ಕರೆದು ಭಿಕ್ಷೆಯ ನೀಡೆ

ಕರೆದು ಭಿಕ್ಷೆಯ ನೀಡೆ

(ರಾಗ ಆರಭಿ ಅಟತಾಳ) ಕರೆದು ಭಿಕ್ಷೆಯ ನೀಡೆ , ಗೋಪ್ಯಮ್ಮ ನಿಮ್ಮ ತರಳ ಗೋಪಾಲನಿಗೆ ||ಪ|| ಅಂಗೈಯ ತಾವರೆಯು , ಹೊಳೆವ ಮುಂಗೈಯ ಸರಪಣಿಯು ಅಂಗಳದೊಳಗೆ ನಲಿನಲಿದಾಡುತ ಮಂಗಳಚರಣಂಗಳ ಚೆಲುವಗೆ || ಅಂಬೆಗಾಲಿಡುವವಗೆ , ಮುಂಗುರಳಲಿ ಅರಳೋಲೆ ಮಾಗಾಯಿ ತುಂಬಿಗುರುಳಿನ ಸಂಭ್ರಮ ತರಳಗೆ ಹಂಬಲದಿಂದಲಿ ಸತಿಯೆ ಶ್ರೀಕೃಷ್ಣಗೆ || ದಟ್ಟಡಿಯ ಇಡುವವಗೆ , ಮೆಲ್ಲಡಿಗಳ ಬಿಟ್ಟುಬಿಡುವವಗೆ ಮುಟ್ಟಬೇಡೆಂದರೆ ಮುದ್ದುಕೊಡುವೆನೆಂಬ ದಿಟ್ಟರಿಗತಿಮುದ್ದು ದಿಟ್ಟಗೋಪಾಲಗೆ || ಕಿಣಿಕಿಣಿಕಿಣಿಯೆನುತ ಮಣಿ ಕಿಂ- ಕಿಣಿಗಳು ಹೊಳೆವುತಿರೆ ಕುಣಿಕುಣಿದು ನಿಟ್ಟಿಪ ಬಾಲಗೆ ದಣಿಯದ ತೆರದಿ ಸತಿಯೆ ಶ್ರೀಕೃಷ್ಣಗೆ || ಶೇಷಗಿರಿ ಮೇಲೆ , ತಾ ಬಲು ವಾಸವಾಗಿಹ ಕಾಣೆ ಸಾಸಿರನಾಮದ ಪುರಂದರವಿಠಲನ ನೀಸಲು ದೊರಿತು ಸತಿಯೆ ಶ್ರೀಕೃಷ್ಣಗೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು