ಹುಚ್ಚು ಕುನ್ನಿ ಮನವೇ ನೀ
( ರಾಗ ಶಂಕರಾಭರಣ ಆದಿ ತಾಳ)
ಹುಚ್ಚು ಕುನ್ನಿ ಮನವೇ ನೀ , ಹುಚ್ಚುಗೊಂಬುದು ಘನವೆ
ಕಚ್ಚುಕದನತನವ ಬಿಟ್ಟು , ಅಚ್ಯುತನ ಪಾದ ಮುಟ್ಟು ||ಪ||
ಸ್ನಾನ ಮಾಡಿದರೇನು, ಸಂಧ್ಯಾನ ಮಾಡಿದರೇನು
ಹೀನತನವ ಬಿಡಲಿಲ್ಲ ನೀ , ಸ್ವಾನುಭವವ ಕೂಡಲಿಲ್ಲ ||
ಜಪ ಮಾಡಿದರೇನು ನೀ, ತಪ ಮಾಡಿದರೇನು
ಕಪಟ ಕಲ್ಮಷ ಕಳೆಯಲಿಲ್ಲ, ನಿಪುಣತನ ಪಡೆಯಲಿಲ್ಲ ||
ಮೂಗು ಪಿಡಿದರೇನು ನೀ , ಮುಸುಕನಿಕ್ಕಿದರೇನು
ಭೋಗಿಶಯನನ ಭಜಿಸಲಿಲ್ಲ, ಬೇಗ ಪೂಜೆ ಮಾಡಲಿಲ್ಲ ||
ಗುರುವು ನೀನಾದರೇನು ಅತಿ-ಗರುವನಾದಡೇನು
ಗುರುಮಹಿಮೆ ತಿಳಿಯಲಿಲ್ಲ ಗುರೂಪದೇಶವ ಪಡೆಯಲಿಲ್ಲ ||
ಹೋಮ ಮಾಡಿದರೇನು ನೀ, ನೇಮ ಮಾಡಿದರೇನು
ರಾಮನಾಮ ಸ್ಮರಿಸಲಿಲ್ಲ, ರಾ(/ಧಾ?)ಮಪಥವ ಹಿಡಿಯಲಿಲ್ಲ ||
ನವರಂಧ್ರಗಳ ಕಟ್ಟು ನೀ, ನಡೆವ ದಾರಿ ಮುಟ್ಟು
ಕವಿದ ಕಾಮ ಕ್ರೋಧಗಳಟ್ಟು, ರವಿಮಂಡಲ ಮುಟ್ಟು ||
ಏನು ಮಾಡಿದರೇನು ನೀ-ನೆಂತು ಮಾಡಿದರೇನು
ಜ್ಞಾನದಿಂದ ಪುರಂದರವಿಠಲನ, ಧ್ಯಾನಿಸಲಿಲ್ಲ ಮನವೆ ||
( ಎರಡನೇ ಸಾಲಿನಲ್ಲಿರುವ 'ಕಚ್ಚುಕದನತನ' ಮೋಗ್ಲಿಂಗ್ ಸಂಪಾದಿಸಿದ ದಾಸರ ಕೀರ್ತನೆಗಳ ಸಂಗ್ರಹದಲ್ಲಿದೆ . ನಂತರ ಬಂದ ಸಂಗ್ರಹಕಾರರು ಅದನ್ನು ತಪ್ಪಾಗಿ ಕಚ್ಚುಕದತನ ಎಂದು ಗುರುತಿಸಿ , ಚಾಂಚಲ್ಯ ಎಂಬ ಅರ್ಥವನ್ನು ಕೊಟ್ಟಿದ್ದಾರಂತೆ. ಕಚ್ಚುಕದತನ , ಕದತನ ಎಂಬ ಶಬ್ದಗಳು ಕನ್ನಡ ಭಾಷಾಪರಂಪರೆಯಲ್ಲೇ ಇಲ್ಲ ಎನ್ನಲಾಗಿದೆ )
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments