ಏಕೆ ಚಿಂತಿಸುವೆ
( ರಾಗ ನೀಲಾಂಬರಿ. ಮಟ್ಟೆ ತಾಳ)
ಏಕೆ ಚಿಂತಿಸುವೆ ಬರಿದೆ ಮರುಳೆ ||ಪ||
ವಿಧಿ ಬರೆದ ವಾಕು ತಪ್ಪದು ಎಂದಿಗೂ ಮರುಳೆ ||ಅ||
ಹುಟ್ಟುವುದಕಿಂತ ಮೊದಲೆ ತಾಯ ಸ್ತನ
ದಿಟ್ಟ ಕ್ಷೀರವನು ಉಂಡು
ತೊಟ್ಟಿಲೊಳು ಮಲಗುವಾಗ ಗಳಿಸಿ ತಂ-
ದಿಟ್ಟು ನೀನುಣುತಿದ್ದೆಯೊ ಮರುಳೆ ||
ಉರಗ ವೃಶ್ಚಿಕ ಪಾವಕ ಕರಿ ನಂಜು
ಅರಸು ಹುಲಿ ಚೋರ ಭಯವು
ಹರಿಯಾಜ್ಞೆಯಿಂದಲೇವೇ ನೀನು ಮಹಾ
ಶರಧಿ ಪೊಕ್ಕರು ಬಿಡದು ಮರುಳೆ ||
ಇಂತು ಸುಖ ದುಃಖಂಗಳಿಗೆ ಸಿಲುಕಿ ನೀ
ಭ್ರಾಂತನಾಗಿ ಕೆಡಲು ಬೇಡ
ಸಂತೋಷದಿಂದರ್ಚಿಸಿ ಪೂಜಿಸು
ಕಂತುಪಿತ ಶ್ರೀ ಪುರಂದರವಿಠಲನ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments