ಆರಿದ್ದರೇನಯ್ಯ ನೀನಿಲ್ಲದೆ
ಆರಿದ್ದರೇನಯ್ಯ ನೀನಿಲ್ಲದೆ ||ಪ||
ಕಾರುಣ್ಯನಿಧಿ ಹರಿಯೆ ಕೈಯ ಬಿಡಬೇಡ ||ಅ||
ದುರುಳ ಕೌರವನಂದು ದ್ರುಪದಜೆಯ ಸೀರೆಯನು
ಕರಗಳಿಂ ಸೆಳೆಯುತಿರೆ ಪತಿಗಳೆಲ್ಲ
ಗರ ಹೊಡೆದಂತಿರ್ದರಲ್ಲದೆ ನರಹರಿಯೆ
ಕರುಣಿ ನೀನಲ್ಲದಿನ್ನಾರು ಕಾಯ್ದವರು ||೧||
ಅಂದು ನೆಗಳಿನ ಬಾಧೆಯಿಂದ ಗಜ ಕೂಗಲು
ತಂದೆ ನೀ ವೈಕುಂಠದಿಂದ ಬಂದು
ಇಂದಿರೇಶನೆ ಚಕ್ರದಿಂದ ನಕ್ರನ ಬಾಯ
ಸಂಧಿಯನು ಸೀಳಿ ಕೃಪೆಯಿಂದ ಸಲಹಿದೆಯೊ ||೨||
ಅಜಮಿಳನು ಕುಲಗೆಡಲು ಕಾಲದೂತರು ಬರಲು
ನಿಜಸುತನ ಕರೆಯೆ ನೀನತಿವೇಗದಿ
ತ್ರಿಜಗದೊಡೆಯನೆ ಸಿರಿ ಪುರಂದರವಿಠಲ
ನಿಜದೂತರನು ಕಳುಹಿ ಕಾಯ್ದೆ ಶ್ರೀಹರಿಯೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments