿಗರಿದು ಸ್ಮರಣೆ ಮಾತ್ರದಿ ಅಜಾಮಿಳಗೆ ಮುಕ್ತಿಯನಿತ್ತ ಪುರಂದರವಿಠಲ ನೀ ಜಗದೀಶನೆಂದು ||
ದಾಸ ಸಾಹಿತ್ಯ ಪ್ರಕಾರ
ಬರೆದವರು