ಕಾಗೆ ಕೂಗಿತಲ್ಲ ಈಗ
(ರಾಗ ಪೂರ್ವಿ ಅಟತಾಳ)
ಕಾಗೆ ಕೂಗಿತಲ್ಲ, ಈಗ ಒಂದು ಕಾಗೆ ಕೂಗಿತಲ್ಲ ||ಪ||
ಎಲ್ಲರೇಳದ ಮುನ್ನ ಗುಲ್ಲು ಮಾಡುತಲೆದ್ದು
ಚೆಲ್ಲಿದ ಧನಧಾನ್ಯವ ಮೆಲ್ಲುತ
ಮಲ್ಲಿಗೆ ಮುಡಿಯವರು ಮರೆದೊರಗಲು ಬೇಡಿ
ಫುಲ್ಲನಾಭನ ಪೂಜಾಸಮಯವಿದೆಂದು ||
ಯಾರು ಏಳದ ಮುನ್ನ ಓರಂತೆ ತಾನೆದ್ದು
ಕೇರಿಕೇರಿಯಲಿ ಸಂಚರಿಸುತ
ಓರೆ ಮೋರೆಯ ಮೂರು ಕಡೆಗೆ ತಿರುಗಿಸುತ್ತ
ಊರಿಂದ ಬರುವ ನೆಂಟರು ಪೇಳ್ವ ||
ಪಿತೃಗಳ ಕಾರ್ಯಕೆ ಅಗತ್ಯವಾಗೋದು
ಹತವಾದವರ ಕಾಂಕ್ಷಾ ತಿಳಿಸುವುದು
ಅತಿಹೇಯವಸ್ತು ಈ ಕಾಗೆಯೆನಲು ಬೇಡಿ
ಹಿತವಾದ ಶಕುನವ ನುಡಿವುದೀ ಕಾಗೆ ||
ಕಷ್ಟವ ಇಷ್ಟವನಿಷ್ಟವ ಸಾರುತ್ತ
ಸೃಷ್ಟಿಸಂಪದವ ಕೈಗೂಡಿಸುತ್ತ
ಶ್ರೇಷ್ಠ ಬ್ರಾಹ್ಮರ ಬಲಿಹರಣವ ತಿಂದು
ಪಟ್ಟಸಾಲೆ ಮೇಲೆ ಕೂಗುವ ಕಾಗೆ ||
ಮಂಗಳಮಹಿಮಗೆ ಮಹಲಕ್ಷ್ಮೀಯರಸಗೆ
ಹಿಂಗದೆ ಮಾನವಪ್ರಿಯನಿಗೆ
ಗಂಗೆಯ ಪಿತ ಶ್ರೀಪುರಂದರವಿಠಲನ್ನ
ಸಿಂಗಾರದ ಪೂಜೆಸಮಯವೆಂದು ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments