ಇದಕೊಳ್ಳಿ ಭವರೋಗಕೌಷಧವನು
( ರಾಗ ಕಾಂಭೋಜ ಝಂಪೆ ತಾಳ)
ಇದಕೊಳ್ಳಿ ಭವರೋಗಕೌಷಧವನು ||ಪ||
ಇಂದ್ರಿಯವಜೈಸುವುದೆ ಇದಕೆ ಇಚ್ಛಾಪಥ್ಯ ||ಅ||
ವಾಸುದೇವನ ನಾಮ ವಾತವಿಧ್ವಂಸಿನಿ
ಜನಾರ್ದನನ ನಾಮ ಜ್ವರಾಂಕುಶ
ಮಾಧವನ ನಾಮವೇ ಮನಗಂಡ ಮಂಡೂರ
ಮಂಗಳಾತ್ಮಕ ನಾಮ ಮಾಲ್ಯವಸಂತ ||
ಚಿಂತಾಯಕನ ನಾಮ ತ್ರೈಲೋಕ್ಯ ಚಿಂತಾಮಣಿ
ಭುಜಗಶಯನನ ನಾಮ ಭೂಪತಿಮಾತ್ರೆ
ರಾಜೀವಲೋಚನನ ನಾಮ ರಸಕರ್ಪೂರ
ಸೀತಾಪತಿಯ ನಾಮ ದಿವ್ಯ ಸಿಂಧೂರ ||
ನಾರಾಯಣನ ನಾಮ ದಿವ್ಯ ತಾಮ್ರಭಸ್ಮ
ಲೋಕದೊಡೆಯನ ನಾಮ ಲೋಹಭಸ್ಮ
ವೈಕುಂಠಪತಿಯೆಂಬ ವಂಗಭಸ್ಮವ ಕೊಳ್ಳಿ
ಶ್ರೀನಿವಾಸನ ನಾಮ ಸ್ವರ್ಣಭಸ್ಮ ||
ರಾಮಚಂದ್ರನೆಂಬ ಪೂರ್ಣಚಂದ್ರೋದಯವು
ಕೃಷ್ಣಕೃಷ್ಣನೆಂಬ ಶ್ಲೇಷ್ಮಕುಠಾರ
ವಾರಿಜಾಂಬಕನೆಂಬ ವಸಂತಕುಸುಮಾಕರ
ಕಮಲನಾಭನೆಂಬ ಕರ್ಣಚೂರ್ಣವಿದಕೊ ||
ಇದನು ಕೊಂಡವರ ಪೆಸರನು ಪೇಳುವೆನು ಕೇಳಿ
ಮುದದಿ ಪ್ರಹ್ಲಾದ ಮುಚುಕುಂದ ಧ್ರುವನು
ಸದಮಲೆ ದ್ರೌಪದಿಯು ಅಜಮಿಳನು ಬದುಕಿದರು
ಪದುಮಾಕ್ಷ ಪುರಂದರವಿಠಲನೆಂಬೌಷಧವ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments