ಸುಮ್ಮನಿರು ಸುಮ್ಮನಿರು
( ರಾಗ ಕಾಂಭೋಜ. ಝಂಪೆ ತಾಳ)
ಸುಮ್ಮನಿರು ಸುಮ್ಮನಿರು ಬೇಡಿಕೊಂಬೆ ||ಪ||
ಈ ಮಹಿಯೊಳತಿಶಯದ ಗುಮ್ಮ ಬಂದಿದಕೋ ||ಅ||
ಐದು ಮುಖ ಮತ್ತೆ ಮೂರೈದು ಕಣ್ಣುಗಳಿಂದ
ಐದು ಮುಖದೊಳಗ್ನಿಕಿಡಿ ಉದುರಿಸಿ
ಐದೆರಡು ತೋಳುಗಳ ನೀಡಿ ಒಲಿದಾಡಿಸುತ
ಐದುಬಾಣನ ಗೆದ್ದ ಗುಮ್ಮ ಬಂದಿದಕೋ ||
ಬಾಲಚಂದ್ರನ ಪೊತ್ತುಕೊಂಡು ತ್ರಿಶೂಲದ
ಮೇಲೆ ಹೆಣಗಳ ಚುಚ್ಚಿ ಒಲಿದಾಡುತ
ಕಾಲಭೈರವನ ಕಾವಲನಿರಿಸಿ ಮರುಳುಗಳ
ಓಲಗದಿ ತಲೆಬಾಗಿಲಲಿ ಬಂದನಿದಕೋ ||
ಮುದಿ ಎತ್ತನೇರಿ ಮೈಯೊಳು ಬೂದಿಯನು ಪೂಸಿ
ಮದನಾರಿಯೆಂಬಂಥ ಬಲು ಭೂತವು
ಹೃದಯದಲಿ ನಿನ್ನ ನೋಡುವೆನೆಂಬ ಧ್ಯಾನದಲಿ
ಒದಗಿ ಬಂದೈದಾನೆ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments