ಎನ್ನ ಬಿಂಬ ಮೂರುತಿಯ ಪೂಜಿಸುವೆ
ರಾಗ - ಕಾಂಬೋದಿ
ತಾಳ - ಝಂಪೆ
ಎನ್ನ ಬಿಂಬ ಮೂರುತಿಯ ಪೂಜಿಸುವೆ ನಾನು|
ಮನಮುಟ್ಟಿ ಅನುದಿನದಿ ಮರೆಯದೇ ಜನರೇ||
ಗಾತ್ರವೇ ಮಂದಿರ ಹೃದಯವೇ ಮಂಟಪ |
ಸೂತ್ರವೇ ಮಹದ್ದೀಪ ಹಸ್ತ ಚಾಮರವು ||
ಯಾತ್ರೆ ಪ್ರದಕ್ಷಿಣೆ ಶಯನ ನಮಸ್ಕಾರ |
ಶಾಸ್ತ್ರ ಮಾತುಗಳೆಲ್ಲ ಮಂತ್ರಂಗಳು ||೧||
ನುಡಿದ ಶಬ್ದಗಳೆಲ್ಲ ಪುಷ್ಪಂಗಳಾದವು|
ನಡೆದುದೆಲ್ಲವೂ ಮಹಾನಾಟ್ಯಂಗಳು ||
ಉಡುವ ಹೊದ್ದಿಕೆ ಎಲ್ಲಾ ವಿಚಿತ್ರವಾದ ವಸ್ತ್ರ|
ತೊಡುವ ಭೂಷಣವೆಲ್ಲ ಶ್ರೀಹರಿಗೆ ಆಭರಣ ||೨||
ಧರಿಸಿದ ಗಂಧವೇ ಚರಣಕ್ಕೆ ಗಂಧವು|
ಶಿರದಲ್ಲಿ ಮುಡಿದ ಪುಷ್ಪದ ಮಾಲೆ ||
ಸ್ಥಿರವಾಗಿ ಕೂಡಿದ ಬುದ್ದಿಯೇ ಆರತಿ |
ಅರಿತೊಡಲಿಗೆ ಉಂಬ ಬನ್ನವೇ ನೈವೇದ್ಯ ||೩||
ಎನ್ನ ಸ್ವರೂಪವೆಂಬುದೆ ರನ್ನದ ಕನ್ನಡಿ |
ಎನ್ನ ಮನೋವೃತ್ತಿಯೆಂಬುದೇ ಛತ್ರಿಕೆ ||
ಇನ್ನು ನುಡಿವ ಹರಿನಾಮಾಮೃತವೇ ತೀರ್ಥ |
ಎನ್ನ ಮನವೆಂಬುದೇ ಸಿಂಹಾಸನ ||೪||
ಅನ್ಯ ದೇವತೆ ಯಾಕೆ ಅನ್ಯ ಪ್ರತಿಮೆ ಯಾಕೆ |
ಅನ್ಯವಾದ ಮಂತ್ರತಂತ್ರವೇಕೆ ||
ಎನ್ನಲ್ಲಿ ಭರಿತ ಸಾಧನೆಗಳು ಇರುತಿರಲು |
ಚೆನ್ನಾಗಿ ಶ್ರೀ ಕೃಷ್ಣಸ್ವಾಮಿಯ ಪೂಜಿಸುವೆ ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ
- Log in to post comments