ಕರುಣಿಸು ನರಹರಿ ಹರಿಗೋವಿಂದ

ಕರುಣಿಸು ನರಹರಿ ಹರಿಗೋವಿಂದ

(ರಾಗ ಧನಶ್ರೀ ಆದಿತಾಳ) ಕರುಣಿಸು ನರಹರಿ ಹರಿಗೋವಿಂದ ನರಜನರಿಗೆ ಮೆಚ್ಚಿ ಸಲಹೋ ಮುಕುಂದ ||ಪ|| ಮಾತುಗಳಾಡದೆ ಮೌನದಿಂದಿದ್ದರೆ ಭೂತ ಬಡೆದವನೆಂದು ಕರೆಯುವರೊ ಚಾತುರ್ಯದಿಂದಲಿ ಮಾತುಗಳಾಡಲು ಪಿತ್ತೇರಿ ಬಲು ಬಾಯಿಬಡಕನೆಂಬುವರಯ್ಯ || ಬಲು ಚೆನ್ನಿಗತನವ ತಾನು ಮಾಡಲು ಬಲು ಹಮ್ಮಿಗನೆಂದು ಬೈಯುವರೊ ಸುಲಭದಿಂದಲಿ ನಿಗರ್ವಿಯಾಗಿದ್ದರೆ ಕಲಿಯುಗದಲಿ ಮಂದಮತಿಯೆಂಬುವರಯ್ಯ || ಮಡಿಯೆಂದು ನೇಮವ ಮಾಡುತಲಿದ್ದರೆ ಮಡಿಯವನೆಂದು ಬೈಯುವರಯ್ಯ ಮಡಿನೇಮ ಜಪತಪವ ಬಿಟ್ಟು ತಿರುಗಲಾಗಿ ನಡತೆಹೀನನೆಂದು ನಿಂದಿಸುತಿಹರೊ || ನಿಷ್ಠೆಲಿ ಒಪ್ಪತ್ತೂಟವನುಂಡರೆ ನಿಷ್ಠೆಯತನ ಸುಟ್ಟಿತೆಂಬೋರು ಘಟ್ಟ್ಯಾಗಿ ಎರಡು ಮೂರು ಬಾರಿ ಉಂಡರೆ ಹೊಟ್ಟೆಹೊರಕನೆಂದು ಬೈಯುವರಯ್ಯ || ನರಲೋಕದೊಳಿನ್ನು ಪುಟ್ಟಿಸದಿರು , ನಿನ್ನ ಮೊರೆಯ ಹೊಕ್ಕೆನೊ ಮೋಕ್ಷದಾಯಕನೆ ಅರವಿಂದನಯನ ಶ್ರೀಪುರಂದರವಿಠಲ ಕರುಣದಿಂದಲಿ ನೀ ರಕ್ಷಿಸೊ ಎನ್ನ ||
ದಾಸ ಸಾಹಿತ್ಯ ಪ್ರಕಾರ
ಬರೆದವರು