ಹೇಳಬಾರದೆ ಬುದ್ಧಿಯ ಕೃಷ್ಣಯ್ಯಗೆ

ಹೇಳಬಾರದೆ ಬುದ್ಧಿಯ ಕೃಷ್ಣಯ್ಯಗೆ

( ರಾಗ ಘಂಟಾರವ ಏಕ ತಾಳ) ಹೇಳಬಾರದೆ ಬುದ್ಧಿಯ ಕೃಷ್ಣಯ್ಯಗೆ ||ಪ|| ಗಟ್ಯಾಗಿ ಕದವನಿಕ್ಕಿ ನಾವೆಲ್ಲ ಕೊಟ್ಟಿಗೆಯಲೊರಗಿದ್ದೆವು ನಟ್ಟ- ನಡುವಿನಲ್ಲಿದ್ದ ಚಿಕ್ಕ ಮಕ್ಕಳೆಲ್ಲ ಕಟ್ಟಕಡೆಯಲಿಟ್ಟನೆ ಗೋಪ್ಯಮ್ಮ || ಹಾಲುಗಳ್ಳನೆಂದು ನಿನ್ನ ಮಗನ ಹಾದಿಗ್ಹೋಗದಿದ್ದೇವೆ ಹಾಲುಸುಂಕವ ಬೇಡಿ ತೋಳಡ್ಡಗಟ್ಟಿದ ಬಾಳ ಹಾವಳಿಗಾರಮ್ಮ ಗೋಪ್ಯಮ್ಮ || ಮೊಸರುಗಳ್ಳನೆಂದು ನಿನ್ನ ಮಗನ ಪೆಸರುಗೊಳ್ಳೆವೆ ತಾಯೆ ಹೊಸ ಹೆಂಗಳರನಪಹಾಸ್ಯವ ಮಾಡುವ ಹಸುಮಗನಿವನೇನಮ್ಮ ಗೋಪ್ಯಮ್ಮ || ಸರಸರನೆ ಬಂದು ನಿನ್ನ ಮಗನು ಹೊರಸು ಏರಿ ಕುಳಿತು ಪುರುಷರಿಲ್ಲದ ವೇಳ್ಯ ಹವಣಿಸಿ ತಾ ಹೊಂದಿ ಸರಸವಾಡಿದನಮ್ಮ ಗೋಪ್ಯಮ್ಮ || ಬಟ್ಟ ಕುಚದ ಮೇಲೆ ಬೆಟ್ಟನೂರಿ ಮುಟ್ಟಿ ಮುಟ್ಟಿ ನೋಡುತ ಗಟ್ಯಾಗಿ ನಾ ಬೇಗ ಹಿಡಿಯಬೇಕೆಂದರೆ ತಟ್ಟನೆ ಮಾಯವಾದನಮ್ಮ ಗೋಪ್ಯಮ್ಮ || ಚಿಕ್ಕ ಮಕ್ಕಳನೆಲ್ಲ ಹಿಡಿತಂದು ಜುಟ್ಟಿಗೆ ಕಲ್ಲು ಕಟ್ಟಿ ನಕ್ಕು ನಲಿವಾಗ ಹಿಡಿಯಬೇಕೆಂದರೆ ತಕ್ಕೈಸಿಕೊಂಡನಮ್ಮ ಗೋಪ್ಯಮ್ಮ|| ಅಟ್ಟುಳಿ ಘನವಾಗೆ ಈ ಗೋಕುಲ ಬಿಟ್ಟು ಹೋದೇವೆ ತಾಯಿ ಗಟ್ಯಾಗಿ ಈ ಬುದ್ಧಿಯ ಮಾಡದಂತೆ ಈ ಕೃಷ್ಣನ ದಂಡಿಸಮ್ಮ ಗೋಪ್ಯಮ್ಮ || ಆಳಿಗೊಂದೊಂದು ಮಾತ ಹೇಳಿ ನೀವು ಆಡಿಕೊಂಬಿರೆ ಕೃಷ್ಣನನ ಆಳುವ ನಿಮ್ಮ ಗಂಡರಿಗೆ ನಾಚಿಕೆಯಿಲ್ಲ ಗೂಳಿಬಿಟ್ಟಿದೆ ನಿಮ್ಮನು ಸ್ತ್ರೀಯರನು || ಪುಣ್ಯವಂತರೆ ನೀವು ಕೃಷ್ಣನ ನಿತ್ಯ ಕಣ್ಣಿಲಿ ಕಾಣುವಿರಿ ಸಣ್ಣವನೆಂದು ಶ್ರೀ ಪುರಂದರವಿಠಲಗೆ ಅನ್ಯಾಯ ನುಡಿಯದಿರೆ ನಾರಿಯರೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು