ಪುರಂದರದಾಸರ ಕೆಲವು ರಚನೆಗಳು - ಡಾ. ಎಮ್.ಎಲ್.ವಸಂತಕುಮಾರಿ ಅವರ ಲೇಖನ

ಪುರಂದರದಾಸರ ಕೆಲವು ರಚನೆಗಳು - ಡಾ. ಎಮ್.ಎಲ್.ವಸಂತಕುಮಾರಿ ಅವರ ಲೇಖನ

( ಪುರಂದರ ದಾಸರ ಕೆಲವು ರಚನೆಗಳ ಬಗ್ಗೆ ಸಂಗೀತ ಕಲಾನಿಧಿ ಡಾ. ಎಂ.ಎಲ್. ವಸಂತಕುಮಾರಿ ಅವರ ಬರಹವೊಂದರ ಕನ್ನಡ ಅನುವಾದ ಇಲ್ಲಿದೆ. -ಹಂಸಾನಂದಿ) ಮೂಲ ತಮಿಳು ಬರಹ: ಡಾ. ಎಮ್.ಎಲ್.ವಿ. ಕನ್ನಡಕ್ಕೆ ತಂದವರು: ಶೈಲಾಸ್ವಾಮಿ ( "ಸಂಗೀತ ಕಲಾನಿಧಿ ಡಾ. ಎಂ.ಎಲ್. ವಸಂತಕುಮಾರಿಯವರ ತಂದೆ ಶ್ರೀಯುತ ಕುಟ್ಟನೂರ್ ಅಯ್ಯಾಸ್ವಾಮಿ ಅಯ್ಯರ್ ಹಾಗೂ ತಾಯಿ ಗಾನಕಲಾಭೂಷಣಿ ಶ್ರೀಮತಿ ಲಲಿತಾಂಗಿಯವರು. ಇವರು ಪುರಂದರದಾಸರ ಪರಂಪರೆಯನ್ನು ತಿಳಿಸುವ ಉತ್ತಮ ಪ್ರತಿಪಾದಕರಾಗಿದ್ದರು. ಪುರಂದರದಾಸರ ಇಂಪಾದ ಲಯಬದ್ಧವಾದ ರಚನೆಗಳನ್ನು 20ನೇ ಶತಮಾನದ ಕರ್ನಾಟಕ ಸಂಗೀತ ಪ್ರಪಂಚದಲ್ಲಿ ಜನಪ್ರಿಯವಾಗುವಂತೆ ಮಾಡುವಲ್ಲಿ ಲಲಿತಾಂಗಿ ಹಾಗೂ ಅವರ ಮಗಳು ಎಮ್.ಎಲ್.ವಸಂತಕುಮಾರಿಯವರು ಸಲ್ಲಿಸಿರುವ ಸೇವೆ ಅಪಾರವಾದುದು. ಎಂ.ಎಲ್.ವಸಂತಕುಮಾರಿ ಮತ್ತು ಅವರ ತಾಯಿಯವರು ನಮಗೆ ನೀಡಿರುವ ಈ ನಿಧಿಯ ವಿಪುಲವಾದ ಉಪಯೋಗವನ್ನು ಇಂದಿನ ಹಲವು ಸಂಗೀತಗಾರರು ಪಡೆಯುತ್ತಿರುವರು. ದಕ್ಷಿಣಭಾರತದ ತಿರುಚಿನಾಪಳ್ಳಿಯಲ್ಲಿ 1969-1972ರ ಅವಧಿಯಲ್ಲಿ ಡಿವಿಜನಲ್ ರೈಲ್ವೇ ಮ್ಯಾನೇಜರ್ ಆಗಿ ನಾನು ಅಧಿಕಾರ ವಹಿಸಿಕೊಂಡಿದ್ದಾಗ ಶ್ರೀರಂಗಂನಲ್ಲಿ ಒಮ್ಮೆ ಪುರಂದರದಾಸರಿಗೆ ಸಂಬಂಧಪಟ್ಟ ಸಮಾರಂಭವೊಂದಕ್ಕೆ ಉದ್ಘಾಟನೆಗಾಗಿ ಆಹ್ವಾನ ಬಂದಿತ್ತು. ನನಗೆ ಪುರಂದರ ದಾಸರ ಜೀವನ ಹಾಗೂ ರಚನೆಗಳ ಪರಿಚಯ ಸಾಕಷ್ಟಿದ್ದರೂ ನಾನು ಎಮ್.ಎಲ್.ವಿ. ಅವರಿಗೆ ಪುರಂದರ ದಾಸರ ಸಂಗೀತದ ತಾಂತ್ರಿಕ ವಿಚಾರಗಳ ಬಗ್ಗೆ ಒಂದು ಟಿಪ್ಪಣಿ ಕಳಿಸುವಂತೆ ಮನವಿ ಮಾಡಿಕೊಂಡೆ. ರೈಲ್ವೇಮಂತ್ರಿಯಾಗಿದ್ದ ದಿವಂಗತ ಕೆ. ಹನುಮಂತಯ್ಯನವರು ಒಮ್ಮೆ ಒಂದು ‘ಡೀಸಲ್ ಲೋಕೋಮೋಟಿವ್ ಶೆಡ್’ನ ಉದ್ಘಾಟನೆಗೆಂದು ತಿರುಚ್ಚಿಗೆ ಬಂದಾಗ ಪುರಂದರದಾಸರ ಕೀರ್ತನೆಗಳನ್ನು ಮಾತ್ರ ಹಾಡುವ ಒಂದು ಉಚಿತ ಕಾರ್ಯಕ್ರಮವನ್ನು ಎಂ.ಎಲ್.ವಿ.ಅವರು ಅಲ್ಲಿ ನೀಡಿದರು. ಆಗ ನಾವು ಅನೇಕ ಜನ ಅಲ್ಲಿ ಉಪಸ್ಥಿತರಿದ್ದೆವು. ಅಂತಹಾ ಉಚಿತ ಕಾರ್ಯಕ್ರಮಗಳು ಅನೇಕ ಅವರು ನೀಡಿರುವುದನ್ನು ನಾನು ಇಲ್ಲಿ ಸ್ಮರಿಸಿಕೊಳ್ಳಬಲ್ಲೆ. ನನ್ನ ಮನವಿ ಮೇರೆಗೆ ಎಂ.ಎಲ್.ವಿಯವರು ಪುರಂದರದಾಸರ ಬಗ್ಗೆ ಕಳಿಸಿದ್ದ ಟಿಪ್ಪಣಿಯನ್ನು ಇಲ್ಲಿ ಕೆಳಗೆ ನಮೂದಿಸಿದ್ದೇನೆ. ಇದು ಮುಂದಿನ ಪೀಳಿಗೆಯ ಸಂಗೀತಗಾರರಿಗೆ, ಸಂಗೀತ ಶಾಸ್ತ್ರಜ್ಞರಿಗೆ ಹಾಗೂ ಎಲ್ಲಾ ಕರ್ನಾಟಕ ಸಂಗೀತ ಪ್ರಿಯರಿಗೆ ಆಸಕ್ತಿ ಹುಟ್ಟಿಸುವ ಟಿಪ್ಪಣಿ ಆಗಬಹುದೆಂಬುದು ನನ್ನ ನಂಬಿಕೆ.” -ಬಿ.ನಟರಾಜನ್ (ಉಪಾದ್ಯಕ್ಷರು, ಕೃಷ್ಣಗಾನಸಭಾ. ಮದ್ರಾಸು) ) ಶ್ರೀ ಪುರಂದರ ದಾಸರ ಕೃತಿಗಳನ್ನು ಒಮ್ಮೆ ಅವಲೋಕಿಸಿ ನೋಡಿದರೆ ಅಲ್ಲಿ ಸಕಲ ಬಗೆಯ ವಿಷಯಗಳನ್ನೂ ಗಮನಿಸಬಹುದು. ಭಕ್ತಿ, ಯೋಗಾಭ್ಯಾಸ, ಶೃಂಗಾರ, ಜ್ಞಾನಮಾರ್ಗ, ಮಾನವ ಜೀವನಕ್ಕೆ ಅನಿವಾರ್ಯವಾದ ತತ್ವಗಳು, ವೇದಾಂತ ಹಾಗೂ ಸಂಗೀತಕ್ಕೆ ಬೇಕಾದ ವಿಚಾರಗಳೆಲ್ಲವನ್ನೂ ಅಲ್ಲಿ ಕಾಣಬಹುದು. ಉದಾಹರಣೆಗೆ ಕೆಲವು ಕೀರ್ತನೆಗಳ ಅರ್ಥಗಳನ್ನು ಬಿಡಿಸಿ ನೋಡೋಣ. “ತಾಳ ಬೇಕು***” ಎಂದು ಪ್ರಾರಂಭವಾಗುವ ಒಂದು ಕೀರ್ತನೆಯ ಅರ್ಥವನ್ನು ಈಗ ನೋಡೋಣ. ಪಲ್ಲವಿ: ತಾಳ ಬೇಕು ತಕ್ಕ ಮೇಳ ಬೇಕು – ಶುದ್ಧಿ ಇರಬೇಕು, ತಿಳಿದು ಹೇಳಲು ಬೇಕು ಅನುಪಲ್ಲವಿ: ಕಳವಳ ಬಿಡಬೇಕು, ಕಲಿಮೋಹ ಇರಬೇಕು ಯತಿಪ್ರಾಸ ಇರಬೇಕು, ಗತಿಗೆ ನಿಲ್ಲಿಸಬೇಕು. ಚರಣ: ರತಿಪತಿ ಪಿತನೊಳು ಅತಿಮೋಹ ಇರಬೇಕು ಹರಿದಾಸನಾಗಲು ಬೇಕು ಹರುಷ ಹೆಚ್ಚಲುಬೇಕು ಪುರಂದರ ವಿಠಲನಲ್ಲಿ ಸ್ಥಿರ ಚಿತ್ತವಿರಬೇಕು. ತಾತ್ಪರ್ಯ:- ತಾಳ ಬೇಕು, ತಕ್ಕ ಮೇಳ ಬೇಕು. ಇಂಪಾದ ಶಾರೀರವಿರಬೇಕು. ತಿಳಿದು ಹಾಡಬೇಕು. ನೆಮ್ಮದಿಯಾದ ಮನಸ್ಸಿನೊಡನೆ ಹಾಡಬೇಕು. ಕಲಿಯುವ ಮೋಹದೊಂದಿಗೆ ಹಾಡಬೇಕು. ಹಾಡುವಾಗ ಮನ್ಮಥ ಜನಕನಾದ ಪರಮಾತ್ಮನಲ್ಲಿ ಅತಿ ಭಕ್ತಿ ಇರಬೇಕು. ಹರಿದಾಸನಾಗಬೇಕು. ಹಾಡುತ್ತಾ ಹಾಡುತ್ತಾ ಸಂತೋಷ ಹೆಚ್ಚಾಗಬೇಕು. ಪುರಂದರ ವಿಠಲನಲ್ಲಿ ಸ್ಥಿರ ಚಿತ್ತವಿರಬೇಕು. ಈ ಹಾಡಿನ ತಾತ್ಪರ್ಯ ಸಂಗೀತಕ್ಕೆ ಬೇಕಾದ ಅಂಶಗಳ ವಿವರಣೆ ನೀಡುತ್ತದೆ. ಇನ್ನೊಂದು ಹಾಡಿನಲ್ಲಿ ಯೋಗಾಭ್ಯಾಸದ ಬಗ್ಗೆ ತಿಳಿಸುತ್ತಾರೆ. ಪಲ್ಲವಿ: ಗುಡಿಗುಡಿಯನು ಸೇದಿ ನೋಡೋ ಸೇದಿ ನೋಡೋ ನಿನ್ನ ಒಡಲ ಪಾಪಂಗಳನೆಲ್ಲಾ ಈಡಾಡೋ ಚರಣಗಳು: 1. ಮನವೆಂಬೋ ಸಂಚಿಯ ಬಿಚ್ಚಿ- ನಿನ್ನ ತಿಂದ ಪಾಪಂಗಳೆಂಬೋ ಭಂಗಿಯ ಕೊಚ್ಚಿ ತನುವೆಂಬೋ ಚಿಲುಮೆಯೊಳಿಕ್ಕಿ ಅಚ್ಯುತನ ಧ್ಯಾನವೆಂದೆಂಬೋ ಬೆಂಕಿಯ ಹಚ್ಚಿ|| 2. ಬುರುಡೆ ಎಂಬೋದು ಈ ಶರೀರ – ನಿನ್ನ ಗುರುಭಕ್ತಿ ಎಂಬೋದೆ ಕೊಳವಿ ಆಕಾರ ಸಿರಿ ನಾರಾಯಣ ಎಂಬೋ ನೀರ – ಅದನರಿತು ತುಂಬಿಸಿಕೊಳ್ಳೋ ಎಲವೋ ಮೋಜುಗಾರ|| 3. ಸಂತಸದಿಂದಮಲು ಏರುವುದು, ದಾರಿದ್ರ್ಯ ದೋಷವು ಸಿಟ್ಟು ಹೊಗೆಯು ಹಾರುವುದು ಬುದ್ಧಿಗೆ ಜ್ಞಾನ ತೋರುವುದು ಗುರು ಮಧ್ವೇಶ ಪುರಂದರ ವಿಠಲನ ತೋರುವುದು|| ತಾತ್ಪರ್ಯ:- ಈ ಹೊಗೆಯನ್ನು ಕುಡಿದು ನೋಡು. ನಿನ್ನ ಶರೀರದಲ್ಲಿರುವ ಪಾಪಗಳನ್ನು ಹೋಗಿಸು. ಮನವೆಂಬ ಸಂಚಿಯ ಬಿಚ್ಚಿ ದಿನದಿನವೂ ಮಾಡಿದ ಪಾಪವೆಂಬ ಭಂಗಿಯ ಕತ್ತರಿಸಿ, ಶರೀರವೆಂಬ ಮಣ್ಣಿನ ತಟ್ಟೆಯಲ್ಲಿ ಹಾಕಿ ಅಚ್ಚುತ ಧ್ಯಾನವೆಂಬ ಬೆಂಕಿಯ ಹಚ್ಚಿ. ಈ ಶರೀರವೆಂಬ ಪಾತ್ರೆಯಿಂದ ಗುರುಭಕ್ತಿ ಎಂಬ ಕೊಳವೆ ಬೆಂಕಿಯ ತಟ್ಟೆಗೆ ಹೋಗುವುದು. ಸಿರಿ ನಾರಾಯಣನೆಂಬ ನೀರನ್ನು ಚೆನ್ನಾಗಿ ಅರಿತು ತುಂಬಿಸು. ಉತ್ಸುಕನಾದ ಮಾನವನೇ, ತಕ್ಷಣವೇ ತಲೆಗೇರುವುದು ಜ್ಞಾನದ ಮದ. ದಾರಿದ್ರ್ಯ ಮುಂತಾದ ದೋಷಗಳು ಕಳೆದು ಪುಳಕವಾಗುವುದು. ಮನಸಿನಲ್ಲಿ ಜ್ಞಾನ ಉದಯಿಸುವುದು. ಗುರು ಮಧ್ವೇಶನಾದ ಪುರಂದರ ವಿಠಲನನ್ನು ತೋರುವುದು. ಅದೇ ರೀತಿ ಮತ್ತೊಂದು ಕೀರ್ತನೆಯಲ್ಲಿ ಕೃಷ್ಣನ ಲೀಲೆಗಳನ್ನು ಶೃಂಗಾರ ಭಾವದಲ್ಲಿ ಹೇಳುತ್ತಾರೆ. ಪಲ್ಲವಿ: ಯಾರ ಮಗನಮ್ಮ ರಂಗಯ್ಯ ಯಾರ ಮಗನಮ್ಮ ದಾರಿಯ ಕಟ್ಟುವ ಯಾರಿಗೂ ಇವನ ದಾರಿಯು ತಿಳಿಯದೇ ಚರಣಗಳು: 1.ಕಾಂತೆ ಕೇಳು ಏಕಾಂತದಿ ಮಲಗಿದ್ದೆ ಕಾಂತನಂತೆ ಏಕಾಂತಕೆ ಕರೆದನೆ ಅರವಿಂದಾನನೆ ಕೇಳು ಅರೆ ಮೊರೆಯಿಲ್ಲದೇ ಅರೆಕಟ್ಟಿ ಎನ್ನ ಅಧರ ಮುದ್ದಿಕ್ಕಿದ. || 2.ಸರಸಿಜಾನನೇ ಕೇಳೇ ಸರಿರಾತ್ರಿ ವೇಳೆಯಲಿ ಹರುಷದಿಂದಲಿ ಎನ್ನ ಸರಸಕೆ ಎಳೆದನೆ ಗಾಡಿಗಾರ ಶ್ರೀ ಪುರಂದರ ವಿಠಲ ಗಾಢಾಲಿಂಗನ ಮಾಡಿ ಓಡಿ ಪೋದನಮ್ಮ|| ನಾ ಹೋಗುವಲ್ಲೆಲ್ಲಾ ಅಡ್ಡಗಟ್ಟುವವನು, ಯಾರೂ ಅರಿಯದಂತೆ ತಾನು ಕಣ್ಮರೆಯಾಗುವ ಇವನು ಯಾರ ಮಗನಮ್ಮ? ಏಕಾಂತದಲ್ಲಿ ಮಲಗಿರುವಾಗ ನನ್ನ ನಾಯಕನ ರೂಪ ಧರಿಸಿ ನನ್ನ ಕರೆಯುವ ಈ ರಂಗಯ್ಯ ಯಾರ ಮಗನಮ್ಮ? ಹೇಳು ತಾಯೆ. ಸದ್ದಿಲ್ಲದಂತೆ ನನ್ನ ಮಾತನ್ನು ಅಲ್ಲಗಳೆದು ಬಲಾತ್ಕಾರದಿಂದ ನನ್ನ ತಬ್ಬಿ ಮುತ್ತಿಟ್ಟ. ಕಮಲದಂತಹಾ ಮುಖವುಳ್ಳವಳೇ ಕೇಳು ನಡು ರಾತ್ರಿಯಲ್ಲಿ ಸಂತಸದಿ ಬಂದು ಸರಸ ಲೀಲೆಗೆ ಬಾ ಎಂದು ನನ್ನೆಳೆದ ಸುಂದರಾಂಗ ಪುರಂದರ ವಿಠಲನು ನನ್ನ ಗಾಢಾಲಿಂಗನ ಮಾಡಿ ಓಡಿ ಹೋದನಮ್ಮ! ಮತ್ತೊಂದು ಕೀರ್ತನೆಯಲ್ಲಿ ಬಗವಂತನಲ್ಲಿ ಮನಸ್ಸನ್ನು ನಿಲ್ಲಿಸಿ ಭಕ್ತಿ ಪೂಜೆ ಸಲ್ಲಿಸಬೇಕೆಂದು ಭಕ್ತಿಯ ಮಹಿಮೆಯ ಬಗ್ಗೆ ತಿಳಿಸುತ್ತಾರೆ. ಪಲ್ಲವಿ: ಮನವ ನಿಲ್ಲಿಸುವುದು ಬಲು ಕಷ್ಟ ಹರಿದಾಡುವಂಥ ಅನುಪಲ್ಲವಿ: ಕಾಶಿಗೆ ಹೋಗಲು ಬಹುದು ದೇಶ ತಿರುಗಲು ಬಹುದು ಆಸೆ ಬಿಟ್ಟಂತೆ ಇರಬಹುದು|| ಚರಣ: ಜಪವ ಮಾಡಲು ಬಹುದು, ತಪವ ಮಾಡಲು ಬಹುದು, ಉಪವಾಸ ವ್ರತದಲ್ಲಿರಬಹುದು ಸ್ನಾನವ ಮಾಡಲು ಬಹುದು, ದಾನವ ಕೊಡಲು ಬಹುದು ಧ್ಯಾನದಿ ಪುರಂದರವಿಠಲನ ಚರಣದಲ್ಲಿ || ಚಂಚಲ ಮನಸ್ಸನ್ನು ಸ್ಥಿರಗೊಳಿಸಿ ನಿಲ್ಲಿಸುವುದು ಕಷ್ಟ. ಕಾಶಿ ಯಾತ್ರೆಗಳು, ದೇಶ ತಿರುಗುವುದು, ಆಸೆಗಳನ್ನು ಬಿಟ್ಟ ಭಾವನೆಯು ಸುಲಭವೇ. ಉಪವಾಸ ವ್ರತ ಅನುಷ್ಠಾನಗಳು, ದಾನ ಮಾಡುವುದು ಮುಂತಾದ ಎಲ್ಲವೂ ಸುಲಭವೇ. ಆದರೆ ಪುರಂದರ ವಿಠಲನ ಪಾದಾರವಿಂದಗಳಲ್ಲಿ ಮನಸ್ಸನ್ನು ಸ್ಥಿರವಾಗಿ ನಿಲ್ಲಿಸುವುದು ಅತಿ ಕಠಿನ. ಹೀಗೆಯೇ ಅತಿ ಉನ್ನತ ತತ್ವಗಳನ್ನು ಪುರಂದರ ದಾಸರ ಎಲ್ಲಾ ಹಾಡುಗಳಲ್ಲಿ ನಾವು ಕಾಣಬಹುದು. ಅವರ ಬಗ್ಗೆ ಹೇಳುವುದೆಂದರೆ ವರ್ಷಗಟ್ಟಳೆ ಮಾತನಾಡುತ್ತಲೇ ಇರಬಹುದು. ================================================================================== ಅನುವಾದಕರ ಟಿಪ್ಪಣಿಗಳು: ***: ತಾಳ ಬೇಕು ತಕ್ಕ ಮೇಳ ಬೇಕು ಎಂಬ ಪದದ ಶುದ್ಧ ಪಾಠ (ಪುಸ್ತಕಗಳ ಪ್ರಕಾರ) ಹೀಗಿದೆ - (ವಸಂತಕುಮಾರಿ ಅವರು ಉದ್ಧರಿಸಿರುವ ಪಾಠದಲ್ಲಿ ಕೆಲವು ಚರಣಗಳ ಬೇರೆ ಬೇರೆ ಪಾದಗಳು ಸೇರಿಕೊಂಡಂತಿದೆ ) ಪಲ್ಲವಿ: ತಾಳ ಬೇಕು| ತಕ್ಕ ಮೇಳ ಬೇಕು|| ಅನುಪಲ್ಲವಿ: ಶಾಂತ ವೇಳೆ ಬೇಕು | ಗಾನವನು ಕೇಳಬೇಕೆಂಬುವರಿಗೆ|| ಚರಣಗಳು: 1.ಯತಿಪ್ರಾಸವಿರಬೇಕು| ಗತಿಗೆ ನಿಲ್ಲಿಸಬೇಕು| ರತಿಪತಿ ಪಿತನೊಳು ಅತಿಪ್ರೇಮವಿರಬೇಕು|| 2.ಗಳ ಶುದ್ಧವಿರಬೇಕು| ತಿಳಿದು ಪೇಳಲು ಬೇಕು| ಕಳವಳ ಬಿಡಬೇಕು ಕಳೆಮುಖವಿರಬೇಕು|| 3.ಅರಿತವರಿರಬೇಕು| ಹರುಷ ಹೆಚ್ಚಲು ಬೇಕು| ಪುರಂದರ ವಿಠಲನ ಪರದೈವವೆನಬೇಕು||