ಇಷ್ಟು ಪಾಪವ ಮಾಡಿದ್ದೆ ಸಾಕು
(ರಾಗ ಕಾಂಭೋಜ ಝಂಪೆ ತಾಳ )
ಇಷ್ಟು ಪಾಪವ ಮಾಡಿದ್ದೆ ಸಾಕು ||ಪ||
ಸೃಷ್ಟೀಶನೆ ಎನ್ನ ಉದ್ಧರಿಸಬೇಕು ||ಅ||
ಒಡಲ ಕಿಚ್ಚಿಗೆ ಪರರ ಕಡುನೋಯಿಸಿದೆ
ಕೊಡದೆ ಅನ್ಯರ ಋಣವನಪಹರಿಸಿದೆ
ಮಡದಿಯ ನುಡಿ ಕೇಳಿ ಒಡಹುಟ್ಟಿದವರೊಡನೆ
ಹಡೆದ ತಾಯಿಯ ಕೂಡೆ ಹಗೆ ಮಾಡಿದೆ ||
ಸ್ನಾನ ಸಂಧ್ಯಾದಿಗಳ ಮಾಡದಲೆ ಮೈಗೆಟ್ಟೆ
ಜ್ಞಾನಮಾರ್ಗವನಂತು ಮೊದಲೆ ಬಿಟ್ಟೆ
ಏನ ಹೇಳಲಿ ಪರರ ನಾರಿಗೆ ಮನಸಿಟ್ಟೆ
ಶ್ವಾನಸೂಕರನಂತೆ ಹೊರೆದೆ ಹೊಟ್ಟೆ ||
ವ್ರತನೇಮ ಉಪವಾಸ ಒಂದು ದಿನ ಮಾಡಲಿಲ್ಲ
ಅತಿಥಿಗಳಿಗನ್ನವನು ನೀಡಲಿಲ್ಲ
ಶ್ರುತಿಶಾಸ್ತ್ರ ಪುರಾಣ ಕಥೆಗಳನು ಕೇಳಲಿಲ್ಲ
ವೃಥವಾಗಿ ಬಹುಕಾಲ ಗತವಾಯಿತಲ್ಲ ||
ಶುದ್ಧವೈಷ್ಣವಕುಲದಲುದ್ಭವಿಸಿದೆ ನಾನು
ಮಧ್ವಮತಸಿದ್ಧಾಂತಪದ್ಧತಿಗಳ
ಬುದ್ಧಿಪೂರ್ವಕ ತಿಳಿದು ಕದ್ದುಂಡು ಕಾಯವನು
ವೃದ್ಧಿಮಾಡಿದೆನಯ್ಯ ಉದ್ಧರಿಸು ಹರಿಯೆ ||
ತಂದೆತಾಯಿಯ ಸೇವೆಯೊಂದು ದಿನ ಮಾಡಲಿಲ್ಲ
ಮಂದಭಾಗ್ಯಗೆ ಬವಣೆ ತಪ್ಪಲಿಲ್ಲ
ಹಿಂದೆ ಮಾಡಿದ ದೋಷ ಒಂದುಳಿಯದರುಹಿದೆನೊ
ತಂದೆ ಪುರಂದರವಿಠಲ ಬಂದೆನ್ನ ಸಲಹೊ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments