ನರಸಿಂಹ ಪಾಹೀ ಲಕ್ಷ್ಮೀನರಸಿಂಹ
( ಕೃತಿಕಾರರು - ಜಗನ್ನಾಥದಾಸರು)
ರಾಗ ಶಂಕರಾಭರಣ (ದುರ್ಗಾ) ಅಟತಾಳ )
ನರಸಿಂಹ ಪಾಹೀ ಲಕ್ಷ್ಮೀನರಸಿಂಹ ||ಪ||
ನರಸಿಂಹ ನಮಿಪೆ ನಾ ನಿನ್ನ , ಚಾರು-
ಚರಣ ಕಮಲಕೆ ನೀನೆನ್ನ , ಆಹಾ
ಕರವ ಪಿಡಿದು ನಿಜಶರಣನೆಂದೆನಿಸು ಭಾ-
ಸುರ ಕರುಣಾಂಬುಧೆ ಗರುಡವಾಹನ ಲಕ್ಷ್ಮೀ- ||ಅ.ಪ.||
ತರಳ ಪ್ರಹ್ಲಾದನ ನುಡಿಯ ಕೇಳಿ
ತ್ವರಿತದಿ ಬಂದೆ ಎನ್ನೊಡೆಯ, ಏನು
ಕರುಣಾಳೊ , ಭಕ್ತರ ಭಿಡೆಯ ಮೀರ-
ಲರಿಯೆನೆಂದೆಂದು ಕೆಂಗಿಡಿಯ ಆಹಾ
ಭರದಿಂದುಗುಳುತ ಬೊಬ್ಬಿರಿದು ಬೆಂಬೊತ್ತಿ ಕ-
ರ್ಬುರ ಕಶಿಪುವಿನ ಮುಂಗುರುಳು ಪಿಡಿದೆ ಲಕ್ಷ್ಮೀ- ||೧||
ಪ್ರಳಯಾಂಬುನಿಧಿ ಘನ ಘೋಷದಂತೆ
ಘುಳಿಘುಳಿಸುತಲಿ ಪ್ರದೋಷಕಾಲ
ತಿಳಿದು ದೈತ್ಯನ ಅತಿರೋಷದಿಂದ-
ಪ್ಪಳಿಸಿ ಮೇದಿನಿಗೆ ನಿರ್ದೋಷ ಆಹಾ
ಸೆಳೆಸೆಳೆಯುತ ಚರ್ಮಸುಲಿದು ಕೆನ್ನೆತ್ತರೋ-
ಕುಳಿಯನಾಡಿದೆ ದಿಶಾವಳಿಗಳೊಳಗೆ ಲಕ್ಷ್ಮೀ - ||೨||
ಕ್ರೂರ ದೈತ್ಯನ ತೋರ ಕರುಳ , ತೆಗೆ-
ದ್ಹಾರ ಮಾಡಿದೆ ನಿಜ ಕೊರಳ ಕಂಡು
ವಾರಿಜಾಸನ ಮುಖ್ಯರರಳ ಪುಷ್ಪ
ಧಾರೆಗರೆದರ್ವೇಗ ತರಳ , ಆಹಾ
ಧೀರ ಪ್ರಹ್ಲಾದಗೆ ತೋರಿ ತ್ವದಂಘ್ರಿ ಸ-
ರೋರುಹವನು ಕಾಯ್ದೆ ಕಾರುಣ್ಯನಿಧಿ ಲಕ್ಷ್ಮೀ - ||೩||
ಜಯ ಜಯ ದೇವವರೇಣ್ಯ ಮಹ -
ದ್ಭಯನಿವಾರಣ ಅಗ್ರಗಣ್ಯ ಗುಣ -
ತ್ರಯದೂರ ದುರಿತಾರಣ್ಯ ಧನಂ
ಜಯ ಜಗದೇಕಶರಣ್ಯ , ಆಹಾ
ಲಯವಿವರ್ಜಿತ ಲೋಕತ್ರಯ ವ್ಯಾಪ್ತ ನಿಜಭಕ್ತ
ಪ್ರಿಯ ಘೋರ ಭಯಹರ ದಯಮಾಡೆನ್ನನು ಲಕ್ಷ್ಮೀ- ||೪||
ಕುಟಿಲ ದ್ವೇಶದವ ನೀನಲ್ಲ , ನಿನ್ನಾ-
ರ್ಭಟಕಂಜಿದರು ಸುರರೆಲ್ಲ ನರ-
ನಟನೆ ತೋರಿದೆ ಲಕ್ಷ್ಮೀನಲ್ಲ , ಇದು
ಸಟೆಯಲ್ಲ ಅಪ್ರತಿಮಲ್ಲ ಆಹಾ
ವತಪತ್ರ ಶಯನ ಧೂರ್ಜಟಿವಂದ್ಯ ಜಗನ್ನಾಥ -
ವಿಠಲ ಕೃತಾಂಜಲಿಪುಟದಿ ಬೇಡುವೆ ಲಕ್ಷ್ಮೀ - ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments