ಕೇಶವ ಮಾಧವ ಗೋವಿಂದ ವಿಠಲೆಂಬ ದಾಸಯ್ಯ ಬಂದ ಕಾಣೆ
ಕೇಶವ ಮಾಧವ ಗೋವಿಂದ ವಿಠಲೆಂಬ ದಾಸಯ್ಯ ಬಂದ ಕಾಣೆ ||ಪ||
ದೋಷರಹಿತ ನರವೇಷವ ಧರಿಸಿದ ದಾಸಯ್ಯ ಬಂದ ಕಾಣೆ ||ಅ||
ಖಳನು ವೇದವನೊಯ್ಯೆ ಪೊಳೆವ ಕಾಯನಾದ ದಾಸಯ್ಯ ಬಂದ ಕಾಣೆ
ಘಳಿಲನೆ ಕೂರ್ಮ ತಾನಾಗಿ ಗಿರಿಯ ಪೊತ್ತ ದಾಸಯ್ಯ ಬಂದ ಕಾಣೆ
ಇಳೆಯ ಕದ್ದಸುರನ ಕೋರೆದಾಡಿಲಿ ಕೊಂದ ದಾಸಯ್ಯ ಬಂದ ಕಾಣೆ ||
ಛಲದಿ ಕಂಭದಿ ಬಂದು ಅಸುರನ ಸೀಳಿದ ದಾಸಯ್ಯ ಬಂದ ಕಾಣೆ
ಬಲಿಯ ದಾನವ ಬೇಡಿ ನೆಲನ ಅಳೆದು ನಿಂದ ದಾಸಯ್ಯ ಬಂದ ಕಾಣೆ
ಲಲನೆಯನೊಯ್ಯೆ ತಾ ತಲೆಹತ್ತನ ಕೊಂದ ದಾಸಯ್ಯ ಬಂದ ಕಾಣೆ
ನೆಲಕೊತ್ತಿ ಕಂಸನ ಬಲವ ಸಂಹರಿಸಿದ ದಾಸಯ್ಯ ಬಂದ ಕಾಣೆ ||
ಪುಂಡತನದಿ ಪೋಗಿ ಪುರವನುರುಪಿ ಬಂದ ದಾಸಯ್ಯ ಬಂದ ಕಾಣೆ
ಲಂಡರ ಸದೆಯಲು ತುರಗವನೇರಿದ ದಾಸಯ್ಯ ಬಂದ ಕಾಣೆ
ಹಿಂಡುವೇದಗಳೆಲ್ಲ ಅರಸಿ ನೋಡಲು ಸಿಗದ ದಾಸಯ್ಯ ಬಂದ ಕಾಣೆ
ಪಾಂಡುರಂಗ ನಮ್ಮ ಪುರಂದರವಿಠಲ ದಾಸಯ್ಯ ಬಂದ ಕಾಣೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments