ಕನಸುಕಂಡೆನೆ ಮನದಲ್ಲಿ

ಕನಸುಕಂಡೆನೆ ಮನದಲ್ಲಿ

ರಾಗ ದ್ವಿಜಾನಂತಿ/ಅಟ್ಟ ತಾಳ ಕನಸುಕಂಡೆನೆ ಮನದಲ್ಲಿ ಕಳವಳಗೊಂಡೆನೆ ಏನು ಹೇಳಲಿ ತಂಗಿ ತಿಮ್ಮಯ್ಯನ ಪಾದವನು ಕಂಡೆ || ಪಲ್ಲವಿ || ಪೊನ್ನದ ಕಡಗನಿಟ್ಟು ತಿಮ್ಮಯ್ಯ ತಾ ಪೋಲ್ವ ನಾಮವ ಇಟ್ಟು ಅಂದುಗೆ ಘಲುಗೆನ್ನುತ ಎನ ಮುಂದೆ ಬಂದು ನಿಂತಿದ್ದನಲ್ಲೆ || ೧ || ಮಕರಕುಂಡಲವನಿಟ್ಟು ತಿಮ್ಮಯ್ಯ ತಾ ಕಸ್ತೂರಿ ತಿಲಕವನಿಟ್ಟು ಗೆಜ್ಜೆ ಘಲುಗೆನುತ ಸ್ವಾಮಿ ತಾ ಬಂದು ನಿಂತಿದ್ದನಲ್ಲೆ || ೨ || ಮುತ್ತಿನ ಪಲ್ಲಕ್ಕಿ ಯತಿಗಳು ಹೊತ್ತು ನಿಂತಿದ್ದರಲ್ಲೆ ಛತ್ರ ಚಾಮರದಿಂದ ರಂಗಯ್ಯನ ಉತ್ಸವ ಮೂರುತಿಯ || ೩ || ತಾಮರ ಕಮಲದಲಿ ಕೃಷ್ಣಯ್ಯ ತಾ ಬಂದು ನಿಂತಿದ್ದನಲ್ಲೆ ವಾಯು ಬೊಮ್ಮಾದಿಗಳು ರಂಗಯ್ಯನ ಸೇವೆಯ ಮಾಡುವರೆ || ೪ || ನವರತ್ನ ಕೆತ್ತಿಸಿದ ಸ್ವಾಮಿ ಎನ್ನ ಹೃದಯಮಂಟಪದಲ್ಲಿ ಸರ್ವಾಭರಣದಿಂದ ಪುರಂದರವಿಠಲನ ಕೂಡಿದೇನೆ || ೫ || ~~~*~~~ ಪೊನ್ನದ - ಹೊನ್ನಿನ, ಬಂಗಾರದ. ಪೋಲ್ವ - ಪೊಳೆವ, ಹೊಳೆಯುವ. ಬೊಮ್ಮಾದಿಗಳು - ಬ್ರಹ್ಮನೇ ಮೊದಲಾದ ದೇವತೆಗಳು. [ಪುರಂದರ ಸಾಹಿತ್ಯ ದರ್ಶನ - ಭಾಗ ೧]
ದಾಸ ಸಾಹಿತ್ಯ ಪ್ರಕಾರ
ಬರೆದವರು