ಗುರು ರಾಘವೇಂದ್ರರ ಚರಣ ಕಮಲವನ್ನು ಸ್ಮಸುವ ಮನುಜಗೆ

ಗುರು ರಾಘವೇಂದ್ರರ ಚರಣ ಕಮಲವನ್ನು ಸ್ಮಸುವ ಮನುಜಗೆ

ರಾಗ - ಧನ್ಯಾಶ್ರೀ : ತಾಳ - ಏಕತಾಳ ಗುರು ರಾಘವೇಂದ್ರರ ಚರಣ ಕಮಲವನ್ನು ಸ್ಮಸುವ ಮನುಜಗೆ | ಪ | ಕರೆಕರೆಗೊಳಿಸುವ ದುರಿತ ದುಷ್ಕೃತವೆಲ್ಲ ಕರಿಯು ಕಂಡ ಸಿಂಹನ ತೆರನಾಗುವುದಯ್ಯ | ಅ ಪ | ಗುರುಮಧ್ವಮತವೆಂಬ ವರ ಕ್ಷೀರಾಂಬುಧಿಯಲ್ಲಿ ಹರಿ ಧರಿಸಿದ ಶಶಿಯಂತುದಿಸಿ | ಪರಮತ ತಿಮಿರಕ್ಕೆ ತರಣಿಕಿರಣನೆನೆಸಿ ಪಿರಿದುಮೆರೆವ ಸಿರಿರಾಮನರ್ಚಕರಾದ | ೧ | ಹರಿಯೆ ಸರ್ವೋತ್ತಮ ಸಿರಿಯು ಆತನ ರಾಣಿ | ಪರಮೇಷ್ಟಿ ಮರುತರೆ ಗುರುಗಳೆಂದು | ಗರುಡಶೇಷರುದ್ರ ಸಮರೆಂದು ಸ್ಥಾಪಿಸಿ | ಸ್ಥಿರ ತಾರತಮ್ಯ ಪಂಚಭೇದ ಸತ್ಯವೆಂಬ | ೨ | ಅಂಧಕಗೆ ಚಕ್ಷು ವಂದ್ಯರಿಗೆ ಸುರತರು | ಬಂದಬಂದವರಭೀಷ್ಟಗಳನಿತ್ತು | ಒಂದಾರುನೂರುವತ್ಸರ ವೃಂದಾವನದಲ್ಲಿ | ಚೆಂದಾಗಿ ನಿಂದು ಮೆರೆವ ಕೃಪಾಸಿಂಧು |೩ | ರಾ ಎನ್ನೆ ದುರಿತರಾಶಿಗಳ ದಹಿಸುವ | ಘ ಎನ್ನೆ ಘನಜ್ಞಾನ ಭಕುತಿ ಈವ | ವೇಂ ಎನ್ನೆ ವೇಗದಿ ಜನನಮರಣ ದೂರ | ದ್ರ ಎನ್ನೆ ದ್ರವಿಣಾರ್ಥ ಶ್ರುತಿ ಪ್ರತಿಪಾದ್ಯನ ಕಾಂಬ | ೪ | ವರ ತುಂಗಾತೀರ ಮಂತ್ರಾಲಯ ಪುರದಲ್ಲಿ | ಪರಿಪರಿ ಸೇವೆ ಭೂಸುರರಿಂದ ಕೊಳುತ | ಸಿರಿಯರಮಣ ನಮ್ಮ ಗೋಪಾಲವಿಟ್ಠಲನ | ಚರಣ ಸೇವಿಸುತಿಪ್ಪ ಗುರುಶಿಖಾಮಣಿಯಾದ | ೫ |
ದಾಸ ಸಾಹಿತ್ಯ ಪ್ರಕಾರ
ಬರೆದವರು