ಲೋಕಕ್ಕೆ ನೀ ತಾಯಿ ಲೋಕಕ್ಕೆ ನೀ ತಂದೆ
(ಕಾಂಬೋದಿ ರಾಗ ಝಂಪೆತಾಳ)
ಲೋಕಕ್ಕೆ ನೀ ತಾಯಿ ಲೋಕಕ್ಕೆ ನೀ ತಂದೆ
ಸಾಕುವಾಕೆಯೆ ನೀನು ಲೋಕಕ್ಕೆ ನೀ ತಾಯಿ ||ಪ||
ಬೇಸರಿಸಿ ಧರಿಸಿದಳು ಜನನಿ ಎನ್ನನು ದಶ -
ಮಾಸಗ್ರಭದೊಳಿದೂ ಬಹಳ ಬಳಲಿದೆನು
ಹೇಸಿಕೆಯ ವಿಣ್ಮೂತ್ರ ರಾಶಿಯೊಳುಗುದಿಸಿದರೆ
ಅಸುರದಿ ಕೈಯೆತ್ತಿ ಪಿಡಿದು ರಕ್ಷಿಸಿದೆ ||೧||
ಮಲಮೂತ್ರ ಮೈಲಿಗೆಯ ಮೈಯೊಳಗೆ ಧರಿಸಿದರು
ತಿಲಮಾತ್ರ ಹೇಸಿದೆಯ ಎನ್ನೊಳಗೆ ನೀನು
ಜಲಜಮುಖಿ ಎನ್ ತಾಯಿ ಎಲೆಯ ಓಗರವಿಟ್ಟು
ತೊಳೆದ ಹಸ್ತದಿ ಎನಗೆ ಕೊಲೆ(?)ಯನಿಕ್ಕಿದಳು ||೨||
ಮಗುವೆಂದು ಯೋಚಿಸದೆ ಉಗುಳುತ್ತ ಎಂಜಲನು
ಒಗೆದು ಬೀಸಾಡಿದಳು ಎಡದ ಹಸ್ತದಲಿ
ಜಗಳವಾಡಲು ಪಿತನು ಮಗನ ಮೋಹದ ಮೇಲೆ
ತೆಗೆಯಬಾರದೆ ಮಲವನೆಂದು ಜರೆದಪಳು ||೩||
ಪಡೆದ ತಾಯ್ತಂದೆಗಳು ಅಡಗಿ ಹೋದರು
ಎನ್ನ ಬಿಡದೆ ಸಲಹಿದೆ ನೀನು ಪೊಡವಿ ದೇವತೆಯೆ
ಕಡೆಗಾಲದೊಳು ಕೈಯ ಪಿಡಿದು ರಕ್ಷಿಸೆನ್ನ
ಒಡಲ ದುಃಖವ ನೋಡಿ ನುಡಿಯದಿರಬಹುದೆ ||೪||
ಬಲವಾಗಿ ಕೈವಿಡಿದೆ ವರಾಹತಿಮ್ಮಪ್ಪಗೆ
ಗೆಲವಿಂದ ಭೂರಮಣನೆನಿಸಿ ಮೆರೆವ
ಜಲಜನಾಭನೆ ಎನ್ನ ಪಿತನು ಮಾತೆಯು ನೀನು
ಸುಲಭದೊಳು ಮೈದೋರು ಫಲಿತವಹ ಪದವ ||೫||
-- ರಚನೆ ನೆಕ್ಕರ ಕೃಷ್ಣದಾಸರು
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments