ಬಾರಯ್ಯ ವೆಂಕಟಕೃಷ್ಣ
( ರಾಗ ಶಂಕರಾಭರಣ. ಅಟ ತಾಳ)
ಬಾರಯ್ಯ ವೆಂಕಟಕೃಷ್ಣ ||ಪ||
ಬಾರಯ್ಯ ವೆಂಕಟಕೃಷ್ಣ ನೀನೆನಗೆ
ಧಾರಿಣಿಯೊಳು ನಿನ್ನ ಮೂರುತಿ ತೋರುತ ||ಅ||
ಮನವೆಂಬ ಮಂಟಪವ ನಿನಗೆ ಹಾಕಿ ಎನ್ನ
ತನುವನೊಪ್ಪಿಸಿ ಕೈಯ ಮುಗಿವೆನೈಸೆ
ವನಜಜಭವ ಸುರಮುನಿಗಳು ಭಜಿಸಲು
ಘನಮಹಿಮನೆ ಪಾದಕ್ಕೆರಗಲಿ ಎನ್ನ ಶಿರ||
ಲಿಂಗ ದೇಹವೆಂಬೊ ಪವಳಿ ಶಾಧಾರವ
ಅಂಗವ ನಿನಗೆ ಕಾಣಿಕೆ ಇಡುವೆ
ಮಂಗಳಮೂರುತಿ ಅಂಗನೆಸಹಿತ ಭು-
ಜಂಗಶಯನ ಎನ್ನ ಕಂಗಳಿಗುತ್ಸವವೀಯೊ||
ಉಡಿಗೆಜ್ಜೆ ರಾಗಡಿ ಪೆಂಡೆಗಳಿಂದೊಪ್ಪುವ
ಉಡುವ ಪೀತಾಂಬರ ಕೊರಳ ಕೌಸ್ತುಭ
ದೃಢದಿಂದ ಶಂಖಚಕ್ರ ಕರ್ಣಕುಂಡಲದಿಂದ
ಕಡಲಶಯನ ಎನ್ನ ಹೃದಯದೊಳಗೆ ನಿಲ್ಲೊ ||
ಒಡೆಯ ನೀನೆನಗೆ ಅನಾದಿ ಕಾಲದಿಂದ
ಬಡವನು ನಾ ನಿನ್ನ ದಾಸನು ಸತ್ಯ
ಕಡುಕರುಣದಿಂದ ದಾಸತ್ವ ಬೇಕೊ ಗ-
ರುಡಗಮನ ವೆಂಕಟೇಶ ಎನ್ನ ಮನೆಗೆ||
ಬರಿಮನೆಯಲ್ಲ ಪರಿವಾರ ಉಂಟು
ಪರಮಪುರುಷ ನಿನ್ನ ರೂಪಗಳುಂಟು
ಸಿರಿದೇವಿಸಹಿತವಾಗಿ ಪುರಂದರವಿಠಲ
ಕರುಣದಿಂದಲಿ ಮನಮಂದಿರದೊಳಗೆ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments