ಯಾರಿಗೆ ಮಾಡ್ತಿ ಮ್ಯಾ

ಯಾರಿಗೆ ಮಾಡ್ತಿ ಮ್ಯಾ

( ರಾಗ ಪೂರ್ವಿ. ಅಟ ತಾಳ) ಯಾರಿಗೆ ಮಾಡ್ತಿ ಮ್ಯಾ, ಸಂಪದ ಯಾರಿಗೆ ಮಾಡ್ತಿ ಮ್ಯಾ ನಾರಾಯಣನೆಂಬ ನಿಜಪದವರಿಯದೆ ಹೋರಾಡುವೆ ಹಗಲಿರುಳೆಂದೆನ್ನದೆ ||ಪ|| ನಾರಿಯು ನಿನಗಿಹಳೆ, ಹುಟ್ಟಿದ ಪೋರನು ನಿನಗಿಹನೆ ಭಾರಿಯೊಡವೆಯುಂಟೆ ನಿನಗೀ ಊರಜನರು ನೆಂಟೆ | ದಾರಿಯು ತಪ್ಪಿದವರಂದದಿ ನೀ ಸೇರಬೇಡ ಭವ ಘೋರ ನರಕದೊಳು || ದೊರೆಗಳ ದಯ ನಿಜವೆ, ಗಂಟಿಕ್ಕಿರುವ ಧನವು ಬಲವೆ ಬರಿಬಯಕೆಯ ಭಾಗ್ಯ ಇದೆಲ್ಲ , ಹರಿಯ ನೆನೆಯಯೋಗ್ಯ ಒರೆಯದೆ ಮತಿಯೊಳಗರಿತಜ್ಞಾನವ ತೊರೆದಾತ್ಮ ಜ್ಞಾನದೊಳಿರದೆ || ಅಂಟಿಕೊಂಡು ನಿನ್ನ ಸೇರಿದ ಎಂಟು ಮದವು ಮುನ್ನ ಕಂಠಕವಾದುದನ ಅರಿತುಕೊ ತುಂಟತನವು ಜತನ ಸುಂಟರಗಾಳಿಯೆಂದದಿ ಹಾರಿಪ್ಪ ವೈಕುಂಠಪತಿ ನೆನೆದು ಕೃಪೆಯ ಪಡೆಯದೆ || ತಂದೆತಾಯ್ಗಳಾರು ನಿನಗೀ ಬಂಧುಬಳಗ ಯಾರು ಹಿಂದಣತಮ್ಮಂದಿರ ಜತೆಗಳದಂದಣ ಬಹುದೂರ ಒಂದರೊಳೊಂದು ವಿಚಾರಿಸಿ ನೋಡದೆ ತಂದೆ ಪುರಂದರವಿಠಲನ ಭಜಿಸದೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು