ಈಸಲಾರೆನೆ ಈ ಸಂಸಾರದಲಿ
(ರಾಗ ನಾದನಾಮಕ್ರಿಯೆ )
ಈಸಲಾರೆನೆ ಈ ಸಂಸಾರದಲಿ, ಲೇಸು ಕಾಣೆನೆ ಇದರಲ್ಲಿ
ಹೇ ಸಖಿಯೆ ಕೇಳೆ ||ಪ||
ಅತ್ತಿಗೆಯರು ಅತಿವ್ಯಭಿಚಾರಿಗಳಮ್ಮ , ಎಡೆ ಬಿಡದೆ ಎನ್ನ
ಸುತ್ತಮುತ್ತ ಕಾದಿಹರೆ ನೋಡಮ್ಮ , ಅವರಂತೆ ಎನ್ನ
ಚಿತ್ತದಲಿ ತಿಳಿದಿಹರೆ ಕೇಳಮ್ಮ , ಇವರೆಲ್ಲರ ಹಮ್ಮು
ಒತ್ತಿ ಆಳುವರಿಲ್ಲೇ ದುಷ್ಕರ್ಮ , ಜೊತೆ ಹಾಕಿದ ಬ್ರಹ್ಮ ||
ದುರುಳರಾರ್ವರು ಭಾವಮೈದುನರೆ , ಇನ್ನೆಂಟು ಮಂದಿ
ಕೊರಳ ಕೊಯ್ವ ಮಲಮಕ್ಕಳು ಇರುತಾರೆ , ಇನ್ಹತ್ತು ಮಂದಿ
ನೆರೆಯ ಕೂಡಿ ಕರಕರೆಯ ಮಾಡುವರೆ , ನಾ ವಿವರಿಸಲಾರೆ
ಸರಿಬಾರದ ಒಗತನ ಹಗರಣವೆ , ಹೇ ಸಖಿಯ ಕೇಳೆ ||
ಮಾವನೆಂಬುವನು ಮಾದಿಗನಂತಿಹನೆ , ನಾ ಮಾಡಲಿನ್ನೇನೆ
ಝಾವಝಾವಕೆ ನೋವನು ನುಡಿಯುವನೆ , ಬಹು ತಾಮಸಿ ಕಾಣೆ
ಠಾವು ಕದಲದೆ ಕುಳಿತಿಪ್ಪನು ಜಾಣೆ , ಬೈದರೆ ಫಲವೇನೆ
ಆವಬಗೆಯಲಿ ಎನಗೆ ಸುಖ ಕಾಣೆ , ಹೇ ಸಖಿಯೆ ಕೇಳೆ ||
ಪತಿಯಾದರೆ ಪರದೇಶಿಯಂತಿಹನೆ , ಒಂದರೆಘಳಿಗಾದರು
ಜೊತೆಯಲ್ಲಿದ್ದು ಮಾತಾಡುವ ಸುಖ ಕಾಣೆ , ಇವರೆಲ್ಲರ ತಪ್ಪಿಸಿ
ಸುತರ ಪಡೆವ ಸುಖವಿಲ್ಲೆ ನಿನ್ನಾಣೆ , ಮತಿದೋರದೆ ಎನಗೆ
ನುತಿಸುವೆ ಬೇಗದಿ ಪತಿಯೊಳು ನೀ ಪೇಳೆ , ಹೇ ಸಖಿಯೆ ಕೇಳೆ ||
ಕೋಪವು ಬಹಳ ಕುಲಗೇಡಿ ಅತ್ತೆಗೆ , ನಾ ಮಾಡಲಿನ್ನೇನೆ
ಪಾಪಕ್ಕಂಜುವಳು ಪೂರೈಸಳು ಕೊನೆಗೆ , ಬಹುಪಾಪಿ ಕಾಣೆ
ತಾಪಸರೆಂದರೆ ಆಗದು ಇವಳಿಗೆ , ಅವಿವೇಕಿ ಈಕೆ
ಶ್ರೀಪತಿ ಪುರಂದರವಿಠಲಗೆ ನೀ ಪೇಳೆ , ಹೇ ಸಖಿಯೆ ಕೇಳೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments