ಪುರಂದರದಾಸ

Compositions of Purandara dasa

ಅಂಬೆಗಾಲಿಕ್ಕುತ ಬಂದ ಗೋವಿಂದ

ಅಂಬೆಗಾಲಿಕ್ಕುತ ಬಂದ ಗೋವಿಂದ ||ಪ|| ಅಂಬುಜನಾಭ ದಯದಿಂದ ಎನ್ನಮನೆಗೆ ||ಅ.ಪ|| ಜಲಚರ ಜಲವಾಸ ಧರಣೀಧರ ಮೃಗರೂಪ ನೆಲನಳೆದು ಮೂರಡಿ ಮಾಡಿ ಬಂದ ಕುಲನಾಶ ವನಮಾಸ ನವನೀತ ಚೋರನಿವ ಲಲನೆಯರ ವ್ರತಭಂಗ ವಾಹನತುರಂಗ ||೧|| ಕಣ್ಣ ಬಿಡುವನು ತನ್ನ ಬೆನ್ನು ತಗ್ಗಿಸುವನು ಮಣ್ಣು ಕೆದರಿ ಕೋರೆ ಬಾಯ ತೆರೆದು ಚಿಣ್ಣ ಭಾರ್ಗವ ಲಕ್ಷ್ಮಣಣ್ಣ ಬೆಣ್ಣೆಯ ಕಳ್ಳ ಮಾನವ ಬಿಟ್ಟು ಕುದುರೆಯನೇರಿದ ||೨|| ನೀರ ಪೊಕ್ಕನು ಗಿರಿಯ ನೆಗಹಿ ಧರಣಿಯ ತಂದು ನರಮೃಗ ಬಲಿಬಂಧ ಕೊರಳುಗೊಯಿಕ ಶರ ಮುರಿದೊರಳೆಳೆದು ನಿರವಾಣಿ ಹಯಹತ್ತಿ ಪುರಂದರವಿಠಲ ತಾ ಬಂದ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಎಚ್ಚರಿಕೆ ಭಾಗ್ಯ ಯಾರಿಗೂ ಸ್ಥಿರವಿಲ್ಲ

( ರಾಗ - ಸೌರಾಷ್ಟ್ರ ಅಷ್ಟತಾಳ) ಎಚ್ಚರಿಕೆ ಭಾಗ್ಯ ಯಾರಿಗೂ ಸ್ಥಿರವಿಲ್ಲ, ನಿಶ್ಚಯವೆಚ್ಚರಿಕೆ ಹೆಚ್ಚದೆ ಹಿಗ್ಗದೆ ಇದ್ದರೆ ಲೋಕಕೆ ಮೆಚ್ಚು ಕೇಳೆಚ್ಚರಿಕೆ ||ಪ|| ದೊರೆಗಳೊಲುಮೆ ಉಂಟೆಂದು ಎಲ್ಲರೊಳು ಹಗೆ ತರವಲ್ಲ, ಎಚ್ಚರಿಕೆ ಕರವ ಮುಗಿದು ಸಜ್ಜನರಿಗೆ ಶಿರ ಬಾಗಿ ನಡೆಯುವುದು, ಎಚ್ಚರಿಕೆ ||೧|| ಸಿರಿಯೆಂಬ ಸೊಡರಿಗೆ ಮಾನದ ಅಭಿಮಾನ ಬಿರುಗಾಳಿ, ಎಚ್ಚರಿಕೆ ಧರೆಯೊಳಗೆ ಸುಸ್ಥಿರವೆಂದು ಗರ್ವದೊಳು ನಡೆಯದಿರು ಎಚ್ಚರಿಕೆ ||೨|| ಕೊಡವ ಅಂಧಕ ಹೊತ್ತು ನಡೆವಧಿಕಾರದಿ ನೆರೆ ತಪ್ಪುದೆಚ್ಚರಿಕೆ ಬಡವರೆಡರ ಕೇಳದೆ ಮುಂದಕೆ ಹೆಜ್ಜೆ ಇಡಬೇಡ , ಎಚ್ಚರಿಕೆ ||೩|| ಲೋಕಾಪವಾದಕೆ ಅಂಜಿ ನಡೆಯುವುದು ವಿವೇಕ , ಕೇಳೆಚ್ಚರಿಕೆ ನಾಕೇಶನಾದರು ಬಿಡದಪವಾದ ಪರಾಕು , ಕೇಳೆಚ್ಚರಿಕೆ||೪||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸರಿಯು ಮಿಗಿಲುಂಟೆ ಲೋಕದಲ್ಲಿ

(ರಾಗ ಮುಖಾರಿ ಝಂಪೆತಾಳ) ಸರಿಯು ಮಿಗಿಲುಂಟೆ ಲೋಕದಲ್ಲಿ ಹರಿಭಕ್ತಿಯೆಂಬ ಮಾತೆಯ ಮಕ್ಕಳೆಲ್ಲರ್ಗೆ ||ಪ|| ಒಂದು ದೇಹವು ಎಂಬ ಮನೆಯೊಳಗೆ ಸರ್ವರೂ ಬಂದು ಸಾಲಾಗಿ ಕುಳಿತಿರ್ದ ಬಳಿಕ ಚಂದವಾದೈದಿಂದ್ರಿಯಂಗಳೆಂಬಂಗುಲಿಗ- ಳಿಂದ ವಿಷಯಂಗಳನು ಉಂಡು ತೊಳೆದರ್ಗೆ ||೧|| ಮಡದಿ ಮಕ್ಕಳು ಎಂಬ ಹಾಳು ಗುಡಿಯನು ಸೇರಿ ತಡೆಯದೇ ಚೆಂಡು ಬುಗುರಿಯನು ಆಡಿ ಓಡಿ ಆಡುತ ಚಿಣ್ಣ ಕೋಲುಗಳನಾಡುತ್ತ ದೂಡಿ ಸರ್ವಾಟದಿಂ ತೊಲಗಿದವರಿಂಗೆ ||೨|| ಆರುವೈರಿಗಳನ್ನು ಅರ್ತಿಯಿಂದಲಿ ಗೆದ್ದು ಒರ್ವರೊರ್ವರು ಕೂಡಿ ಕುಣಿದಾಡುತ ಸೇರಿ ಒಂದೇ ಮಾರ್ಗವನು ಬಿಡದೈತಪ್ಪ ಧೀರ ವೈಕುಂಠಪತಿ ದಾಸರೆಲ್ಲರ್ಗೆ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಭಂಡನಾದೆನು ನಾನು ಸಂಸಾರದಿ

(ರಾಗ ಮುಖಾರಿ ಝಂಪೆತಾಳ) ಭಂಡನಾದೆನು ನಾನು ಸಂಸಾರದಿ ಕಂಡು ಕಾಣದ ಹಾಗೆ ಇರಬಹುದೆ ನರಹರಿಯೆ ||ಪ|| ಕಂಡಕಲ್ಲುಗಳಿಗೆ ಕೈಮುಗಿದು ಸಾಕಾದೆ ದಿಂಡೆಕಾರರ ಮನೆಗೆ ಬಲು ತಿರುಗಿದೆ ಶುಂಡಾಲನಂತೆನ್ನ ಮತಿ ಮಂದವಾಯಿತೈ ಪುಂಡರೀಕಾಕ್ಷ ನೀ ಕರುಣಿಸೈ ಬೇಗ ||೧|| ನಾನಾ ವ್ರತಂಗಳನು ನಾ ಮಾಡಿ ಬಳಲಿದೆನು ಏನಾದರೂ ಎನಗೆ ಫಲವಿಲ್ಲವು ಆ ನಾಡು ಈ ನಾಡು ಸುತ್ತಿ ನಾ ಮರುಳಾದೆ ನೀನಾದರೂ ಕೃಪೆಯ ಇಡು ಬೇಗ ಹರಿಯೆ ||೨|| ಬುದ್ಧಿಹೀನರ ಮಾತು ಕೇಳಿ ನಾ ಮರುಳಾದೆ ಶುದ್ಧಿಯಿಲ್ಲದೆ ಮನವು ಕೆಟ್ಟು ಹೋಯ್ತು ಸಿದ್ಧನುತ ಸಿರಿಪುರಂದರವಿಠ್ಠಲ ತತ್ಪದ- ಸಿದ್ಧಿಯನು ದಯಗೈದು ಉಳುಹು ನೀ ಎನ್ನ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಯಾಕೆ ಈ ದೇಹವನು ದಂಡಿಸುವೆ ವ್ಯರ್ಥ

( ರಾಗ ಮುಖಾರಿ ಝಂಪೆ ತಾಳ) ಯಾಕೆ ಈ ದೇಹವನು ದಂಡಿಸುವೆ ವ್ಯರ್ಥ, ಬಿಡ- ದೇಕಚಿತ್ತದಲಿ ಲಕ್ಷ್ಮೀಪತಿ ಎನ್ನದೆ ||ಪ|| ಸ್ನಾನವನು ಮಾಡಿ ನೀ ಧ್ಯಾನಿಸುವೆನೆಂದೆನುತ ಮೌನದಲಿ ಕುಳಿತು ಬಕಪಕ್ಷಿಯಂತೆ ಹೀನ ಬುದ್ಧಿಗಳ ಯೋಚಿಸಿ ಕುಳಿತು ಫಲವೇನು ದಾನವಾಂತಕನ ಧ್ಯಾನಕೆ ಮೌನವುಂಟೆ ||೧|| ಜಪವ ಮಾಡುವೆನೆನುತ ಕಪಟ ಬುದ್ಧಿಯ ಗುಣಿಸಿ ಗುಪಿತದಿಂದಲಿ ಕುಳಿತು ಫಲವು ಏನೊ ಅಪರಿಮಿತ ಮಹಿಮ ನಾರಾಯಣಾ ಎಂದೆನಲು ಸಫಲವಲ್ಲದೆ ಬೇರೆ ಜಪವು ತಾನುಂಟೆ ||೨|| ಹಿಂದಜಾಮಿಳಗೆ ನಾಮಮಾತ್ರದಿ ಮುಕುತಿಯನು ಚಂದದಿಂ ಕರುಣಿಸಿದುದಿಲ್ಲವೇನೊ ಸಂದೇಹವನು ಬಿಟ್ಟು ನೀನೊಂದು ಕ್ಷಣ ಬಿಡದೆ ತಂದೆ ಪುರಂದರ ವಿಠ್ಠಲ ಎನು ಕಂಡ್ಯ ಮನವೆ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ರಕ್ಷಿಸು ಲೋಕನಾಯಕನೇ ಎನ್ನನು

(ರಾಗ ನೀಲಾಂಬರಿ ಅಷ್ಟ ತಾಳ) ರಕ್ಷಿಸು ಲೋಕನಾಯಕನೇ ಎನ್ನನು ರಕ್ಷಿಸು ಲೋಕನಾಯಕನೇ ||ಪ|| ಎಷ್ಟೆಷ್ಟು ಜನ್ಮವ ಕಳೆದೆನೊ, ಇ- ನ್ನೆಷ್ಟೆಷ್ಟು ಜನ್ಮವ ಪಡೆವೆನೊ ಕಷ್ಟಪಡಲಾರೆ ಕೃಷ್ಣ ಕೃಪೆಯಿಟ್ಟು ಇಷ್ಟವ ಪಾಲಿಸೊ ಇಭರಾಜವರದನೆ ||೧|| ಬಾಲತನದಲಿ ಬಹು ಬೆಂದೆನೈ, ನಾ ಲೀಲೆಯಿಂದಲಿ ಕಾಲ ಕಳೆದೆನು ಲೋಲಲೋಚನ ಎನ್ನ್ ಮೊರೆ ಕೇಳುತಾ ಬೇಗ ಜಾಲವ ಮಾಡದೆ ಪಾಲಿಸೈ ನರಹರಿ ||೨|| ಮುದುಕನಾಗಿ ಚಿಂತೆ ಪಡುವೆನು, ನಾ ಕದಡು ದುಃಖವ ಪಡಲಾರೆನು ಸದರವಲ್ಲವು ಶ್ರೀ ಪುರಂದರವಿಠ್ಠಲ ಮುದದಿಂದ ರಕ್ಷಿಸು ಖಗರಾಜಗಮನ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮಾತಿಗೆ (/ತನಗೆ) ಬಾರದ ವಸ್ತು ಎಷ್ಟಿದ್ದರೇನು

( ರಾಗ ಮುಖಾರಿ ಝಂಪೆ ತಾಳ) ಮಾತಿಗೆ (/ ತನಗೆ) ಬಾರದ ವಸ್ತು ಎಷ್ಟಿದ್ದರೇನು, ಹೋ- ತಿನ ಕೊರಳಲ್ಲಿ ಮೊಲೆಯಿದ್ದರೇನು ||ಪ|| ತಾನು ಉಣ್ಣದ ವಸ್ತು ತಾಳದುದ್ದ ಇದ್ದರೇನು ದಾನವಿಲ್ಲದ ಮನೆಯು ಹಿರಿದಾದರೇನು ಹೀನ ಗುಣದವನಿಗೆ ಹಿರಿಯತನ ಬಂದರೇನು ಶ್ವಾನನಾ ಮೊಲೆಯೊಳಗೆ ಹಾಲಿದ್ದರೇನು ||೧|| ವಾದಿಸುವ ಮಗನು ತಾ ವಯ್ಯಾರದಲಿದ್ದರೇನು ಕಾಡುವ ಸ್ತ್ರೀಯು ಸುಂದರಿಯಾದರೇನು ? ಕ್ರೋಧವನು ಮಾಡುವವ ಸಹೋದರನಾದರೇನು ಮಾದಿಗನ ಮನೆಯಲ್ಲಿ ಮದುವ್ಯಾದರೇನು ||೨|| ಹೋಗದೂರಿಗೆ ಹಾದಿಯನು ಕೇಳಿ ಮಾಡುವುದೇನು ಯೋಗಿಯಾದವನೊಡನೆ ಪರಿಹಾಸ್ಯವೇನು ಭೋಗಿ ಶ್ರೀ ಪುರಂದರವಿಠ್ಠಲನ್ನ ನೆನೆಯದವ ಯೋಗಿಯಾದರೂ ಭೋಗಿಯಾದರೂ ಏನಯ್ಯಾ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಧನವು ಮನವು ಎರಡುಳ್ಳ ಸತ್ಪುರುಷಗೆ

( ರಾಗ ಮುಖಾರಿ ಝಂಪೆತಾಳ) ಧನವು ಮನವು ಎರಡುಳ್ಳ ಸತ್ಪುರುಷಗೆ ಅನುಕೂಲವಾದಂಥ ಸತಿಯು ಇಲ್ಲವಯ್ಯ ||ಪ|| ಬಾಡಿಗೆ ಮನೆಯಂತೆ ಹೋಹ ಜೀವವ ಕಂಡು ಮಾಡುವನು ಸತಿ ಪತಿ ಭೋಗವನು , ಈ ಬೀಡ ಬಿಟ್ಟು ಮತ್ತಾಬೀಡ ಸೇರುವ ನಾಡ ಜೀವವ ನೆಚ್ಚಿ ಕೆಡಬೇಡ ಮನುಜ ||೧|| ನಾಳೆ ಮಾಡುವ ಧರ್ಮ ಇಂದೆ ಗೈಯಲು ಬೇಕು ನಾಳೆ ನೀನ್ಯಾರೋ ಪೇಳೆಲೊ ಮಾನವ ಊಳಿಗದವರು ನೀ ಬಾರೆಂದು ಎಳೆವರು ನಾಳೆ ಮಾಡುವೆನು ಎಂದರೆ ಬಾರದಯ್ಯ ||೨|| ನಿನ್ನ ಕಣ್ಣ ಮುಂದೆ ಹೋಹ ಜೀವವ ಕಂಡು ಇನ್ನು ನಾಚಿಕೆ ಇಲ್ಲವೇನೊ ಮನುಜ ಎನದು ತನದು ಎಂದು ಭೇದವ ಮಾಡುವ ಕುನ್ನಿ ಮನವನು ನೆಚ್ಚಿ ಕೆಡಬೇಡ ಮನುಜ ||೩|| ಒಂದೊಂದು ಪರಿಯಲ್ಲಿ ಬೆಳೆದ ಜೀವವ ಕಂಡು ಮುಂದಾಗೋ ಗತಿಗೆ ಸಾಧನವಿಲ್ಲವು ತಂದೆ ಪುರಂದರವಿಠ್ಠಲನ ಚರಣವ
ದಾಸ ಸಾಹಿತ್ಯ ಪ್ರಕಾರ
ಬರೆದವರು